×
Ad

ತಾಂತ್ರಿಕ ಸಮಸ್ಯೆ: ಆಸ್ತಿ ತೆರಿಗೆ ಪಾವತಿಸಲು ಜನಜಂಗುಳಿ

Update: 2022-03-20 21:10 IST

ಮಂಗಳೂರು : ಪಾಲಿಕೆಯು ಕಳೆದ ವರ್ಷ ಆಸ್ತಿ ತೆರಿಗೆ ಪಾವತಿ ಮಾಡಲು ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಈ ಹಣಕಾಸು ವರ್ಷದ ಕೊನೆಯ ತಿಂಗಳಾದ ಕಾರಣ ಪಾಲಿಕೆಯಲ್ಲಿ ತೆರಿಗೆ ಪಾವತಿಗೆ ಜನ ಜಂಗುಳಿಯಾಗುತ್ತಿದೆ. ಆನ್‌ಲೈನ್ ಮೂಲಕ ತೆರಿಗೆ ಪಾವತಿಸಲು ತಾಂತ್ರಿಕ ಸಮಸ್ಯೆ ಕಾರಣ ತೆರಿಗೆ ಪಾವತಿಸಲು ಬಂದವರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಮನಪಾ ಕಚೇರಿಯಲ್ಲಿ ಕಂಡು ಬರುತ್ತಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ೨೦೦೮ರ ಎ.೧ರಿಂದ ಸ್ವಯಂಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ ಜಾರಿಯಲ್ಲಿದೆ. ಈ ಹಿಂದೆ ತೆರಿಗೆದಾರರು ನಿಗದಿತ ನಮೂನೆಗಳಲ್ಲಿ ವಿವರಗಳನ್ನು ಭರ್ತಿ ಮಾಡುವ ಮೂಲಕ ಸೇವಾ ಕೇಂದ್ರ ಹಾಗೂ ಬ್ಯಾಂಕ್‌ಗಳಲ್ಲಿ ಪಾವತಿ ಮಾಡಬೇಕಿತ್ತು. ಇದೀಗ ಡಿಜಿಟಲ್ ತಂತ್ರಜ್ಞಾನ ವ್ಯವಸ್ಥೆ ಬಳಸಿಕೊಳ್ಳಲಾಗುತ್ತಿದ್ದು, ಆನ್‌ಲೈನ್ ಮುಖೇನ ಬಳಸಿಕೊಳ್ಳಲು ವೆಬ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ. ಸಾರ್ವಜನಿಕರು ಆನ್‌ಲೈನ್ ಮುಖೇನ ಹಣ ಪಾವತಿ ಮಾಡುವ ವೇಳೆ ಗೇಟ್‌ವೆ ಹೆಚ್ಚಿನ ಬ್ಯಾಂಕುಗಳಿಗೆ ಸಪೋರ್ಟ್ ಮಾಡದೇ ಇರುವುದರಿಂದ ಪಾವತಿಗೆ ವೇಳೆ ತೊಂದರೆಯಾಗುತ್ತಿದೆ. ಕಳೆದ ವರ್ಷ ಆಸ್ತಿ ತೆರಿಗೆ ಪಾವತಿ ಮಾಡಿದ ಅನೇಕರ ಮಾಹಿತಿ ಆನ್‌ಲೈನ್ ವ್ಯವಸ್ಥೆಯಲ್ಲಿ ಅಪ್‌ಡೇಟ್ ಆಗಿಲ್ಲ. ಇದೇ ಕಾರಣಕ್ಕೆ ಹಿಂದಿನ ವರ್ಷದ ತೆರಿಗೆ ಪಾವತಿಗೆ ಬಾಕಿ ಇದೆ ಎಂದು ತೋರಿಸುತ್ತಿದ್ದು ಪ್ರಸ್ತುತ ತೆರಿಗೆ ಪಾವತಿಗೆ ತೊಂದರೆಯಾಗುತ್ತಿದೆ. ಆನ್‌ಲೈನ್ ಪಾವತಿ ಮಾಡಿದರೂ, ಕೆಲವರಿಗೆ ತೆರಿಗೆ ಬಾಕಿ ಇದೆ ಎಂದು ತೋರಿಸುತ್ತಿದೆ.

ಆನ್‌ಲೈನ್ ವ್ಯವಸ್ಥೆ ಮೂಲಕ ತೆರಿಗೆ ಪಾವತಿ ಮಾಡುವ ನಾಗರಿಕರು ತಮ್ಮ ಆಸ್ತಿ ತೆರಿಗೆಯ ಪೂರ್ಣ ಮಾಹಿತಿ ಯನ್ನು ಅಂದರೆ ಈ ಹಿಂದಿನ ಸಾಲುಗಳಲ್ಲಿ ಪಾವತಿಸಿದ ಮತ್ತು ಮುಂದೆ ಪಾವತಿಸಬೇಕಾದ ಮೊತ್ತಗಳ ಪೂರ್ಣ ಮಾಹಿತಿಯನ್ನು ಪಡೆಯುವ ವ್ಯವಸ್ಥೆ ಹೊಸ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳು ಈ ತಂತ್ರಾಂಶದಲ್ಲಿ ಒಳಗೊಂಡಿರುವುದರಿಂದ ವಾಸ್ತವ್ಯ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು ಮತ್ತು ವಾಣಿಜ್ಯೇತರ ಕೈಗಾರಿಕಾ ಕಟ್ಟಡಗಳು ಸೇರಿದಂತೆ ವಿವಿಧ ವರ್ಗೀಕರಣ ಆಸ್ತಿ ಅಥವಾ ಕಟ್ಟಡಗಳ ಸಂಪೂರ್ಣ ಮಾಹಿತಿ ಪಡೆಯಲು ಬೇಕಾದ ವ್ಯವಸ್ಥೆಯನ್ನು ಈ ಆನ್‌ಲೈನ್ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಪಾಲಿಕೆಯ ವಾರ್ಡ್‌ವಾರು ಕಟ್ಟಡ ಸಂಖ್ಯೆಗಳಿಗೆ ಅನುಗುಣವಾಗಿ ಬಾಕಿ ಇರುವ ತೆರಿಗೆ ಕಟ್ಟಬೇಕಾದ ಮಾಹಿತಿ, ಕಟ್ಟಲು ಬಾಕಿ ಇರುವ ಮೊತ್ತದ ಕುರಿತು ಪೂರ್ಣ ಮಾಹಿತಿ ಲಭ್ಯ ಇರುವಂತೆ ರೂಪಿಸಲಾಗಿದೆ. ಆದರೆ, ಸದ್ಯ ಬಹುತೇಕ ಸೇವೆ ಪಡೆಯುವಲ್ಲಿ ಸಾರ್ವಜನಿಕರಿಗೆ ಸಾಧ್ಯವಾಗುತ್ತಿಲ್ಲ.

ʼʼಆಸ್ತಿ ತೆರಿಗೆ ಪಾವತಿಗೆ ಮಹಾನಗರ ಪಾಲಿಕೆ ಕಳೆದ ವರ್ಷ ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದಿದ್ದು, ಸದ್ಯ ತಾಂತ್ರಿಕ ತೊಂದರೆಯ ಪರಿಣಾಮ ನಾಗರಿಕರಿಗೆ ಅನಾನುಕೂಲ ಉಂಟಾಗಿದೆ. ಈ ತಂತ್ರಜ್ಞಾನದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿ ಡೇಟಾ ( ಅಂಕಿ ಅಂಶಗಳು) ಫೀಡ್ ಆಗದೆ ಇರುವುದರಿಂದ ನಾಗರಿಕರಿಗೆ ಆಸ್ತಿ ತೆರಿಗೆ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪಾಲಿಕೆ ಆದಾಯ ಕುಂಠಿತವಾಗಿ ಅಭಿವೃದ್ಧಿಗೆ ಹಿನ್ನಡೆ ಉಂಟಾಗುತ್ತಿದೆ. ಪಾಲಿಕೆಯಲ್ಲಿ ಎಷ್ಟು ಆಸ್ತಿ ಇದೆ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲʼʼ.
- ಎ.ಸಿ. ವಿನಯರಾಜ್, ಮನಪಾ ಸದಸ್ಯ

ಆಸ್ತಿ ತೆರಿಗೆ ಪಾವತಿ ಮಾಡಲು ಪಾಲಿಕೆ ವ್ಯಾಪ್ತಿಯಲ್ಲಿ ಹೊಸತಾಗಿ ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲಾಗಿದೆ. ಆರಂಭದಲ್ಲಿ ಇಂತಹ ಒಂದಿಷ್ಟು ತೊಂದರೆ ಆಗುತ್ತಿದೆ. ಇನ್ನು ಕೆಲ ತಿಂಗಳಲ್ಲಿಯೇ ಈ ಸಮಸ್ಯೆ ಬಗೆಹರಿಯಲಿದೆ. ಈ ನಡುವೆ ಹೆಚ್ಚುವರಿ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಮಾತ್ರವಲ್ಲದೆ, ಪಾಲಿಕೆಯಲ್ಲಿ ತೆರಿಗೆ ಪಾವತಿಗೆ ಹೆಚ್ಚು ಒತ್ತಡ ಆಗದಂತೆ 10 ಮಂದಿ ತೆರಿಗೆ ಸಂಗ್ರಾಹಕರನ್ನು ಅಪಾರ್ಟ್‌ಮೆಂಟ್‌ಗಳಿಗೆ ಕಳುಹಿಸಿ ತೆರಿಗೆ ಪಾವತಿಗೆ ಕ್ರಮ ವಹಿಸಲಾಗಿದೆ.
-ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News