ಮಾ. 17ರಂದು ಹಿಜಾಬ್ ತೀರ್ಪು ಖಂಡಿಸಿ ಮುಲ್ಕಿ ತಾಲೂಕು ಬಂದ್
ಮುಲ್ಕಿ : ಹಿಜಾಬ್ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಮಾ. 17ರಂದು ಮುಲ್ಕಿ ತಾಲೂಕಿನಾದ್ಯಂತ ಸ್ವಯಂ ಪ್ರೇರಿತ ಬಂದ್ ನಡೆಯಲಿದೆ ಎಂದು ವಲಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ಹಿಜಾಬ್ ಸಂಬಂಧದ ತೀರ್ಪಿನಲ್ಲಿ ಉಚ್ಚ ನ್ಯಾಯಾಲಯವು ಹಿಜಾಬ್ ಇಸ್ಲಾಮ್ ನ ಅವಿಭಾಜ್ಯ ಅಂಗವಲ್ಲ ಎಂದು ಪ್ರತಿಪಾದಿಸಿರುವುದನ್ನು ಜಗತ್ತಿನಾದ್ಯಂತ ಇರುವ ನೈಜ ಮುಸ್ಲಿಮರು ಒಪ್ಪಲು ಸಾಧ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಅಮೀರ್ ಎ ಶರೀಅತ್ ಕರೆ ನೀಡಿರುವ ಮಾ.17ರ ಬಂದ್ ಗೆ ಬೆಂಬಲವಾಗಿ ವಲಯ ಮಸ್ಲಿಮ್ ಸಂಘಟನೆಯ ಒಕ್ಕೂಟವೂ ಬಂದ್ ಗೆ ಕರೆ ನೀಡಿದೆ.
ಬಂದ್ ನ ಸಂದರ್ಭ ಮುಲ್ಕಿ ತಾಲೂಕಿನಾದ್ಯಂತ ಸಮಾನ ಮನಸ್ಕರು ಹಾಗೂ ಮುಸ್ಲಿಮರ ಮಾಲಕತ್ವದ ಅಂಗಡಿ - ಮುಂಗಟ್ಟುಗಳು, ಬಸ್, ಆಟೊ ರಿಕ್ಷಾ, ಟೂರಿಸ್ಟ್ ವಾಹನಗಳು, ಸರಕು ಸಾಗಣೆಯ ವಾಹನಗಳು ಕಾರ್ಯಾಚರಿಸುವುದಿಲ್ಲ. ಈ ಸಂಬಂಧ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ ತೀರ್ಮಾನಿಸಲಾಗಿದೆ ಎಂದು ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಾಹುಲ್ ಹಮೀದ್ ಕದಿಕೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.