×
Ad

ಬೆಂಗಳೂರುಜಿಎಸ್ಟಿ ರದ್ದುಗೊಳಿಸಲು ರೈತರ ಪಟ್ಟು

Update: 2022-03-20 20:17 IST

ಬೆಂಗಳೂರು, ಮಾ. 20: ಕೃಷಿ ಉತ್ಪನ್ನಗಳ ಮೇಲೆ ರಸಗೊಬ್ಬರ, ಕೀಟನಾಶಕ ಹನಿನೀರಾವರಿ ಉಪಕರಣಗಳ ಮೇಲೆ ವಿಧಿಸಿರುವ ಜಿಎಸ್ಟಿ ಅನ್ನು ರದ್ದುಗೊಳಿಸಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ರೈತರು ಒತ್ತಾಯ ಮಾಡಿದರು.

ರವಿವಾರ ಇಲ್ಲಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ರಾಷ್ಟ್ರೀಯ ರೈತ ಮುಖಂಡರ ದುಂಡು ಮೇಜಿನ ರೈತ ಪರಿಷತ್ ಸಭೆಯಲ್ಲಿ ಹಲವು ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.

ಪ್ರಸಕ್ತವಾಗಿರುವ ರೈತರ ಸಾಲ ನೀತಿ ಬದಲಾಯಿಸಿ ಕೃಷಿ ಭೂಮಿ ಮೌಲ್ಯದ ಶೇಕಡ 75ರಷ್ಟು ಸಾಲ ನೀಡುವಂತೆ ನೀತಿ ರೂಪಿಸಬೇಕು. ಕಬ್ಬಿನ ಎಫ್‍ಆರ್‍ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಗೊಳಿಸಬೇಕು. ಕಬ್ಬಿನಿಂದ ಉತ್ಪಾದಿಸುವ ಎಥನಾಲ್ ಘಟಕ ಆರಂಭಕ್ಕೆ ಸಮೀಪದಲ್ಲಿರುವ ಸಕ್ಕರೆ ಕಾರ್ಖಾನೆ ಅನುಮತಿಬೇಕೆಂಬ ನಿಯಮದ ಮೀತಿ ರದ್ದುಗೊಳಿಸುವಂತೆ ಕೇಂದ್ರ  ಮತ್ತು ರಾಜ್ಯ ಸರಕಾರಕ್ಕೆ ಆಗ್ರಹಿಸಲಾಯಿತು.

ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಿ ಶಾಸನಾತ್ಮಕ ಖಾತ್ರಿ ನೀಡುವಂತೆ ಕಾನೂನು ಜಾರಿಗೆ ತರಬೇಕು. ಎಲ್ಲ ಕೃಷಿ ಉತ್ಪನ್ನ ಬೆಳೆಗಳಿಗೂ ಪಸಲ್ ಬಿಮಾ ಬೆಳೆ ವಿಮೆ ಜಾರಿ ತರಬೇಕು. ಅತಿವೃಷ್ಟಿ-ಅನಾವೃಷ್ಟಿ ಆಕಸ್ಮಿಕ ಬೆಂಕಿ ಪ್ರವಾಹ ಹಾನಿ ಬೆಳೆ ನಾಶ ಪರಿಹಾರ ಮಾನದಂಡ ಬದಲಾಯಿಸಬೇಕು. ಅರಿಶಿನ ಮೇಲಿನ ಜಿಎಸ್ಟಿ ತೆರಿಗೆಯನ್ನು ರದ್ದುಗೊಳಿಸುವಂತೆ ಸಭೆಯಲ್ಲಿ ಒತ್ತಾಯ ಮಾಡಲಾಯಿತು. ಅದೇ ರೀತಿ, ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಿ ದಂತೆ ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ  ರದ್ದುಗೊಳಿಸುವ ಬಗ್ಗೆ, ಸರಕಾರದ ನಿರ್ಧಾರ ಪ್ರಕಟಿಸಬೇಕು. ಅರಣ್ಯ ವನ್ಯಮೃಗಗಳ ಸಂರಕ್ಷಣೆ, ಮಾನವ ರಕ್ಷಣಾ ಕಾನೂನು-1972ಕ್ಕೆ ತಿದ್ದುಪಡಿ ತರುವಂತೆ ಮನವಿ ಮಾಡಲಾಯಿತು.

ಸಭೆಯಲ್ಲಿ ರಾಷ್ಟ್ರೀಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರಾಷ್ಟ್ರೀಯ ಅರಿಶಿನ ಬೆಳೆಗಾರರ ಸಂಘದ ಅಧ್ಯಕ್ಷ ದೈವಸಿಗಾಮಣಿ ತಮಿಳುನಾಡು, ರಾಷ್ಟ್ರೀಯ ಉಪಾಧ್ಯಕ್ಷ ಕೆ.ನರಸಿಂಹ ನಾಯ್ಡು ತೆಲಂಗಾಣ, ಕೆ.ವಿ.ಬೀಜು ಕೇರಳ, ವೀರನಗೌಡ ಪಾಟೀಲ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News