×
Ad

ಭೂಸ್ವಾಧೀನ ಸಂತ್ರಸ್ತರಿಗೆ ವಂಚನೆಯಾಗಿದ್ದು, ಪ್ರಕರಣ ಸಿಬಿಐಗೆ ವಹಿಸಬೇಕು : ಹೋರಾಟ ಸಮಿತಿ

Update: 2022-03-15 15:17 IST

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರು-ಕಾರ್ಕಳದ ವರೆಗಿನ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಾಗಿರುವ ಭೂ ಮಾಲೀಕರಿಗೆ ಸಾಕಷ್ಟು ವಂಚನೆ ಮಾಡಲಾಗಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಸಂತ್ರಸ್ತರಿಗೆ ಆಗುತ್ತಿರುವ ಅನ್ಯಾಯವನ್ನು ತನಿಖೆ ಮಾಡಿದರೆ ಎಲ್ಲ ರೀತಿಯ ವಂಚನೆಗಳು ಹೊರ ಬರಲಿದೆ ಎಂದು ಹೋರಾಟ ಸಮಿತಿ ಮುಖಂಡರು ಆಗ್ರಹಿಸಿದ್ದಾರೆ.

ಭೂ ಮಾಲೀಕರು ಈಗಾಗಲೇ ನ್ಯಾಯಾಲಯದ ಮೊರೆ ಹೋಗಿರುವುದರಿಂದ ಶೇ.60ರಷ್ಟು ಕೃಷಿ ಭೂಮಿಗೆ ಸಂಬಂಧಿಸಿಂತೆ ಭೂ ಸ್ವಾಧೀನಕ್ಕೆ ತಡೆಯಾಜ್ಞೆ ಇದೆ. ಇದರಿಂದಾಗಿ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ. ಶೇ.80-90ರಷ್ಟು ಭೂಸ್ವಾಧಿನ ಆಗದೆ ಕೆಲಸ ಆರಂಭಿಸುವುದಿಲ್ಲ ಎಂದು ಟೆಂಡರ್ ಪಡೆದುಕೊಂಡಿರುವ ಸಂಸ್ಥೆ ತಿಳಿಸಿದ್ದು, ಆ ಕಾರಣ ಇನ್ನೂ ವರ್ಕ್ ಆರ್ಡರ್ ತೆಗೆದುಕೊಂಡಿಲ್ಲ. ಒಂದು ವೇಳೆ ಭೂ ಸ್ವಾಧೀನ ಸಮರ್ಪಕವಾಗಿ ನಡೆಯದೆ, ಸಂಸ್ಥೆ ಕೆಲಸ ಬಿಟ್ಟು ಹೋದರೆ, ಡೆವಲಪ್‌ಮೆಂಟ್ ಫೀಸ್ ಎಂದು ಒಂದಷ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈ ನಡುವೆ ಕಳೆದ ಒಂದು ವರ್ಷದಿಂದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದರೂ, ರಾಷ್ಟ್ರೀಯ ಹೆದ್ದಾರಿ ಪರ ವಕೀಲರು ಕೋರ್ಟ್‌ಗೆ ಬಂದು ಆಕ್ಷೇಪಣೆ ಸಲ್ಲಿಸುವ ಕೆಲಸವನ್ನೂ ಮಾಡಿಲ್ಲ. ಹೀಗಾದರೆ ಹೆದ್ದಾರಿ ಅಭಿವೃದ್ಧಿ ಕೆಲಸ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಹೆದ್ದಾರಿ 169ರ ಭೂ ಮಾಲಕರ ಹೋರಾಟ ಸಮಿತಿ ಮುಖಂಡ ಬ್ರಿಜೇಶ್ ಶೆಟ್ಟಿ ಮಿಜಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರ್ ಕೆಲ ದಿನಗಳ ಹಿಂದೆ ಮಂಗಳೂರಿಗೆ ಆಗಮಿಸಿದ್ದು, ಈ ವೇಳೆ ಅವರನ್ನು ಭೇಟಿಯಾಗಲು ಸುಮಾರು 3 ಗಂಟೆಗಳ ಕಾಲ ಕಾದಿದ್ದೆವು. ಆದರೆ ನಮಗೆ ಅವರು ನೀಡಿದ್ದು, ಕೇವಲ 1 ನಿಮಿಷ ಮಾತ್ರ. ಈ ಕಡಿಮೆ ಅವಧಿಯಲ್ಲಿ ಅವರು ನಮ್ಮ ಮನವಿ ಸ್ವೀಕರಿಸಿ, ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದರು. ಆದರೆ ಇನ್ನೂ ಯಾವುದೇ ಉತ್ತರ ಬಂದಿಲ್ಲ ಎಂದರು.

ಭೂ ಸ್ವಾಧಿನ ಮಾರ್ಗಸೂಚಿಯಲ್ಲಿ ಯಾವುದೇ ಉಲ್ಲೇಖವಿಲ್ಲದ ಕೃಷಿ ಮತ್ತು ಪರಿವರ್ತಿತ ಭೂಮಿ ಎಂದು ವಿಂಗಡಣೆ ಮಾಡಲಾಗಿದೆ. ಕೃಷಿ ಭೂಮಿಗೆ ಮಾರುಕಟ್ಟೆ ದರಕ್ಕಿಂತ 8-12 ಪಟ್ಟು ಕಡಿಮೆ ದರ ನಿಗದಿಪಡಿಸುವ ಮೂಲಕ ಮೊದಲ ವಂಚನೆ ಮಾಡಲಾಗಿದೆ. ಕೆಡವಲ್ಪಡುವ ಕಟ್ಟಡಗಳಿಗೆ ಜಿಎಸ್‌ಟಿ ಅನ್ವಯಿಸಲಾಗಿದ್ದು, ಅದರಲ್ಲಿಯೂ ಕೆಲವು ಗ್ರಾಮಗಳಲ್ಲಿ ಶೇ.12 ಕೆಲವು ಗ್ರಾಮಗಳಲ್ಲಿ ಶೇ.24ರಷ್ಟು ಕಡಿತ ಮಾಡಲಾಗುತ್ತಿದೆ. ಇದು ಜಿಎಸ್‌ಟಿ ಇತಿಹಾಸದಲ್ಲಿಯೇ ವಿಚಿತ್ರ ಕ್ರಮವಾಗಿದೆ. 20ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 169ರ ಅಕ್ಕಪಕ್ಕದ ಜಮೀನಿಗೆ ಹೆದ್ದಾರಿ ಅಭಿವೃದ್ಧಿ ಹೆಸರಿನಲ್ಲಿ ಭೂ ಪರಿವರ್ತನೆಗೆ ಅವಕಾಶ ಇರಲಿಲ್ಲ. ಆದರೆ 2016ರ 3ಎ ಅಧಿಸೂಚನೆ ನಂತರ ಕೆಲವು ಪ್ರಭಾವಿ ವ್ಯಕ್ತಿಗಳ ಭೂಮಿಯನ್ನು ಪರಿವರ್ತಿಸಲು ಅನುಮತಿ ನೀಡಲಾಗಿದೆ. ಈ ಮೂಲಕ ಸಾಮಾನ್ಯ ಭೂ ಮಾಲೀಕರಿಗೆ ವಂಚನೆ ಮಾಡಲಾಗುತ್ತಿದೆ ಎಂದರು.

ಅಧಿಕಾರಿಯಿಂದ ೫ ಲಕ್ಷ ರೂ ಬೇಡಿಕೆ

ಹೆದ್ದಾರಿಯ ಅಲೈನ್ಮೆಂಟ್ ಆಗಾಗ ಬದಲಾವಣೆಯಾಗುತ್ತಿದ್ದು, ಇದರಲ್ಲಿ ಪ್ರಭಾವಿ ವ್ಯಕ್ತಿಗಳ ಹಾಗೂ ಭೂ ಮಾಫಿಯಾಗಳ ಕೈವಾಡವೂ ಇದೆ. ರಾಷ್ಟ್ರೀಯ ಹೆದ್ದಾರಿಯ ಸರ್ವೇ ವಿಭಾಗದ ವ್ಯಕ್ತಿಯೊಬ್ಬರು 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಹಣ ಪಾವತಿಸಿದರೆ ನಿಮ್ಮ ಜಮೀನು ಹೊರತುಪಡಿಸಿದಂತೆ ಹೆದ್ದಾರಿ ಪಥವನ್ನು ಬದಲಾಯಿಸುವುದಾಗಿ ತಿಳಿಸಿದ್ದಾರೆ. ಈ ಕುರಿತ ಆಡಿಯೋ ದಾಖಲೆ ತನ್ನ ಬಳಿಯಿದೆ. ಈಗಾಗಲೇ ಹಣ ನೀಡಿದ ಭೂ ಮಾಲೀಕರಿಗೆ ಹೆದ್ದಾರಿಯಿಂದ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡಿದ್ದಾರೆ ಎಂದು ಭೂ ಮಾಲೀಕರಾದ ಮೊಹಮ್ಮದ್ ನಝೀಮ್ ತಿಳಿಸಿದರು.

ಮುಖಂಡರಾದ ರತ್ನಾಕರ ಶೆಟ್ಟಿ, ಜಯರಾಮ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News