×
Ad

ಪ್ರೇಕ್ಷಕರಿಂದ ಹೊಸ ಪ್ರೇಕ್ಷಕರು ಹುಟ್ಟಬೇಕು: ಡಾ.ನಾ.ದಾ. ಶೆಟ್ಟಿ

Update: 2022-03-11 22:47 IST

ಮಂಗಳೂರು, ಮಾ.11: ನಮ್ಮ ತೆವಲಿಗೆ ನಾಟಕ ಮಾಡುವುದಲ್ಲ. ಅಸಂಗತ ನಾಟಕಗಳು ಎಲ್ಲರನ್ನೂ ತಲಪುವುದೂ ಇಲ್ಲ. ಸಭಿಕರನ್ನು ಕಲಾರಸಿಕರನ್ನು ಮುಟ್ಟುವ ಉದ್ದೇಶದಿಂದ, ಮನರಂಜನೆ ಮತ್ತು ಮಾಹಿತಿ ಪೂರ್ಣವಾದ ನಾಟಕಗಳನ್ನು ಕಟ್ಟಬೇಕು. ಆ ಮೂಲಕ ಪ್ರೇಕ್ಷಕರೇ ಇನ್ನಷ್ಟು ಹೊಸ ಪ್ರೇಕ್ಷಕರನ್ನು ನಾಟಕ ನೋಡಲು ಉತ್ತೇಜಿಸುವಂತಾದರೆ ರಂಗಭೂಮಿ ಬೆಳೆಯುತ್ತದೆ ಎಂದು ಹಿರಿಯ ರಂಗ ನಿರ್ದೇಶಕ, ಕೇಂದ್ರ ಸಾಹಿತ್ಯ ಪ್ರಶಸ್ತಿ ಅಕಾಡಮಿ ಪುರಸ್ಕೃತ ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ ಹೇಳಿದರು.

ಕರ್ನಾಟಕ ನಾಟಕ ಅಕಾಡಮಿ ಮತ್ತು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇದರ ಸಹಯೋಗದಿಂದ ನಗರದ ಕೆನರಾ ಕಾಲೇಜಿನಲ್ಲಿ ನಡೆಸಲಾದ ’ರಂಗ ಚಾವಡಿ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರಾವಳಿ ರಂಗಭೂಮಿಯ ವಿವಿಧ ರಂಗ ಸಂಸ್ಥೆಗಳು, ಏಳು ಬೀಳು, ಇದರ ಸವಾಲುಗಳು, ರಂಗಮಂದಿರ, ಮಕ್ಕಳ ರಂಗಭೂಮಿಯ ಸಾಧ್ಯತೆ ಮತ್ತು ಸಮಸ್ಯೆಗಳು, ಕಾಲೇಜು ರಂಗೋತ್ಸವ, ರಂಗಪಠ್ಯದ ಅವಶ್ಯಕತೆ, ಮುಂತಾದ ವಿಷಯಗಳ ಬಗ್ಗೆ ಡಾ.ನಾ.ದಾ. ಶೆಟ್ಟಿ ಬೆಳಕು ಚೆಲ್ಲಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ.ಮೀನಾಕ್ಷಿ ರಾಮಚಂದ್ರ ರಂಗಭೂಮಿಯನ್ನು ಕಟ್ಟುವುದು ಎಷ್ಟು ಮುಖ್ಯವೋ ಅದನ್ನು ಬೆಳೆಸುವುದೂ ಅಷ್ಟೇ ಮುಖ್ಯ. ರಂಗಭೂಮಿ ನಿರಂತರವಾಗಿ ಇರಬೇಕು ಎಂದರು.

ರಂಗಭೂಮಿಯ ಕಲಾವಿದರಾದ ಪ್ರಕಾಶ್ ಶೆಣೈ, ರತ್ನಾವತಿ ಬೈಕಾಡಿ, ಇಸ್ಮಾಯಿಲ್ ಮುಡಿಪು, ಕಿಣ್ ಕಲಾಂಜಲಿ, ಗೀತ, ಉಜ್ವಲ್ ಕಲಾಭಿ, ಭರತ್‌ರಾಜ್, ಗುರುಪ್ರಸಾದ್, ಸುರೇಶ್ ಬಜ್ಪೆ, ತೃಷಾ ಶೆಟ್ಟಿ ಕಲಾಭಿ, ನ್ಯಾಯವಾದಿ ದೀನಾನಾಥ ಶೆಟ್ಟಿ, ಮೈಮ್ ರಾಮದಾಸ್, ಪ್ರಾಧ್ಯಾಪಕ ಸುಬ್ರಮಣ್ಯ, ಯಶೋದಾ ಕುಮಾರಿ ಸಂವಾದದಲ್ಲಿ ಪಾಲ್ಗೊಂಡಿದ್ದರು.

ರಂಗಕರ್ಮಿ ಶಶಿರಾಜ್ ಕಾವೂರು ಸಂವಾದ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News