‘ಶಾಂತವೇರಿ ಗೋಪಾಲಗೌಡ'ರ ಹೆಸರಿನಲ್ಲಿ ಎರಡು ಪ್ರಶಸ್ತಿ ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಮಾ. 14: ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವವನ್ನು ಇಡೀ ವರ್ಷ ಆಚರಣೆ ಮಾಡುವ ತೀರ್ಮಾನ ಸರಕಾರ ಮಾಡಿದೆ. ಜೊತೆಗೆ ಅವರ ಹೆಸರಿನಲ್ಲಿ ‘ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಶಾಸಕ' ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಲು ತೀರ್ಮಾನ ಮಾಡಲಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ.
ಸೋಮವಾರ ಇಲ್ಲಿನ ವಿಧಾನಸೌಧದ ಮುಂಭಾಗದಲ್ಲಿನ ಶಾಂತವೇರಿ ಗೋಪಾಲಗೌಡ ವೃತ್ತದಲ್ಲಿಸಮಾಜವಾದಿ ಪ್ರತಿಷ್ಠಾನ ಹಾಗೂ ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ಆಯೋಜಿಸಿದ್ದ ಗೋಪಾಲಗೌಡರ ಜನ್ಮಶತಮಾನೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೋಪಾಲಗೌಡರ ಕುರಿತ ಕೃತಿಗಳನ್ನು ಮುದ್ರಿಸಿ, ನಾಡಿನಾದ್ಯಂತ ಎಲ್ಲ ಗ್ರಂಥಾಲಯಗಳಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಭೂ ಸುಧಾರಣೆಗಾಗಿ ನಡೆದಿರುವ ಹೋರಾಟದ ಬಗ್ಗೆ ಪುಸ್ತಕವನ್ನು ಸರಕಾರದ ವತಿಯಿಂದ ಜನ್ಮದಿನೋತ್ಸವದ ಅಂಗವಾಗಿ ಹೊರತಂದು ಬಿಡುಗಡೆ ಮಾಡಲಾಗುವುದು. ಸರಕಾರದ ಆಡಳಿತ ಮತ್ತು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಅವರ ವಿಚಾರಧಾರೆಗಳು ಮಾರ್ಗದರ್ಶಕವಾಗಿವೆ. ಗೋಪಾಲಗೌಡರು ಯಾವುದಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದರೋ, ತ್ಯಾಗ ಮಾಡಿದರೋ ಆ ಮೌಲ್ಯಗಳನ್ನು ಎತ್ತಿಹಿಡಿಯಲು ಎಲ್ಲ್ಲ ಪ್ರಯತ್ನ ಮಾಡೋಣ ಎಂದು ಕರೆ ನೀಡಿದರು.
ಜನಪರ ವೈಚಾರಿಕತೆಯೆ ಅವರ ಆಸ್ತಿ: ‘ಗೋಪಾಲಗೌಡರು ನಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರ ಸಮಕಾಲೀನರು, ಸಮಾನಮನಸ್ಕರು ಹಾಗೂ ಸಮ ಹೋರಾಟಗಾರರು ಆಗಿದ್ದರು. ತಮ್ಮದೆ ಆದ ವ್ಯಕ್ತಿತ್ವ ಹೊಂದಿ ದೀರ್ಘಕಾಲ ತಮ್ಮ ವೈಚಾರಿಕ ಕ್ರಾಂತಿಯಿಂದ ನಮ್ಮನ್ನೆಲ್ಲರನ್ನು ಸೆಳೆದಿದ್ದ ಗೋಪಾಲಗೌಡರು ಅಪರೂಪದ ವ್ಯಕ್ತಿ' ಎಂದು ಸ್ಮರಿಸಿದರು.
‘ರಾಜಕಾರಣಕ್ಕೆ ವಿಶ್ವಾಸಾರ್ಹತೆ ಉಳಿದಿದ್ದರೆ ಇವರಂಥ ನಾಯಕರಿಂದ. ಅವರು ಆದರ್ಶ ಬದುಕನ್ನು ಬದುಕಿದ್ದರು. ಇಂದಿನ ದಿನಗಳಲ್ಲಿ ರಾಜಕಾರಣಿಗಳನ್ನು ಅವರ ಆಸ್ತಿ ಏನು ಎಂದು ನೋಡುತ್ತೇವೆ. ಆದರೆ, ಗೋಪಾಲಗೌಡರ ಆಸ್ತಿ-ಜನರಿಗೆ ಅಗತ್ಯವಿರುವ ವ್ಯವಸ್ಥೆ ಹಾಗೂ ಅದಕ್ಕೆ ಪೂರಕವಾದ ವೈಚಾರಿಕತೆ. ಜನಪರ ವೈಚಾರಿಕತೆಯೇ ಅವರ ಆಸ್ತಿ. ಅವರ ವಿಚಾರ, ತತ್ವ ಆದರ್ಶಗಳು ಎಲ್ಲಿಯವರೆಗೆ ಇವೆ, ಅಲ್ಲಿಯವರೆಗೆ ಗೋಪಾಲಗೌಡರು ನಮ್ಮ ನಡುವೆ ಜೀವಂತವಾಗಿರುತ್ತಾರೆ ಎಂದು ನುಡಿದರು.
‘ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು, ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನು ಸಾಧಕ ಎಂಬಂತೆ ಬದುಕಿದರು. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ನಮ್ಮ ಚಿಂತನೆ, ಪ್ರೇರಣೆ, ಭವಿಷ್ಯದ ನಿರ್ಮಾಣದಲ್ಲಿ ಶಾಂತವೇರಿ ಗೋಪಾಲಗೌಡರು ಸದಾ ಕಾಲ ನಮಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದು, ದಾರಿದೀಪವಾಗಿದ್ದಾರೆ' ಎಂದು ಗುಣಗಾನ ಮಾಡಿದರು.
ಪ್ರಬಲ ನಾಯಕತ್ವ: ಗೇಣಿದಾರರಿಗೆ, ಉಳುವವನಿಗೆ ಭೂಮಿ ಇರಬೇಕು ಎಂದು ನಡೆದ ಹೋರಾಟಗಳಲ್ಲಿ ಪ್ರಬಲವಾದ ನಾಯಕತ್ವ ಅಗತ್ಯವಿತ್ತು. ಅದನ್ನು ಗೋಪಾಲಗೌಡರು ಒದಗಿಸಿಕೊಟ್ಟರು. ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ಅವರ ಸಮಾಜವಾದಿ ವಿಚಾರಧಾರೆಯಿಂದ ಸಣ್ಣ ವಯಸ್ಸಿನಲ್ಲಿಯೆ ಪ್ರಭಾವಿತರಾಗಿ, ಅದನ್ನು ಚಳವಳಿ ರೂಪದಲ್ಲಿ ಹಲವರೊಂದಿಗೆ ಇವರೂ ಸೇರಿ ಕರ್ನಾಟಕದಲ್ಲಿ ದೊಡ್ಡ ಕ್ರಾಂತಿಯನ್ನು ತಂದರು. ವಿಪರ್ಯಾಸವೆಂದರೆ ಅವರ ತಂದೆಯವರಿಗಿದ್ದ ಮೂರು ಎಕರೆ ಗೇಣಿ ಜಮೀನು ಉಳಿಯಲಿಲ್ಲ. ಸ್ವಂತ ಜಮೀನು ಇಲ್ಲದಿದ್ದರೂ, ಇತರೆ ಗೇಣಿದಾರರಿಗೆ ಅವರ ಹಕ್ಕನ್ನು ಕೊಡಿಸಬೇಕು, ಬದುಕಿನಲ್ಲಿ ಶಾಶ್ವತವಾದ ಭದ್ರತೆ ಕೊಡಿಸಲು ಭೂ ಸುಧಾರಣಾ ಕಾನೂನು ಜಾರಿಗೆ ತರಲು ನಿಸ್ವಾರ್ಥವಾಗಿ ಹೋರಾಡಿದರು. ಇವೆಲ್ಲವೂ ನಮ್ಮ ಮನವನ್ನು ಕಲಕುತ್ತವೆ. ಆ ದಾರಿಯನ್ನು ನಾವೆಲ್ಲರೂ ನಡೆಯಬೇಕೆಂಬ ಹಂಬಲವನ್ನು ಉಂಟುಮಾಡುತ್ತದೆ ಎಂದು ಹೇಳಿದರು.
ಶ್ರೇಷ್ಠ ವಾಗ್ಮಿ: ಗೋಪಾಲಗೌಡ ಅವರು ಕರ್ನಾಟಕದ ರಾಜಕಾರಣ ಅಷ್ಟೇ ಅಲ್ಲ, ರಾಜ್ಯದ ರೈತರ ಬದುಕಿನಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಸದನದ ಒಳಗೆ ಅವರ ವಾಕ್ಚಾತುರ್ಯ, ಪ್ರತಿಭೆ ಅತ್ಯಂತ ಪರಿಣಾಮಕಾರಿ ವಾದಮಂಡನೆ, ಇಂದೂ ವಿಧಾನಸಭೆಯ ನಡವಳಿಯಲ್ಲಿ ಅತ್ಯಂತ ಶ್ರೇಷ್ಠ ವಾಗ್ಮಿಗಳ ಪೈಕಿ ಗೋಪಾಲಗೌಡರು ಅಚ್ಚಳಿಯದೆ ಉಳಿದಿದ್ದಾರೆ. ಅವರ ಇಡೀ ಬದುಕನ್ನು ಜನರಿಗಾಗಿ ಗಂಧದ ಕೊರಡಿನಂತೆ ತೇದಿದ್ದಾರೆ. ತೀರ್ಥಹಳ್ಳಿ ಸ್ಫೂರ್ತಿದಾಯಕ ಪುಣ್ಯಭೂಮಿ. ಕುವೆಂಪು, ಕಡಿದಾಳು ಮಂಜಪ್ಪ, ಗೋಪಾಲಗೌಡರು ಜನಿಸಿದ ನೆಲ. ಶೀಘ್ರದಲ್ಲಿಯೇ ಅಲ್ಲಿಗೆ ಭೇಟಿ ನೀಡಿ ಪ್ರೇರಣೆ ಪಡೆಯುವ ಇಂಗಿತವಿದೆ ಎಂದು ಹೇಳಿದರು. ಸಭಾಪತಿ ಬಸವರಾಜ ಹೊರಟ್ಟಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.