ನಿಜಜೀವನದಲ್ಲೂ ಚಲನಚಿತ್ರದ ಪಾತ್ರವಾದ ಹಾಸ್ಯನಟ ವೊಲೊಡಿಮಿರ್ ಝೆಲೆನ್‌ಸ್ಕಿ!

Update: 2022-03-19 07:20 GMT

ಇಂದಿನ ಯುದ್ಧದ ಪರಿಸ್ಥಿತಿಯಲ್ಲಿ ಸರ್ವಾಧಿಕಾರಿ, ಪ್ರತಿಷ್ಠಿತ, ಆತ್ಯಂತ ಬುದ್ಧಿವಂತ, ಕಠಿಣ ಲೆಕ್ಕಾಚಾರದ ಮೆದುಳಿನ, ಅಹಂಕಾರಿ, ಜೂಡೋ ಬ್ಲ್ಯಾಕ್‌ಬೆಲ್ಟ್ - ವ್ಲಾದಿಮಿರ್ ಎದುರು ಸಂಪೂರ್ಣ ತದ್ವಿರುದ್ಧ ಗುಣಸ್ವಭಾವಗಳ, ಪ್ರಜೆಗಳಿಂದ ಆಯ್ಕೆಯಾದ, ಕಲಾವಿದ, ಹಾಸ್ಯಗಾರ, ಚಿಕ್ಕದೇಹದ, ಮೃದು ಸ್ವಭಾವದ, ಧೈರ್ಯವಂತ ವೊಲೊಡಿಮಿರ್ ನಿಂತಿದ್ದಾರೆ. ಅವರ ಮುಂದಿರುವ ಸವಾಲು ಮತ್ತು ಜವಾಬ್ದಾರಿಗಳು ಬಹಳ ದೊಡ್ಡದು. ಅವರ ಎಲ್ಲಾ ದೌರ್ಬಲ್ಯಗಳ ನಡುವೆಯೂ ಝೆಲೆನ್‌ಸ್ಕಿ ಉಕ್ರೇನ್‌ನ ಬಹುತೇಕ ಬೆಂಬಲ ಪಡೆದಿದ್ದಾರೆ.

ರಶ್ಯದಿಂದ ಆಕ್ರಮಣಕ್ಕೆ ಒಳಗಾದ ಉಕ್ರೇನ್ ರಾಜಧಾನಿ ಕೀವ್‌ನ ಬೀದಿಗಳಲ್ಲಿ ಮಿಲಿಟರಿ ಹಸಿರಿನ ಟೀಶರ್ಟ್, ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ, ವೈಮಾನಿಕ ದಾಳಿಗೆ ಒಳಗಾಗಿ ಸ್ಮಶಾನದಂತೆ ಕಾಣುವ ಬೀದಿಯಲ್ಲಿ ಅವಶೇಷಗಳ ನಡುವೆ ನಿಂತು ಪ್ರಜೆಗಳಿಗೆ ಧೈರ್ಯ ತುಂಬುವ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿಯ ವೀಡಿಯೊ ಪ್ರಸಾರವಾದಾಗ, ಆತನ ಧೈರ್ಯದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು. ಟವಿ ಶೋಗಳಲ್ಲಿ ಜನರನ್ನು ನಗಿಸುತ್ತಿದ್ದ ಈ ಜನಪ್ರಿಯ ಹಾಸ್ಯಗಾರ ನಟ, ಜನಪ್ರಿಯ ಅಧ್ಯಕ್ಷನಾಗಿ, ತತ್ತರಿಸುತ್ತಿರುವ ಜನರಿಗೆ ಧೈರ್ಯ ತುಂಬುವ ನಾಯಕನಾದದ್ದು ಹೇಗೆ?

ಯುದ್ಧ ಆರಂಭವಾದ ಬಳಿಕ ಕೋಟು, ಸೂಟು, ಬೂಟುಗಳ ಶಿಷ್ಟಾಚಾರದ ಉಡುಪು ಕಿತ್ತೆಸೆದು, ಮಿಲಿಟರಿ ಹಸಿರು ಪ್ಯಾಂಟ್ ಮತ್ತು ಟೀಶರ್ಟ್ ಧರಿಸಿದ ಝೆಲೆನ್‌ಸ್ಕಿ, ಅದೇ ಉಡುಪಿನಲ್ಲಿ ವಿಶ್ವ ನಾಯಕರ ಜೊತೆ ವೀಡಿಯೊ ಕರೆಯಲ್ಲಿ ಮಾತನಾಡಿದ್ದಾರೆ; ವಿಶ್ವ ಸಂಸ್ಥೆಯ ಅಧಿವೇಶನದಲ್ಲಿಯೂ ಕಾಣಿಸಿಕೊಂಡಿದ್ದಾರೆ. ರಶ್ಯದ ಭಾರೀ ಕ್ಷಿಪಣಿ ಮತ್ತು ವೈಮಾನಿಕ ದಾಳಿಯ ಭರಾಟೆ ಆರಂಭವಾದಾಗ- ಒಂದೆರಡು ದಿನ ಅಥವಾ ವಾರದೊಳಗೆ ಕೀವ್ ಪತನವಾಗಿ, ಉಕ್ರೇನ್ ಶರಣಾಗಬಹುದು; ಝೆಲೆನ್‌ಸ್ಕಿ ದೇಶಬಿಟ್ಟು ಓಡಿಹೋಗಬಹುದು ಎಂದು ಬಹುತೇಕ ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಹಾಗಾಗದೆ ರಶ್ಯ ಭಾರೀ ಪ್ರತಿರೋಧ ಎದುರಿಸುತ್ತಿದ್ದು, ದೊಡ್ಡ ಸಂಖ್ಯೆಯ ಸಾವುನೋವು ಹಾಗೂ ನಷ್ಟಕ್ಕೆ ಗುರಿಯಾಗಿದೆ. ಸುರಕ್ಷಿತವಾಗಿ ಉಕ್ರೇನ್‌ನಿಂದ ಕುಟುಂಬ ಸಹಿತ ಹೊರಗೊಯ್ಯುವುದಾಗಿ ಯುಎಸ್‌ಎ ನೀಡಿದ ಕೊಡುಗೆಯನ್ನು ತಿರಸ್ಕರಿಸಿ, ಕೊನೆಯ ತನಕ ದೇಶ ಬಿಡುವುದಿಲ್ಲ ಎಂದು ಘೋಷಿಸಿದಾಗ, ಕುಳ್ಳನೆಯ ಚಿಕ್ಕ ದೇಹದ ಈ ವ್ಯಕ್ತಿ ಬಹಳ ದೊಡ್ಡವನಾಗಿ, ರಶ್ಯದ ದೈತ್ಯನಿಗೆ ಎದುರಾಗಿ ನಿಂತ ದೇಶಪ್ರೇಮಿಯಾಗಿ ಉಕ್ರೇನ್‌ನ ಪ್ರಜೆಗಳಿಗೂ, ಇತರರಿಗೂ ಕಂಡುದರಲ್ಲಿ ಆಶ್ಚರ್ಯ ಏನಿಲ್ಲ. ಈತ ಸಣ್ಣ ಪ್ರಾಯದಲ್ಲಿ (44 ವರ್ಷ) ಈ ಮಟ್ಟಕ್ಕೆ ಬೆಳೆದ ರೀತಿಯನ್ನು ಚುಟುಕಾಗಿ ಇಲ್ಲಿ ದಾಖಲಿಸಲಾಗಿದೆ.

ಜನವರಿ 23, 1978ರಲ್ಲಿ ಆಗಿನ ಸೋವಿಯತ್ ಒಕ್ಕೂಟದ ಒಂದು ಗಣರಾಜ್ಯವಾಗಿದ್ದ ಉಕ್ರೇನ್‌ನ ದಕ್ಷಿಣದ ಕೈಗಾರಿಕಾ ನಗರ ಕ್ರೈವೀ ರಿಹ್ ಎಂಬಲ್ಲಿ ಹುಟ್ಟಿದ ವೊಲೊಡಿಮಿರ್ ಝೆಲೆನ್‌ಸ್ಕಿ, ಈಗ ತಾನು ನಟಿಸಿದ ಚಿತ್ರವಾದ ‘ಸರ್ವೆಂಟ್ಸ್ ಆಫ್ ಪೀಪಲ್’ (ಜನಸೇವಕ) ಎಂಬ ಜನಪ್ರಿಯ ಹೆಸರು ಹೊಂದಿದ್ದಾರೆ. ಅವರ ಪಕ್ಷದ ಹೆಸರೂ ಅದೇ. ಯೆಹೂದಿ ಕುಟುಂಬವೊಂದರಲ್ಲಿ ಜನಿಸಿದ ಝೆಲೆನ್‌ಸ್ಕಿ ಚಿಕ್ಕವನಿದ್ದಾಗ ಹೆತ್ತವರ ಜೊತೆ ನಾಲ್ಕು ವರ್ಷಗಳ ಕಾಲ ಕಮ್ಯುನಿಸ್ಟ್ ಆಡಳಿತವಿದ್ದ ಮಂಗೋಲಿಯಾದ ಎರ್ಡೆನೆಟ್‌ನಲ್ಲಿದ್ದರು. ಅಲ್ಲಿಂದ ಮರಳಿದ ಬಳಿಕ ಕ್ರೈವೀ ರಿಹ್‌ನಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದರು. ದಕ್ಷಿಣದ ದ್ನಿಪ್ರೊಪೆಟ್ರೋವ್‌ಸ್ಕ್ ಪ್ರದೇಶದ ಬಹುತೇಕ ಜನರಂತೆ ಅವರೂ ಸ್ಥಳೀಯ ರಶ್ಯನ್ ಭಾಷಿಕನಾಗಿ ಬೆಳೆದರು. ಅವರು ಉಕ್ರೇನಿಯನ್ ಮತ್ತು ಇಂಗ್ಲಿಷ್ ಭಾಷೆಗಳನ್ನೂ ಸರಾಗವಾಗಿ ಮಾತನಾಡುತ್ತಿದ್ದರು. 1995ರಲ್ಲಿ ಕ್ರೈವೀ ರಿಹ್‌ನ ನ್ಯಾಷನಲ್ ಇಕನಾಮಿಕ್ ಯುನಿವರ್ಸಿಟಿ ಸೇರಿದ ಅವರು, 2000ನೇ ಇಸವಿಯಲ್ಲಿ ಕಾನೂನು ಪದವಿ ಪಡೆದರು.

ಕಾನೂನು ವೃತ್ತಿಯಲ್ಲಿ ಮುಂದುವರಿಯುವ ಪರವಾನಿಗೆ ಪಡೆದರೂ, ಅವರ ಒಲವು ಬೇರೆಯೇ ಕಡೆ ಇತ್ತು. ಕಾಲೇಜು ದಿನಗಳಲ್ಲಿಯೇ ಅವರು ನಾಟಕ ರಂಗವನ್ನು ಪ್ರವೇಶಿಸಿದ್ದರು. 1997ರಲ್ಲಿ ಅವರ ‘ಕ್ವಾರ್ತಲ್ 95’ (ಕ್ವಾರ್ಟರ್ 95) ಎಂಬ ತಂಡವು ಪ್ರಮುಖ ಟಿವಿ ಚಾನೆಲ್ ಕೆವಿಎನ್‌ನ ಜನಪ್ರಿಯ ಸೃಜನಶೀಲ ಹಾಸ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆಯಿತು. ಇದು ಸೋವಿಯತ್ ವಿಘಟನೆಯ ಬಳಿಕದ ಸ್ವತಂತ್ರ ದೇಶಗಳ ಒಕ್ಕೂಟವಾಗಿದ್ದ ಕಾಮನ್ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್ (ಸಿಐಎಸ್)ನ ಉದ್ದಗಲಕ್ಕೂ ಪ್ರಸಾರವಾಗಿ ಅವರು ಮತ್ತು ತಂಡಕ್ಕೆ ತುಂಬಾ ಹೆಸರು ತಂದುಕೊಟ್ಟಿತು. 2003ರ ತನಕ ಝೆಲೆನ್‌ಸ್ಕಿ ಮತ್ತು ಕ್ವಾರ್ತಲ್ 95-ಕೆವಿಎನ್‌ನಲ್ಲಿ ನಿತ್ಯದ ಜನಪ್ರಿಯ ಕಾರ್ಯಕ್ರಮ ಎಂಬಂತಾಯಿತು. ಅವರು ಕ್ವಾರ್ತಲ್ 95 ಸ್ಟುಡಿಯೋದ ಸಹಮಾಲಕರಾಗಿ ಅದನ್ನು ಉಕ್ರೇನ್‌ನ ಮನರಂಜನಾ ಕ್ಷೇತ್ರದಲ್ಲಿ ನಂ.1 ನಿರ್ಮಾಣ ಸಂಸ್ಥೆಯನ್ನಾಗಿ ಮಾಡಿದರು. 2011ರ ತನಕ ಅದರ ಕಲಾ ನಿರ್ದೇಶಕರಾಗಿದ್ದರು. ಆ ವರ್ಷ ಅವರು ಜನಪ್ರಿಯ ಇಂಟರ್ ಟಿವಿಯ ಮುಖ್ಯ ನಿರ್ಮಾಪಕರಾದರು.

2012ರಲ್ಲಿ ಅವರ ಸಂಸ್ಥೆಯು 1+1 ಎಂಬ ಉಕ್ರೇನಿಯನ್ ಟಿವಿ ಜಾಲದೊಂದಿಗೆ ಒಪ್ಪಂದ ಮಾಡಿಕೊಂಡಿತು. ಈ 1+1, ದೇಶದ ಅತ್ಯಂತ ಶ್ರೀಮಂತ ಬಿಲಿಯಾಧಿಪತಿ ಥೋರ್ ಕೊಲೊಮೊಯ್‌ಸ್ಕಿಗೆ ಸೇರಿದ್ದು, ಇವರಿಬ್ಬರ ಗೆಳೆತನ ಮುಂದೆ ಝೆಲೆನ್‌ಸ್ಕಿ ರಾಜಕೀಯ ಪ್ರವೇಶದ ಇಚ್ಛೆ ವ್ಯಕ್ತಪಡಿಸಿದಾಗ, ಸಾರ್ವಜನಿಕ ಚರ್ಚೆಯ ವಿಷಯವಾಯಿತು. ಆವರು ಟಿವಿಯಲ್ಲಿ ಇದ್ದಾಗಲೇ ಹಲವಾರು ಚಲನಚಿತ್ರಗಳಲ್ಲಿಯೂ ನಟಿಸಿದರು. ಇವುಗಳಲ್ಲಿ ಹೆಚ್ಚಿನವು ಹಾಸ್ಯ ಚಿತ್ರಗಳಾಗಿದ್ದವು.

2013ರಲ್ಲಿ ಅವರು ಕ್ವಾರ್ತಲ್ 95ಗೆ ಮರಳಿದರೂ, ದೇಶವು ಅಶಾಂತಿಯಿಂದ ತತ್ತರಿಸುತ್ತಿತ್ತು. ತಿಂಗಳುಗಳ ಕಾಲ ನಡೆದ ಪ್ರತಿಭಟನೆಗಳ (ಆರೆಂಜ್ ರೆವೆಲ್ಯೂಶನ್) ನಂತರ ಫೆಬ್ರವರಿ 2014ರಲ್ಲಿ ಅಧ್ಯಕ್ಷ ವಿಕ್ತೊರ್ ಯಾನುಕೊವಿಚ್ ಅವರನ್ನು ಕೆಳಗಿಳಿಸಲಾಯಿತು. ಮೇ ತಿಂಗಳಲ್ಲಿ ಬಿಲಿಯಾಧಿಪತಿ ಪೆತ್ರೊ ಪೊರೊಶೆಂಕೊ ಉಕ್ರೇನ್‌ನ ಅಧ್ಯಕ್ಷರಾದರು. ಆ ಹೊತ್ತಿಗೆ ಪೂರ್ವದ ದೊನ್‌ಬಾಸ್ ಪ್ರದೇಶದ ಎರಡು ಪ್ರಾಂತ (ಓಬ್ಲಾಸ್ತ್)ಗಳಾದ ದೊನೆಟ್‌ಸ್ಕ್ ಖಾರ್ಕೀವ್ ಮತ್ತು ಲುಷಾನ್‌ಸ್ಕ್‌ಗಳಲ್ಲಿ ರಶ್ಯ ಬೆಂಬಲಿತ ಬಂಡಾಯ ತಾರಕಕ್ಕೆ ಏರಿತ್ತು. ರಶ್ಯ ಪೂರ್ವದ ಎರಡು ಪ್ರಾಂತಗಳನ್ನು ಪರೋಕ್ಷವಾಗಿ ಬಂಡುಕೋರರ ಮೂಲಕ ನಿಯಂತ್ರಿಸುವಂತಾಯಿತು. ದಕ್ಷಿಣದಲ್ಲಿ ಕಪ್ಪು ಸಮುದ್ರದ ತಟದಲ್ಲಿರುವ ಕ್ರೈಮಿಯ ಪರ್ಯಾಯ ದ್ವೀಪವನ್ನು ಆಕ್ರಮಿಸಿದ ರಶ್ಯ, ಅದನ್ನು ಯಾವುದೇ ಪ್ರತಿರೋಧವಿಲ್ಲದೆ ವಶಪಡಿಸಿಕೊಂಡಿತು. ಇದೇ ಕಾರಣದಿಂದಾಗಿ, ಈ ಬಾರಿಯ ಆಕ್ರಮಣವೂ ಬೆಣ್ಣೆಯಂತೆ ಸಾಗಿ ಒಂದೆರಡು ದಿನಗಳಲ್ಲೇ ಮುಗಿಯುವುದು ಎಂದು ಭಾವಿಸಿದ್ದ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಝೆಲೆನ್‌ಸ್ಕಿ ನೇತೃತ್ವದಲ್ಲಿ ಉಕ್ರೇನ್‌ನ ಅನಿರೀಕ್ಷಿತ ಪ್ರಬಲ ಪ್ರತಿರೋಧ ಆಘಾತ ನೀಡಿದೆ. ಅದೇ ಹೊತ್ತಿಗೆ ಭ್ರಷ್ಟಾಚಾರ ಅತಿಯಾಗಿ ಬೆಳೆದು, ಅಧ್ಯಕ್ಷ ಪೊರೊಶೆಂಕೊ ಏನೂ ಮಾಡಲಾಗದ ಸ್ಥಿತಿ ತಲಪಿದರು.

ಈ ಹೊತ್ತಿನಲ್ಲಿಯೇ 1+1 ಸ್ಟುಡಿಯೋ ‘ಸರ್ವೆಂಟ್ ಆಫ್ ದಿ ಪೀಪಲ್’ ಎಂಬ ಚಲನಚಿತ್ರವನ್ನು ಅಕ್ಟೋಬರ್ 2015ರಲ್ಲಿ ಬಿಡುಗಡೆಗೊಳಿಸಿತು. ಅದರ ನಾಯಕ ವ್ಯಾಸಿಲಿ ಗೊಲೊಬೊರೋಡ್ಕೊ ಒಬ್ಬ ಜನಸಾಮಾನ್ಯ ಇತಿಹಾಸದ ಪ್ರೊಫೆಸರ್. ಅವನು ಭ್ರಷ್ಟಾಚಾರದ ವಿರುದ್ಧ ಮಾಡುವ ಭಾವಾವೇಶದ ಬೈಗುಳ ತುಂಬಿದ ಭಾಷಣವನ್ನು ಒಬ್ಬ ವಿದ್ಯಾರ್ಥಿ ಚಿತ್ರೀಕರಣ ಮಾಡಿ ಇಂಟರ್‌ನೆಟ್‌ಗೆ ಹಾಕುತ್ತಾನೆ. ಅದು ವೈರಲ್ ಆಗುತ್ತದೆ. ಸೂಪರ್ ಹಿಟ್ ಆದ ಈ ಚಿತ್ರದ ನಾಯಕ ಗೊಲೊಬೊರೊಡ್ಕೊ ಅಧ್ಯಕ್ಷತೆಯ ಹಾದಿಯಲ್ಲಿ ಸಾಗುತ್ತಾನೆ. ಅದರಲ್ಲಿ ಗೊಲೊಬೊರೋಡ್ಕೊ ಪಾತ್ರ ವಹಿಸಿದ ಝೆಲೆನ್‌ಸ್ಕಿಯ ಜೀವನ ಮುಂದೆ ಆದೇ ಹಾದಿಯಲ್ಲಿ ಸಾಗಿದ್ದು ಒಂದು ಇಂದ್ರಜಾಲ! ಅದು ಸ್ವತಃ ಅವರ ರಾಜಕೀಯ ಭವಿಷ್ಯದ ಸ್ಕ್ರಿಪ್ಟ್‌ನಂತೆಯೇ ಇತ್ತು. 2018ರಲ್ಲಿ ಕ್ವಾರ್ತಲ್ 95 ಸ್ಟುಡಿಯೋವನ್ನೇ ಒಂದು ರಾಜಕೀಯ ಪಕ್ಷವಾಗಿ ನೋಂದಾಯಿಸಿದ ಝೆಲೆನ್‌ಸ್ಕಿ, ಉಲ್ಕೆಯಂತೆ ಮೇಲೆ ಬಂದರು.

ಉಕ್ರೇನ್‌ನ ಆರ್ಥಿಕತೆ ಸ್ಥಗಿತಗೊಂಡಿತ್ತು. ನೂರಕ್ಕೆ ತೊಂಬತ್ತು ಮಂದಿ ಪೊರೊಶೆಂಕೊ ವಿರುದ್ಧವಿದ್ದರು. 2019ರ ಚುನಾವಣೆಯು 2014ರಂತೆಯೇ ನಡೆದು, ಅಧ್ಯಕ್ಷ ಪೊರೊಶೆಂಕೊ ಅವರನ್ನು ಸೋಲಿಸಿ, ‘ಕಿತ್ತಳೆ ಕ್ರಾಂತಿ’ಯ ಹಿರಿಯ ನಾಯಕ ಯೂಲಿಯ ತೈಮೊಶೆಂಕೊ ಅಧ್ಯಕ್ಷರಾಗುವರು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಮೂವತ್ತಕ್ಕೂ ಹೆಚ್ಚು ಅಭ್ಯರ್ಥಿಗಳು ಕಣಕ್ಕೆ ಧುಮುಕಿದರು. ಝೆಲೆನ್‌ಸ್ಕಿ ಕಣಕ್ಕೆ ಇಳಿದ ತಕ್ಷಣವೇ ಆತನೇ ಪ್ರಮುಖ ಅಭ್ಯರ್ಥಿ ಎಂಬುದು ಎಲ್ಲರಿಗೂ ಮನವರಿಕೆಯಾಯಿತು. ಝೆಲೆನ್‌ಸ್ಕಿ ಅವರು ಪೊರೊಶೆಂಕೊ ಅವರ ಹೊಸವರ್ಷದ ಸಾಂಪ್ರದಾಯಿಕ ಭಾಷಣಕ್ಕೆ ಮೊದಲೇ, ಡಿಸೆಂಬರ್ 31ರಂದೇ ತನ್ನ ಅಭ್ಯರ್ಥಿತನ ಘೋಷಿಸಿ ಸಭೆ ನಡೆಸಿದರು. ಈ ಆಕ್ರಮಣಕಾರಿ ನಡೆ ಅವರ ಮಿತ್ರ 1+1 ಚಾನೆಲ್‌ನ ಬಿಲಿಯಾಧಿಪತಿ ಕೊಲೊಮೊಯ್‌ಸ್ಕಿ ಕೈವಾಡದ ಬಗ್ಗೆ ಸಾರ್ವಜನಿಕ ಚರ್ಚೆಗೆ ಕಾರಣವಾಯಿತು. ತಾನು ಸಹಸ್ಥಾಪಕನಾಗಿದ್ದ ‘ಪ್ರೈವಾಟ್’ (Privat ) ಬ್ಯಾಂಕಿನಿಂದ ಭಾರೀ ಪ್ರಮಾಣದ ಹಣ ದುರುಪಯೋಗ ಮಾಡಿದ ಆರೋಪ ಹೊತ್ತಿದ್ದ ಕೊಲೊಮೊಯ್‌ಸ್ಕಿ- ಪೊರೊಶೆಂಕೊರ ಆಪ್ತ ಬೆಂಬಲಿಗರಾಗಿದ್ದರು. ಆದರೆ, ಪೊರೊಶೆಂಕೊ ಆ ಬ್ಯಾಂಕನ್ನು ರಾಷ್ಟ್ರೀಕರಣ ಮಾಡಿ, ಅದು ಮುಳುಗದಂತೆ 5-6 ಬಿಲಿಯನ್ ಡಾಲರ್‌ಗಳಷ್ಟು ಸರಕಾರಿ ಹಣವನ್ನು ಈ ದೇಶದ ಅತಿದೊಡ್ಡ ಬ್ಯಾಂಕಿಗೆ ಸುರಿಯಬೇಕಾಯಿತು. ಇದೊಂದು ದೊಡ್ಡ ಹಗರಣವಾಗಿತ್ತು. ಅದಾಗಲೇ ಕೊಲೊಮೊಯ್‌ಸ್ಕಿ ದೇಶ ಬಿಟ್ಟಾಗಿತ್ತು.

ತಕ್ಷಣವೇ ಝೆಲೆನ್‌ಸ್ಕಿ, ಕೊಲೊಮೊಯ್‌ಸ್ಕಿಯಿಂದ ದೂರಸರಿದರು. ಅವರ ಪ್ರಚಾರವೂ ಹೊಸತನದಿಂದ ಕೂಡಿತ್ತು. ಚಿಕ್ಕ ಚಿಕ್ಕ ಹಾಸ್ಯ ತುಂಬಿದ ಭಾಷಣಗಳು, ತನ್ನ ಧೋರಣೆಗಳನ್ನು ರೂಪಿಸುವ ಹೇಳಿಕೆಗಳು, ಮಾಧ್ಯಮ ಗೋಷ್ಠಿಗಳು ಇತ್ಯಾದಿಗಳ ಮೂಲಕ ಅವರು ಪ್ರಚಾರ ಮಾಡಿದರು. ಇವೆಲ್ಲವೂ ಯೂಟ್ಯೂಬ್, ಇನ್‌ಸ್ಟಾಗ್ರಾಂ ಮುಂತಾದವುಗಳ ಮೂಲಕ ಇಂಟರ್‌ನೆಟ್ ಲೋಕದಲ್ಲಿ ಬೆಂಕಿಯಂತೆ ಹರಡಿದವು. ಅಧ್ಯಕ್ಷರ ಜೊತೆಯಲ್ಲಿ ನೇರ ಚರ್ಚೆಗಳು ಆಟದ ಮೈದಾನದಂತೆ ಆಗಿ, ಭಾರೀ ಸಂಖ್ಯೆಯಲ್ಲಿ ಜನರು ಗಮನಿಸಿದರು. ಝೆಲೆನ್‌ಸ್ಕಿ ರಾಜಕೀಯ ಅನುಭವವಿಲ್ಲದ ಹಾಸ್ಯಗಾರ, ಬಫೂನ, ಪುಟಿನ್‌ರನ್ನು ಎದುರಿಸಲು ಅಶಕ್ತ ಎಂದೆಲ್ಲಾ ಬಿಂಬಿಸಲು ಪೊರೊಶೆಂಕೊ ಮಾಡಿದ ಪ್ರಯತ್ನಗಳು, ಝೆಲೆನ್‌ಸ್ಕಿಯ ಚಾಣಾಕ್ಷ ಕಟು ಉತ್ತರಗಳಿಂದ ನೆಲಕಚ್ಚಿದವು. ಜನರಿಗೆ ಬದಲಾವಣೆ ಬೇಕಿತ್ತು. ಭ್ರಷ್ಟಾಚಾರದಿಂದ ಮುಕ್ತಿ ಬೇಕಿತ್ತು. ಕೊನೆಗೂ ಎರಡು ಸುತ್ತುಗಳ ಚುನಾವಣೆ ನಡೆದು, ಫಲಿತಾಂಶ ಬಂದಾಗ ಎಲ್ಲರಿಗೂ ಅಚ್ಚರಿ. ಮೂರನೇ ಶಕ್ತಿಯಾಗಿದ್ದ ವೊಲೊಡಿಮಿರ್ ಝೆಲೆನ್‌ಸ್ಕಿ 73 ಶೇಕಡಾ ಮತಗಳನ್ನು ಪಡೆದು ಅಭೂತಪೂರ್ವ ಜಯಗಳಿಸಿದರು. ಎಪ್ರಿಲ್ 21, 2019ರಂದು ಅವರು ಅಧ್ಯಕ್ಷರಾದರು.

ಅವರ ಪ್ರಚಾರ ಶೈಲಿ, ಭ್ರಷ್ಟಾಚಾರ ವಿರೋಧಿ ನಿಲುವು, ಚತುರ ಲೆಕ್ಕಾಚಾರದ ಭಾಷಣ, ಪಕ್ಷದ ಹೆಸರು, ನಿರ್ದಿಷ್ಟ ತಾತ್ವಿಕ ಚೌಕಟ್ಟು ಇಲ್ಲದಿರುವಿಕೆ, ಜನಪ್ರಿಯ ಧೋರಣೆಗಳ ಹಠಾತ್ ಘೋಷಣೆ, ರಾಜಕೀಯವಲ್ಲದ ಹಿನ್ನೆಲೆ, ಜನ ಸಾಮಾನ್ಯನ ಆಮ್ ಆದ್ಮಿ ಇಮೇಜು, ಸಣ್ಣಗಿನ ದೇಹ ಇತ್ಯಾದಿಗಳಿಗೂ, ಭಾರತದ ಆಮ್ ಆದ್ಮಿ ಪಕ್ಷಕ್ಕೂ, ಅದರ ನಾಯಕ ಅರವಿಂದ ಕೇಜ್ರಿವಾಲ್ ಅವರಿಗೂ ಕುತೂಹಲಕಾರಿ ಸಾಮ್ಯಗಳನ್ನು ಕಾಣಬಹುದು. ಈ ನಿಟ್ಟಿನಲ್ಲಿ ಪಂಜಾಬ್‌ನಲ್ಲಿ ಮೂರನೇ ಶಕ್ತಿಯಾಗಿದ್ದ ಆಪ್‌ನ ಭರ್ಜರಿ ಗೆಲುವು ಇತ್ಯಾದಿಗಳನ್ನು ಗಮನಿಸಬಹುದು. ಉದಾರಣೆಗೆ, ಪಂಜಾಬ್ ಮುಖ್ಯಮಂತ್ರಿ ಆಗಿರುವ ಭಗವಂತ್ ಮಾನ್ ಝೆಲೆನ್‌ಸ್ಕಿಯಂತೆಯೇ ಟಿವಿ, ಸಾಮಾಜಿಕ ಮಾಧ್ಯಮಗಳ ಜನಪ್ರಿಯ ಕಾಮೆಡಿಯನ್. ಆವರು ಮತ್ತು ಕೇಜ್ರಿವಾಲ್- ಝೆಲೆನ್‌ಸ್ಕಿಯಂತೆ ಮೇಲ್ನೋಟಕ್ಕೆ ದುರ್ಬಲ, ಮೃದು ಸ್ವಭಾವದ ನಾಯಕರು. ಮಾನ್ ಹಾಸ್ಯಗಾರನಾದುದಕ್ಕೇ- ಆವರು ಗಂಭೀರ ವ್ಯಕ್ತಿಯಲ್ಲವೆಂದು ವಿರೋಧಿಗಳು ಟೀಕಿಸಿ, ಲಘುವಾಗಿ ಪರಿಗಣಿಸಿದ್ದರು. ಸಂದರ್ಶನವೊಂದರಲ್ಲಿ ಈ ಪ್ರಶ್ನೆ ಕೇಳಿದಾಗ ಮಾನ್, ‘‘ಹಾಸ್ಯ ಎಂಬುದು ಗಂಭೀರ ವಿಷಯ. ಜನರನ್ನು ನಗಿಸುವುದು ಆತ್ಯಂತ ಕಷ್ಟದ ಕೆಲಸ’’ ಎಂದು ಉತ್ತರಿಸಿದ್ದರು. ವಿಶೇಷವೆಂದರೆ ಟೀಕಾಕಾರರಿಗೆ ಝೆಲೆನ್‌ಸ್ಕಿ ನೀಡಿದ್ದ ಉತ್ತರವೂ ಇದೇ ಆಗಿತ್ತು! ಈ ಮಾತು ನಿಜವೆಂದು ಚಾರ್ಲಿ ಚಾಪ್ಲಿನ್ ಹಿಂದೆಯೇ ತೋರಿಸಿಕೊಟ್ಟಿದ್ದ.

ಆದರೆ ಭರವಸೆ ನೀಡುವುದು ಸುಲಭ; ಕಾರ್ಯರೂಪಕ್ಕೆ ತರುವುದು ಕಷ್ಟ. ಆವರು ಅಧಿಕಾರಕ್ಕೆ ಬಂದ ಸ್ವಲ್ಪಸಮಯದಲ್ಲೇ ರಶ್ಯ ಪೂರ್ಣ ಉಕ್ರೇನ್ ರಾಜ್ಯಗಳ ಬಂಡುಕೋರರಿಗೆ ರಶ್ಯನ್ ಪಾಸ್‌ಪೋರ್ಟ್ ನೀಡಲು ಆರಂಭಿಸಿತು. ಝೆಲೆನ್‌ಸ್ಕಿ, ಪಾಶ್ಚಾತ್ಯರ ಕಡೆಗೆ ಒಲವು ತೋರಿಸಿ ನ್ಯಾಟೋ ಸೇರಲು ನಿರ್ಧರಿಸಿದಾಗ ರಶ್ಯ ಕಿಡಿಕಿಡಿಯಾಯಿತು. ಸರ್ವಾಧಿಕಾರಿ ಪುಟಿನ್‌ಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಯಿತು. ಅವರು ಪ್ರಪಂಚವನ್ನೇ ಅಪಾಯಕ್ಕೆ ಒಡ್ಡುವ ಉಕ್ರೇನ್ ಆಕ್ರಮಣದ ಮೂರ್ಖ ನಿರ್ಧಾರ ತೆಗೆದುಕೊಂಡರು.

ಝೆಲೆನ್‌ಸ್ಕಿಯ ಆಡಳಿತದ ಬಗ್ಗೆ ಒಂದೆರಡು ಮಾತುಗಳನ್ನು ಹೇಳಬೇಕು. ಅಧ್ಯಕ್ಷೀಯ ಚುನಾವಣೆಯ ನಂತರ ಅವರು ಬಹುಮತವಿಲ್ಲದ ಸಂಸತ್ತನ್ನು ಹಠಾತ್ತಾಗಿ ಬರಖಾಸ್ತು ಮಾಡಿದರು. ಜುಲೈ 21ರಂದು ನಡೆದ ಸಂಸದೀಯ ಚುನಾವಣೆಯಲ್ಲಿ ಅವರ ಸರ್ವೆಂಟ್ ಆಫ್ ದಿ ಪೀಪಲ್ ಪಕ್ಷವು 450ರಲ್ಲಿ 254 ಸ್ದಾನಗಳನ್ನು ಪಡೆದು, ಸೋವಿಯತ್ ನಂತರದ ಕಾಲದಲ್ಲಿ ಒಂದೇ ಪಕ್ಷವು ಮೊದಲ ಬಾರಿಗೆ ಸ್ಪಷ್ಟ ಬಹುಮತ ಪಡೆದಂತಾಯಿತು. ಇವುಗಳಲ್ಲಿ ರಶ್ಯ ಆಕ್ರಮಿತ ಕ್ರೈಮಿಯ ಮತ್ತು ಪೂರ್ವದ ಬಂಡುಕೋರ ದೊನೆಟ್‌ಸ್ಕ್ ಮತ್ತು ಲುಷೆನ್‌ಸ್ಕ್ ಪ್ರಾಂತಗಳ 26 ಸ್ಥಾನಗಳು ಸೇರಿಲ್ಲ.

ಝೆಲೆನ್‌ಸ್ಕಿ ಆಡಳಿತವನ್ನು ಸುಸ್ಥಿತಿಗೆ ತರಲು ಯತ್ನಿಸಿದರೂ, ಗ್ಯಾಸ್ ಪೇಪ್‌ಲೈನಿಗೆ ತಡೆ, ಸೈಬರ್ ದಾಳಿ ಇತ್ಯಾದಿ ಕಾರಣಗಳಿಂದ ಅವರಿಗೆ ತನ್ನ ಭರವಸೆ ಈಡೇರಿಸಲು ಸಾಧ್ಯವಾಗದೆ, ಸಣ್ಣಪುಟ್ಟ ಜನಪ್ರಿಯ-ಜನಮರುಳು ಕಾರ್ಯಕ್ರಮಗಳಲ್ಲೇ ತೃಪ್ತಿ ಪಡಬೇಕಾಯಿತು. ಆಗ ನಡೆದದ್ದೇ ಉಕ್ರೇನ್ ಒಳಗೊಂಡಂತಹ ಭಾರೀ ಹಗರಣ. ಇದು ಯುಎಸ್‌ಎಯಲ್ಲಿ ಬಿರುಗಾಳಿ ಎಬ್ಬಿಸಿ, ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಸಂಸತ್ತಿನಲ್ಲಿ ವಾಗ್ದಂಡನೆ ಎದುರಿಸಬೇಕಾಯಿತು. ಟ್ರಂಪ್ ಚುನಾವಣೆ ವೇಳೆ ರಶ್ಯದ ನೆರವು ಪಡೆದಿದ್ದರು ಎಂಬ ಆರೋಪವಿತ್ತು. ಅದರ ಋಣ ತೀರಿಸಲೋ ಎಂಬಂತೆ ಟ್ರಂಪ್, ಉಕ್ರೇನ್‌ಗೆ ಯುಎಸ್‌ಎ ನೀಡಲಿದ್ದ ಭಾರೀ ನೆರವನ್ನು ಬಿಡುಗಡೆ ಮಾಡಲು ತನ್ನ ರಾಜಕೀಯ ವಿರೋಧಿ ಜೋ ಬೈಡನ್ ಮತ್ತು ಅವರ ಮಗ ಹಂಟರ್ ಬೈಡನ್ ವಿರುದ್ಧ ಉಕ್ರೇನ್‌ನಲ್ಲಿ ಅವರು ನಡೆಸಿದ್ದರೆನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಶರತ್ತು ಒಡ್ಡಿದ್ದರು. ಇದನ್ನು ಪುಟಿನ್ ಸೂಚನೆಯಂತೆ ಮಾಡಲಾಗಿದೆ ಎಂಬ ಸಂಶಯವಿತ್ತು. ಝೆಲೆನ್‌ಸ್ಕಿ ಇದಕ್ಕೆ ಮಣಿದಿರಲಿಲ್ಲ. ಅಲ್ಲದೇ, ಭ್ರಷ್ಟ ಉದ್ಯಮಿ ಕೊಲೊಮೊಯ್‌ಸ್ಕಿಗೆ ನೆರವಾಗುತ್ತಿರುವ ದೂರೂ ಝೆಲೆನ್‌ಸ್ಕಿ ಮೇಲಿತ್ತು.

ಆದರೆ, ಇಂದಿನ ಯುದ್ಧದ ಪರಿಸ್ಥಿತಿಯಲ್ಲಿ ಸರ್ವಾಧಿಕಾರಿ, ಪ್ರತಿಷ್ಠಿತ, ಆತ್ಯಂತ ಬುದ್ಧಿವಂತ, ಕಠಿಣ ಲೆಕ್ಕಾಚಾರದ ಮೆದುಳಿನ, ಅಹಂಕಾರಿ, ಜೂಡೋ ಬ್ಲ್ಯಾಕ್‌ಬೆಲ್ಟ್ - ವ್ಲಾದಿಮಿರ್ ಎದುರು ಸಂಪೂರ್ಣ ತದ್ವಿರುದ್ಧ ಗುಣಸ್ವಭಾವಗಳ, ಪ್ರಜೆಗಳಿಂದ ಆಯ್ಕೆಯಾದ, ಕಲಾವಿದ, ಹಾಸ್ಯಗಾರ, ಚಿಕ್ಕದೇಹದ, ಮೃದು ಸ್ವಭಾವದ, ಧೈರ್ಯವಂತ ವೊಲೊಡಿಮಿರ್ ನಿಂತಿದ್ದಾರೆ. ಅವರ ಮುಂದಿರುವ ಸವಾಲು ಮತ್ತು ಜವಾಬ್ದಾರಿಗಳು ಬಹಳ ದೊಡ್ಡದು. ಅವರ ಎಲ್ಲಾ ದೌರ್ಬಲ್ಯಗಳ ನಡುವೆಯೂ ಝೆಲೆನ್‌ಸ್ಕಿ ಉಕ್ರೇನ್‌ನ ಬಹುತೇಕ ಬೆಂಬಲ ಪಡೆದಿದ್ದಾರೆ. ಜನರು ಯಾಕಾಗಿ, ಯಾವ ಕಾರಣಗಳಿಗಾಗಿ ನಾಯಕರನ್ನು ಮೆಚ್ಚುತ್ತಾರೆ ಎಂದು ಹೇಳುವುದು ಕಷ್ಟ! ವೊಲೊಡಿಮಿರ್ ಝೆಲೆನ್‌ಸ್ಕಿಯ ಹಿನ್ನೆಲೆ, ಹಾಲು ಉಕ್ಕೇರಿದಂತೆ ಹಠಾತ್ತಾಗಿ ಉಕ್ರೇನ್‌ನ ಜನರು ಅವರಿಗೆ ನೀಡಿದ ಭಾರೀ ಬೆಂಬಲ ಇದನ್ನು ತೋರಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಯಾವುದೂ ಸಾಧ್ಯ!

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News