ರೈಲ್ವೆ ಬಜೆಟ್‌ ನಲ್ಲಿ ದಕ್ಷಿಣಕ್ಕೆ 59 ಕೋಟಿ ರೂ. ಉತ್ತರಕ್ಕೆ 13,200ಕೋಟಿ ರೂ. ನೀಡಿದ ಕೇಂದ್ರ: ಕನಿಮೋಳಿ ಭಾಷಣ ವೈರಲ್

Update: 2022-03-17 06:33 GMT

ಹೊಸದಿಲ್ಲಿ: ದಕ್ಷಿಣ ಭಾರತಕ್ಕೆ 'ಅಲ್ಪ' ಹಣ ಹಂಚಿಕೆ ಮಾಡಿರುವುದಕ್ಕಾಗಿ ಕೇಂದ್ರ ಸರಕಾರವನ್ನು ತಮಿಳುನಾಡು ಸಂಸದೆ ಕನಿಮೊಳಿ ಟೀಕಿಸಿರುವ ವಿಡಿಯೋ ವೈರಲ್ ಆಗಿದೆ. 2022 ರ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ, 2022 ರ ಕೇಂದ್ರ ಬಜೆಟ್‌ನಲ್ಲಿ ದಕ್ಷಿಣ ರೈಲ್ವೆಗೆ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲು ಕೇವಲ 59 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಆದರೆ ಉತ್ತರ ರೈಲ್ವೆಗೆ 13,200 ಕೋಟಿ ರೂ. ಮೀಸಲಿಡಲಾಗಿದೆ ಎಂದು ಕನಿಮೊಳಿ ಹೇಳಿದರು.  

‘ಅಸಮಾನತೆ’ಯ ಬಗ್ಗೆ ಗಮನಹರಿಸುವಂತೆ ಕನಿಮೊಳಿ ರೈಲ್ವೆ ಸಚಿವರಿಗೆ ಮನವಿ ಮಾಡಿದರು. "ನೀವು ಭಾರತ ಒಂದು ರಾಷ್ಟ್ರ ಎಂದು ಮಾತನಾಡುತ್ತಲೇ ಇರುತ್ತೀರಿ. ರೈಲ್ವೇ ಕೂಡ ಒಂದು ರಾಷ್ಟ್ರ ಎಂಬುದನ್ನು ಅರ್ಥಮಾಡಿಕೊಳ್ಳಬೇಕು" ಎಂದು ಲೋಕಸಭೆಯಲ್ಲಿ ಅವರು ಹೇಳಿದರು. ಅವರ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ರೈಲ್ವೇಯಲ್ಲಿ ಭಾರೀ ಖಾಲಿ ಹುದ್ದೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಡಿಎಂಕೆ ಸಂಸದರು, ದಕ್ಷಿಣ ಭಾರತೀಯರಿಗೆ ಉದ್ಯೋಗಗಳು ಸಿಗುತ್ತಿಲ್ಲ ಮತ್ತು ಅವರನ್ನು ದೂರವಿಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ಪ್ರಸ್ತುತ ಶೇ.73ರಷ್ಟಿದ್ದರೆ ಮುಂದಿನ ವರ್ಷಕ್ಕೆ ಶೇ.100ರಷ್ಟು ವಿದ್ಯುದ್ದೀಕರಣ ಹೇಗೆ ಸಾಧ್ಯ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಬಜೆಟ್ ಅಧಿವೇಶನದ ದ್ವಿತೀಯಾರ್ಧದ ಎರಡನೇ ದಿನದಂದು ಲೋಕಸಭೆಯಲ್ಲಿ ರೈಲ್ವೆ ಸಚಿವಾಲಯದಲ್ಲಿ ಅನುದಾನದ ಬೇಡಿಕೆಗಳ ಕುರಿತು ಚರ್ಚೆಗಳು ನಡೆದವು. ಸದನದ ಕಲಾಪವನ್ನು ರಾತ್ರಿ 11 ಗಂಟೆಯವರೆಗೆ ವಿಸ್ತರಿಸಲಾಯಿತು.

ಲೋಕಸಭೆಯಲ್ಲಿ ರೈಲ್ವೆಗಾಗಿ 2022-23ರ ಅನುದಾನದ ಬೇಡಿಕೆಯ ಮೇಲಿನ ಚರ್ಚೆಯನ್ನು ಪ್ರಾರಂಭಿಸಿದ ಕಾಂಗ್ರೆಸ್ ಸಂಸದ ಕೆ.ಸುರೇಶ್, ಕೇಂದ್ರ ಸರ್ಕಾರವು ರೈಲ್ವೆಯನ್ನು ಅಸಮರ್ಥವಾಗಿ ನಡೆಸುತ್ತಿದೆ ಮತ್ತು ಹಣ ಹಂಚಿಕೆಯಲ್ಲಿ ಕಣ್ಕಟ್ಟು ಮಾಡುತ್ತಿದೆ ಎಂದು ಆರೋಪಿಸಿದರು.

ಸಂಸತ್ತಿನ ಬಜೆಟ್ ಅಧಿವೇಶನದ ದ್ವಿತೀಯಾರ್ಧವು ಮಾರ್ಚ್ 14 ರಿಂದ ಪುನರಾರಂಭವಾಯಿತು ಮತ್ತು ಏಪ್ರಿಲ್ 8 ರಂದು ಮುಕ್ತಾಯಗೊಳ್ಳಲಿದೆ. ಬಜೆಟ್ ಅಧಿವೇಶನದ ಮೊದಲಾರ್ಧವು ಜನವರಿ 31 ರಂದು ಪ್ರಾರಂಭವಾಯಿತು ಮತ್ತು ಫೆಬ್ರವರಿ 11 ರಂದು ಮುಕ್ತಾಯವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News