×
Ad

ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣ; ಸಿಟ್ ತನಿಖೆಗೆ ಆಗ್ರಹಿಸಿ ಪ್ರತಿಭಟನಾ ಜಾಥಾ

Update: 2022-03-21 20:25 IST

ಮಂಗಳೂರು : ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಹತ್ಯೆ ಪ್ರಕರಣದ ಆರೋಪಿಗಳಾದ ನಮೋ ಬ್ರಿಗೇಡ್ ಸಂಸ್ಥಾಪಕ ನರೇಶ್ ಶೆಣೈ ಮತ್ತಿತರರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಬಾಳಿಗಾ ಕುಟುಂಬಕ್ಕೆ ಪರಿಹಾರ ಧನ ನೀಡಬೇಕು. ಪ್ರಕರಣದ ಸತ್ಯಾಸತ್ಯತೆ ಬಯಲಿಗೆಳೆಯುವ ಸಲುವಾಗಿ ಸಿಟ್‌ನಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ಮಂಗಳೂರು ಇದರ ವತಿಯಿಂದ ಸೋಮವಾರ ನಗರದ ಕಾರ್‌ಸ್ಟ್ರೀಟ್‌ನ ಶ್ರೀವೆಂಕಟರಮಣ ದೇವಸ್ಥಾನದಿಂದ ವಿನಾಯಕ  ಬಾಳಿಗಾರ ಮನೆಗೆ ಪ್ರತಿಭಟನಾ ಜಾಥಾ ನಡೆಯಿತು.

ತನಿಖೆಯು ಮಂದಗತಿಯಲ್ಲಿ ಸಾಗುತ್ತಿದೆ, ಆರೋಪಿಗಳನ್ನು ರಕ್ಷಿಸುತ್ತಿದೆ, ಪರಿಹಾರ ಧನ ವಿತರಣೆಯಲ್ಲಿ ತಾರತಮ್ಯ ಎಸಗುತ್ತಿದೆ ಎಂದ ಪ್ರತಿಭಟನಾಕಾರರು ಸ್ಥಳೀಯ ಶಾಸಕ, ಸಂಸದರು ಇನ್ನೂ ಯಾಕೆ ವಿನಾಯಕ ಬಾಳಿಗಾ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿಲ್ಲ ಎಂದು ಪ್ರಶ್ನಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ವಿಚಾರವಾದಿಗಳ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ʼವಿನಾಯಕ ಬಾಳಿಗಾರ ಕೊಲೆಯಾಗಿ ಇಂದಿಗೆ 6 ವರ್ಷವಾಗಿದೆ. ನ್ಯಾಯಕ್ಕಾಗಿ ನಾವು ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಿಲ್ಲ. ಅದಕ್ಕಾಗಿ ಸಿಟ್ ತನಿಖೆಯಾಗಬೇಕು. ಆರೋಪಿಗಳನ್ನು ಮಂಪರು ಪರೀಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

ನನಗೂ ವಿನಾಯಕ ಬಾಳಿಗಾರಿಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ. ನಾನೊಬ್ಬ ಜಾತ್ಯತೀತನಾಗಿದ್ದರೆ, ವಿನಾಯಕ ಬಾಳಿಗಾ ಹಿಂದುತ್ವವಾದಿ. ಆದರೆ ಆರ್‌ಟಿಐ ಕಾರ್ಯಕರ್ತವಾಗಿದ್ದ ವಿನಾಯಕ ಬಾಳಿಗಾ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದ ಪ್ರಾಮಾಣಿಕ. ಭಾರತ ಮಾತೆ, ಗೋರಕ್ಷಕರು ಎಂದು ಹೇಳಿಕೊಳ್ಳುವ ಸಂಘಟನೆಯಲ್ಲೇ ಸಕ್ರಿಯನಾಗಿದ್ದ ವಿನಾಯಕ ಬಾಳಿಗಾರನ್ನು ಬರ್ಬರವಾಗಿ ಕೊಂದರೂ ಕೂಡ ಆ ಸಂಘಟನೆಯವರು ಮೌನ ತಾಳಿರುವುದು ವಿಪರ್ಯಾಸ. ಹಾಗಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗದಿದ್ದರೆ ಇಂತಹ ಕೊಲೆಗಳು ಮರುಕಳಿಸಬಹುದು ಎಂದು ಎಚ್ಚರಿಸಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ ವಿನಾಯಕ ಬಾಳಿಗಾರ ಕುಟುಂಬಕ್ಕೆ ಇನ್ನೂ ನೆರವು ಸಿಕ್ಕಿಲ್ಲ.  ಪರಿಹಾರ ಧನವೂ ಸಿಕ್ಕಿಲ್ಲ. ಹಾಗಾಗಿ ಅವರ ಕುಟುಂಬದ ಜೊತೆ ಸಮಾಜ ನಿಲ್ಲಬೇಕಿದೆ, ನ್ಯಾಯ ಒದಗಿಸಿಕೊಡಬೇಕಿದೆ ಎಂದರು.

ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ ವಿನಾಯಕ ಬಾಳಿಗಾರ ಕೊಲೆಯಾದಾಗ ಕಾಂಗ್ರೆಸ್ ಸರಕಾರವಿತ್ತು. ಬಳಿಕ ತನಿಖಾ ಹಂತದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವಿತ್ತು. ಇದೀಗ ಬಿಜೆಪಿ ಸರಕಾರವೇ ಇದೆ. ಆದರೆ, ಸೂಕ್ತ ರೀತಿಯಲ್ಲಿ ತನಿಖೆಯಾಗಿಲ್ಲ. ನ್ಯಾಯ ಮರೀಚಿಕೆಯಾಗಿದೆ. ಇದೀಗ ಕೆಲವರು ಱಕಾಶ್ಮೀರಿ ಫೈಲ್ಸ್ ಚಲನಚಿತ್ರ ನೋಡಿ ಕಣ್ಣೀರಿಳಿಸುತ್ತಿದ್ದಾರೆ. ಇಲ್ಲೇ ನಮ್ಮೂರಲ್ಲೇ ವಿನಾಯಕ ಬಾಳಿಗಾರ ಕೊಲೆಯನ್ನು ನೋಡಿ, ಕೇಳಿದ ಅವರು ಯಾಕೆ ಕಣ್ಣೀರು ಸುರಿಸಿಲ್ಲ? ಜಿಎಸ್‌ಬಿ ಸಮುದಾಯ ಯಾಕೆ ಮೌನ ವಹಿಸಿದೆ ಎಂದು ಪ್ರಶ್ನಿಸಿದರು.

ಈ ಸಂದರ್ಭ ವಿನಾಯಕ ಬಾಳಿಗಾರ ಸಹೋದರಿ ಅನುರಾಧಾ ಬಾಳಿಗಾ, ವಿವಿಧ ಸಂಘಟನೆಗಳ ಮುಖಂಡರಾದ ಎಂ.ದೇವದಾಸ್, ಮುನೀರ್ ಕಾಟಿಪಳ್ಳ, ವಿ.ಕುಕ್ಯಾನ್, ವಾಸುದೇವ ಉಚ್ಚಿಲ್. ಸುನೀಲ್ ಬಜಿಲಕೇರಿ, ಶಾಲೆಟ್ ಪಿಂಟೋ, ಅಮೃತ ಶೆಣೈ ಉಡುಪಿ, ಡಾ. ಕೃಷ್ಣಪ್ಪ ಕೊಂಚಾಡಿ, ಸುರಯ್ಯಾ ಅಂಜುಮ್, ಮಾಜಿ ಕಾರ್ಪೊರೇಟರ್‌ಗಳಾದ ಮುಹಮ್ಮದ್ ಕುಂಜತ್ತಬೈಲ್, ಅಪ್ಪಿ, ಪ್ರಕಾಶ್ ಸಾಲ್ಯಾನ್, ರಘು ಎಕ್ಕಾರು, ಸಮರ್ಥ್ ಭಟ್, ಲಾರೆನ್ಸ್ ಡಿಸೋಜ, ಟಿ.ಕೆ. ಸುಧೀರ್, ಅಸುಂತ ಡಿಸೋಜ, ಮೈಕಲ್ ಡಿಸೋಜ, ಕುರಣಾಕರ್, ರಾಕೇಶ್ ದೇವಾಡಿಗ, ಮಂಜುಳಾ ನಾಯಕ್, ಹರ್ಷ ಬಾಳಿಗಾ, ಕದ್ರಿ ಟವರ್ಸ್‌, ಚಂದ್ರಕಲಾ, ವೀಣಾ ಭಟ್, ಶ್ಯಾಮಸುಂದರ್, ನವೀನ್ ಕೊಂಚಾಡಿ  ಮತ್ತಿತರರು ಪಾಲ್ಗೊಂಡಿದ್ದರು.

ಡಿವೈಎಫ್‌ಐ ದ.ಕ.ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News