×
Ad

ಸಪ್ನಾ ಬುಕ್ ಹೌಸ್ ಸಿಇಒ ವಿರುದ್ಧ ಎಫ್ ಐಆರ್ ದಾಖಲು

Update: 2022-03-20 11:55 IST

ಬೆಂಗಳೂರು, ಮಾ.20: ಶಾಲಾ ಮಕ್ಕಳ ಪುಸ್ತಕ ವಿತರಿಸುವ ಸುಭಾಷ್ ಎಂಟರ್​​ಪ್ರೈಸಸ್ ಕಂಪೆನಿಯ ಗೌಪ್ಯ ಮಾಹಿತಿಯನ್ನು ಬೇರೆ ಕಂಪೆನಿಗೆ ನೀಡುತ್ತಿದ್ದ ಆರೋಪದಡಿ ಓರ್ವನನ್ನು ಜಗಜೀವನರಾಂ ನಗರ ಪೊಲೀಸರು ಬಂಧಿಸಿದ್ದು, ಸಪ್ನಾ ಬುಕ್ ಹೌಸ್ ಸಿಇಒ ನಿಜೇಶ್ ಶಾ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಸುಭಾಷ್ ಎಂಟರ್​​ಪ್ರೈಸಸ್ ಮಾಲಕ‌ ನಾಗೇಶ್ ನೀಡಿದ ದೂರಿನ‌ ಮೇರೆಗೆ ಕಂಪೆನಿಯ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೋಹನ್ ಎಂಬಾತನನ್ನು ಬಂಧಿಸಲಾಗಿದೆ.‌

ಕಾನೂನುಬಾಹಿರವಾಗಿ ಗೌಪ್ಯ ಮಾಹಿತಿ ತರಿಸಿಕೊಂಡ ಆರೋಪದಡಿ ನಿಜೇಶ್ ಶಾ, ಕಂಪೆನಿಯ ಸಿಬ್ಬಂದಿ ಮಧುಕರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಶಾಲಾ ಮಕ್ಕಳ ಪುಸ್ತಕ ವಿತರಣೆಗೆ ದಕ್ಷಿಣ ಭಾರತದಲ್ಲೇ ಹೆಸರುವಾಸಿಯಾಗಿರುವ ಸುಭಾಷ್ ಎಂಟರ್​​ಪ್ರೈಸಸ್ ಕಂಪನಿಯಲ್ಲಿ ಮೋಹನ್ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಇ-ಮೇಲ್​ ಮೂಲಕ ಸುಭಾಷ್ ಎಂಟರ್​​ಪ್ರೈಸಸ್ ಕಂಪೆನಿಗೆ ಬಂದಿದ್ದ ಆರ್ಡರ್ ಹಾಗೂ ರಿಯಾಯಿತಿ ದರ, ಬೆಲೆ ಸೇರಿದಂತೆ ಇನ್ನಿತರ ಗೌಪ್ಯ ಮಾಹಿತಿಗಳನ್ನು ಸಪ್ನಾ ಬುಕ್ ಹೌಸ್ ಸಿಇಒ‌ ನಿಜೇಶ್ ಶಾ ಅವರಿಗೆ ಕಳುಹಿಸುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮೋಹನ್ ಮಾಡಿದ ಕೃತ್ಯದಿಂದ ಸುಭಾಷ್ ಎಂಟರ್​​ಪ್ರೈಸಸ್​​ಗೆ ಬರಬೇಕಿದ್ದ ಆರ್ಡರ್ ರದ್ದಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ಆರೋಪಿಸಿ ಮಾಲಕ‌ ನಾಗೇಶ್ ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News