ಟೆನಿಸ್ ತಾರೆ ಮರಿಯಾ ಶರಪೋವಾ, ಎಫ್ 1 ರೇಸರ್ ಶುಮಾಕರ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ ಗುರ್ಗಾಂವ್ ಪೊಲೀಸರು

Update: 2022-03-17 05:55 GMT
ಮರಿಯಾ ಶರಪೋವಾ (Photo: AP/PTI)

ಗುರ್ಗಾಂವ್: ನ್ಯಾಯಾಲಯದ ಆದೇಶದ ಮೇರೆಗೆ ಗುರ್ಗಾಂವ್ ಪೊಲೀಸರು ರಷ್ಯಾದ ಮಾಜಿ ಟೆನಿಸ್ ತಾರೆ ಮರಿಯಾ ಶರಪೋವಾ, ಮಾಜಿ ಫಾರ್ಮುಲಾ 1 ರೇಸರ್ ಮೈಕೆಲ್ ಶುಮಾಕರ್ ಹಾಗೂ  ಇತರ 11 ಜನರ ವಿರುದ್ಧ ವಂಚನೆ ಮತ್ತು ಕ್ರಿಮಿನಲ್ ಪಿತೂರಿಗಾಗಿ ಪ್ರಕರಣ ದಾಖಲಿಸಿದ್ದಾರೆ.

ಶರಪೋವಾ ಹಾಗೂ  ಶುಮಾಕರ್ ತನಗೆ  ವಂಚಿಸಿದ್ದಾರೆಂದು ದಿಲ್ಲಿ  ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.

ಹೊಸದಿಲ್ಲಿಯ ಚತ್ತರ್‌ಪುರ ಮಿನಿ ಫಾರ್ಮ್‌ನ ನಿವಾಸಿ ಶಫಾಲಿ ಅಗರ್ವಾಲ್ ಅವರು ಶರಪೋವಾ ಹೆಸರಿನ ಯೋಜನೆಯಲ್ಲಿ ಅಪಾರ್ಟ್‌ಮೆಂಟ್ ಬುಕ್ ಮಾಡಿರುವುದಾಗಿ ದೂರಿದ್ದಾರೆ. ಯೋಜನೆಯಲ್ಲಿರುವ ಒಂದು ಗೋಪುರಕ್ಕೆ ಶುಮಾಕರ್ ಹೆಸರಿಡಲಾಗಿದೆ ಎಂದು ಅವರು ಹೇಳಿದರು. ಯೋಜನೆಯು 2016 ರ ವೇಳೆಗೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಅದು ಆರಂಭವಾಗಲೇ ಇಲ್ಲ ಎಂದು ದೂರುದಾರರು ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಸೆಲೆಬ್ರಿಟಿಗಳು ತಮ್ಮ ಅಸೋಸಿಯೇಶನ್ ಹಾಗೂ ಪ್ರಚಾರದ ಮೂಲಕ ವಂಚನೆಯ ಭಾಗವಾಗಿದ್ದಾರೆ ಎಂದು ಮಹಿಳೆ ಆರೋಪಿಸಿದರು.

ಇದಕ್ಕೂ ಮುನ್ನ ಅವರು ಗುರುಗ್ರಾಮ್ ನ್ಯಾಯಾಲಯದಲ್ಲಿ ಎಂ/ಎಸ್ ರಿಯಲ್ ಟೆಕ್ ಡೆವಲಪ್ ಮೆಂಟ್ ಆ್ಯಂಡ್ ಇನ್ ಫ್ರಾಸ್ಟ್ರಚರ್ ಪ್ರೈವೆಟ್ ಲಿಮಿಟೆಡ್, ಇತರ ಡೆವಲಪರ್‌ಗಳು, ಶರಪೋವಾ ಮತ್ತು ಶುಮಾಕರ್ ತನಗೆ ಸುಮಾರು  80 ಲಕ್ಷ ರೂ.ವನ್ನು ವಂಚಿಸಿದ್ದಾರೆ ಎಂದು ದೂರು ದಾಖಲಿಸಿದ್ದರು.

ಗುರ್ಗಾಂವ್‌ನ ಸೆಕ್ಟರ್ 73 ರಲ್ಲಿ ಶರಪೋವಾ ಅವರ ಹೆಸರಿನ ಯೋಜನೆಯಲ್ಲಿ ತಾನು ಮತ್ತು ತನ್ನ ಪತಿ ವಸತಿ ಅಪಾರ್ಟ್ಮೆಂಟ್ ಅನ್ನು ಬುಕ್ ಮಾಡಿದ್ದೇವೆ ಎಂದು ದೂರುದಾರರು ನ್ಯಾಯಾಲಯದ ಮುಂದೆ ಹೇಳಿದ್ದಾರೆ.  ಆದರೆ ಡೆವಲಪರ್ ಕಂಪನಿಗಳು ತಮ್ಮ ಯೋಜನೆಗೆ ಹಣವನ್ನು ಹಾಕಲು ಆಮಿಷ ಒಡ್ಡುವ ಮೂಲಕ ವಂಚಿಸಿದ್ದಾರೆ.

ಮಾಜಿ ಟೆನಿಸ್ ತಾರೆ ಶರಪೋವಾ ಸ್ಥಳಕ್ಕೆ ಭೇಟಿ ನೀಡಿದ್ದರು ಹಾಗೂ  ಟೆನಿಸ್ ಅಕಾಡೆಮಿ ಮತ್ತು ಕ್ರೀಡಾ ಮಳಿಗೆಯನ್ನು ತೆರೆಯುವ ಭರವಸೆ ನೀಡಿದ್ದಾರೆ ಎಂದು ಅಗರ್ವಾಲ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News