ರಶ್ಯದ ಅಂತರಿಕ್ಷ ನೌಕೆಯಲ್ಲಿ ಭೂಮಿಗೆ ಹಿಂತಿರುಗಲಿರುವ ಅಮೆರಿಕ ಗಗನಯಾತ್ರಿ‌

Update: 2022-03-16 18:01 GMT

ನ್ಯೂಯಾರ್ಕ್, ಮಾ.16: ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ರಶ್ಯ-ಅಮೆರಿಕ ನಡುವಿನ ದ್ವಿಪಕ್ಷೀಯ ಬಾಂಧವ್ಯ ಹದಗೆಟ್ಟಿದ್ದರೂ, ದಾಖಲೆ ಅವಧಿಯಲ್ಲಿ ಅಂತರಿಕ್ಷದಲ್ಲಿ ನೆಲೆಸಿರುವ ಅಮೆರಿಕದ ಗಗನಯಾತ್ರಿ ರಶ್ಯದ ಬಾಹ್ಯಾಕಾಶ ನೌಕೆಯ ಮೂಲಕ ಭೂಮಿಗೆ ಹಿಂತಿರುಗುವ ಕಾರ್ಯಕ್ರಮ ಪೂರ್ವನಿಗದಿತ ರೂಪದಲ್ಲಿಯೇ ನಡೆಯಲಿದೆ ಎಂದು ನಾಸಾದ ಅಧಿಕಾರಿಗಳು ಹೇಳಿದ್ದಾರೆ.

ನಮ್ಮ ಗಗನಯಾತ್ರಿ ಮಾರ್ಕ್ ವ್ಯಾಂದ್ಹೇಯ್ ಭೂಮಿಗೆ ವಾಪಸಾಗುತ್ತಿದ್ದಾರೆ ಎಂಬುದನ್ನು ಖಚಿತಪಡಿಸುತ್ತಿದ್ದೇವೆ. ಈ ಬಗ್ಗೆ ರಶ್ಯನ್ ಸಹೋದ್ಯೋಗಿಗಳೊಂದಿಗೆ ಸಂವಹನ ನಡೆಸುತ್ತಿದ್ದೇವೆ. ಮಾರ್ಕ್ ಹಾಗೂ ಇತರ ಇಬ್ಬರು ರಶ್ಯನ್ ಗಗನಯಾತ್ರಿಗಳು ರಶ್ಯದ ಸೋಯುರ್ ಗಗನನೌಕೆಯ ಮೂಲಕ ಕಝಕಿಸ್ತಾನದಲ್ಲಿ ಬಂದಿಳಿಯಲಿದ್ದಾರೆ.

ಭೂಮಿಯಲ್ಲಿ ಏನು ನಡೆಯುತ್ತಿದೆ ಎಂದು ಗಗನಯಾತ್ರಿಗಳಿಗೆ ಅರಿವಿದ್ದರೂ ಒಂದು ತಂಡವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿದ್ದಾರೆ ಎಂದು ನಾಸ(ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ)ದ ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಜೊಯೆಲ್ ಮೊಂಟಾಲ್ಬನೊರನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ. ಮಾರ್ಕ್ ವ್ಯಾಂದ್ಹೇಯ್ 340 ದಿನಗಳನ್ನು ಅಂತರಿಕ್ಷದಲ್ಲಿ ಕಳೆದಿದ್ದು ಇದು ಹೊಸ ಅಮೆರಿಕನ್ ದಾಖಲೆಯಾಗಿದೆ. ನಿರಂತರ 438 ದಿನ ಅಂತರಿಕ್ಷದಲ್ಲಿ ವಾಸಿಸಿದ ವಿಶ್ವದಾಖಲೆ ರಶ್ಯ ಗಗನಯಾತ್ರಿಗಳ ಹೆಸರಲ್ಲಿದೆ.

ಈ ಬೆಳವಣಿಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಯಮಕ್ಕೆ ಅನುಸಾರವಾಗಿದೆ. ಅಂತರಾಷ್ಟ್ರೀಯ ನಿಯಮದ ಪ್ರಕಾರ, ವಿದೇಶಿ ನೆಲದಲ್ಲಿ ಅಥವಾ ಸಮುದ್ರದಲ್ಲಿ ಬಂದಿಳಿಯಲು ಅನುಕೂಲ ಮಾಡಿಕೊಡುವುದೂ ಸೇರಿದಂತೆ ತುರ್ತು ಅಗತ್ಯದ ಸಂದರ್ಭ ಓರ್ವ ಗಗನಯಾತ್ರಿಗೆ ಇತರ ದೇಶದ ಗಗನಯಾತ್ರಿಗಳು ಸಂಪೂರ್ಣ ನೆರವು ಒದಗಿಸಬೇಕು. ಅಲ್ಲದೆ ಬಾಹ್ಯಾಕಾಶದ ಪ್ರದೇಶದ ಮೇಲೆ ಯಾವುದೇ ದೇಶ ಸಾರ್ವಭೌಮತ್ವದ ಹಕ್ಕು ಸಾಧಿಸುವಂತಿಲ್ಲ. ಚಂದ್ರ ಅಥವಾ ಇತರ ಯಾವುದೇ ಗ್ರಹಗಳ ಪ್ರದೇಶ ತನ್ನದೆಂದು ಯಾವುದೇ ದೇಶ ಪ್ರತಿಪಾದಿಸುವಂತಿಲ್ಲ ಮತ್ತು ಕಕ್ಷೆಯಲ್ಲಿ ಸಂಶೋಧನೆ ನಡೆಸಲು ಎಲ್ಲಾ ದೇಶಗಳಿಗೂ ಹಕ್ಕಿದ್ದು ಇದಕ್ಕೆ ಯಾವುದೇ ದೇಶ ತಡೆಯೊಡ್ಡುವಂತಿಲ್ಲ ಎಂದು ಸೂಚಿಸುವ ಬಾಹ್ಯಾಕಾಶ ಒಪ್ಪಂದಕ್ಕೆ 1967ರಲ್ಲಿ ಅಂತರಾಷ್ಟ್ರೀಯ ಸಮುದಾಯ ಸಹಿ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News