×
Ad

ಪುತ್ತೂರು; ಭಜನಾ ಮಂದಿರದಲ್ಲಿ ಎರಡು ತಂಡಗಳ ಮಧ್ಯೆ ಹೊಡೆದಾಟ: ನಾಲ್ವರು ಆಸ್ಪತ್ರೆಗೆ ದಾಖಲು

Update: 2022-03-14 10:42 IST

ಪುತ್ತೂರು: ಭಜನಾ ಮಂದಿರದ ಪರಿಸರ ಸ್ವಚ್ಚತೆ ಮಾಡುತ್ತಿರುವ ಸಂದರ್ಭ ಎರಡು ತಂಡಗಳ ನಡುವೆ ಹೊಡೆದಾಟ ನಡೆದು ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ದೊಡ್ಡಡ್ಕ ಎಂಬಲ್ಲಿ ನಡೆದಿದೆ.

ಭಜನಾ ಮಂದಿರದ ಜಾಗಕ್ಕೆ ಸಂಬಂಧಿಸಿದಂತೆ ಈ ಹೊಡೆದಾಟ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯಲ್ಲಿ ಆರ್ಯಾಪು ಗ್ರಾಮದ ದೊಡ್ಡಡ್ಕ ಕೊಗ್ಗ ಆಚಾರ್ಯ ಎಂಬವರ ಪತ್ನಿ ಸರೋಜಿನಿ (58), ಅವರ ಪುತ್ರ ನಾರಾಯಣ (35), ಇನ್ನೊಂದು ತಂಡದ ದೊಡ್ಡಡ್ಕ ನಿವಾಸಿ ಪೂವಪ್ಪ ನಾಯ್ಕ (44) ಮತ್ತು ಅವರ ಪತ್ನಿ ಪ್ರೇಮಲತಾ (40) ಗಾಯಗೊಂಡವರು.

ಈ ಪೈಕಿ ಸರೋಜಿನಿ ಮತ್ತು ನಾರಾಯಣ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ಪೂವಪ್ಪ ನಾಯ್ಕ ಮತ್ತು ಪ್ರೇಮಲತಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಭಜನಾ ಮಂದಿರವಿರುವ ಜಾಗವು ನಮಗೆ 1991ರಲ್ಲಿ ಅಕ್ರಮ ಸಕ್ರಮ ಮೂಲಕ ಮಂಜೂರುಗೊಂಡಿರುವ ಜಾಗವಾಗಿದ್ದು, ಅದರಲ್ಲಿ ನನ್ನ ತಂದೆಯವರು ಮನೆ ದೇವರಿಗೆ ಸಂಬಂಧಿಸಿ ಭಜನಾ ಮಂದಿರ ನಿರ್ಮಿಸಿ ಅಲ್ಲಿ ಭಜನೆಗಾಗಿ ಊರವರನ್ನು ಸೇರಿಸಿಕೊಳ್ಳುತ್ತಿದ್ದರು. ಬಳಿಕ ಸ್ಥಳೀಯರು ಅಲ್ಲಿ ಭಜನಾ ಸಂಘವನ್ನು ರಚಿಸಿಕೊಂಡು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಜಾಗಕ್ಕೆ ಸಂಬಂಧಿಸಿದಂತೆ ಕೇಸು ದಾಖಲಾಗಿರುತ್ತದೆ. ಅಲ್ಲದೆ ಅಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ನ್ಯಾಯಾಲಯದಿಂದ ಸ್ಟೇ ಆಗಿರುತ್ತದೆ. ಹಾಗಿದ್ದರೂ ಭಜನಾ ಮಂಡಳಿಯವರು ಅಲ್ಲಿ ನಿರಂತರ ಚಟುವಟಿಕೆ ನಡೆಸುತ್ತಿದ್ದು, ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು. ಪೊಲೀಸ್ ಠಾಣೆಯಲ್ಲಿ ಮಂದಿರದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಮುಚ್ಚಳಿಕೆ ಬರೆಸಲಾಗಿದೆ. 

ರವಿವಾರ ಭಜನಾ ಮಂಡಳಿಯ ಪೂವಪ್ಪ ನಾಯ್ಕ, ವೆಂಕಟಕೃಷ್ಣ ಭಟ್, ಜಗದೀಶ ಭಂಡಾರಿ, ರುಕ್ಮಯ ಮೂಲ್ಯ, ಸೇಸಪ್ಪ ನಾಯ್ಕ ಸೇರಿದಂತೆ ಸುಮಾರು 50ಕ್ಕೂ ಅಧಿಕ ಮಂದಿ ಅಲ್ಲಿ ಸೇರಿಕೊಂಡು ಕೆಲಸ ಮಾಡುತ್ತಿದ್ದು, ಈ ಬಗ್ಗೆ ವಿಚಾರಿಸಲು ಹೋದ ನನ್ನ ತಾಯಿಗೆ ಗಂಭೀರ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ ಹುಲ್ಲು ಹೆರೆಯುವ ಯಂತ್ರವನ್ನು ತಾಯಿಯ ಕುತ್ತಿಗೆಗೆ ಇಟ್ಟು ಕೊಲೆ ಯತ್ನ ನಡೆಸಿದ್ದಾರೆ. ಕೈಗೆ ಗಂಭೀರ ಗಾಯ ಮಾಡಿದ್ದಾರೆ. ಇದೇ ವೇಳೆ ತಡೆಯಲು ಬಂದಿರುವ ನನ್ನ ಮೇಲೆ ಹಾಗೂ ನಮ್ಮ ಮನೆಯವರಾದ ಪೂಜಾಶ್ರೀ ಮತ್ತು ದೀಪಾ ಅವರ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ನಾರಾಯಣ ಅವರು ಆರೋಪಿಸಿದ್ದಾರೆ.

ದೊಡ್ಡಡ್ಕ ಭಜನಾ ಮಂದಿರದಲ್ಲಿ ಎಪ್ರಿಲ್ 29ರಂದು 29ನೇ ವರ್ಷದ ವಾರ್ಷಿಕೋತ್ಸವ ನಡೆಯಲಿರುವ ಕಾರಣ ಈ ಪರಿಸರವನ್ನು ಭಜನಾ ಮಂಡಳಿಯ ನೇತೃತ್ವದಲ್ಲಿ ಸುಮಾರು 60 ಮಂದಿ ಸ್ವಚ್ಚಗೊಳಿಸುತ್ತಿರುವ ಸಂದರ್ಭದಲ್ಲಿ ಸರೋಜಿನಿ ಆಚಾರ್ಯ, ನಾರಾಯಣ, ಪೂಜಾಶ್ರೀ ಮತ್ತು ದೀಪಾ ಅವರು ಸ್ಥಳಕ್ಕೆ ಆಗಮಿಸಿ ತನಗೆ ಹಾಗೂ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೂವಪ್ಪ ನಾಯ್ಕ ಆರೋಪಿಸಿದ್ದಾರೆ.

ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News