ಕ್ಷಯರೋಗ ನಿವಾರಣೆಗೆ ಜಿಲ್ಲಾಡಳಿತದಿಂದ ಅಗತ್ಯ ನೆರವು: ಡಿಸಿ ಡಾ. ರಾಜೇಂದ್ರ
ಮಂಗಳೂರು : ಕ್ಷಯರೋಗಿಗಳನ್ನು ಗುಣಪಡಿಸಲು ಅಧಿಕಾರಿಗಳು ರೂಪಿಸುವ ನೂತನ ಯೋಜನೆಗಳಿಗೆ ಜಿಲ್ಲಾಡಳಿತ ಅಗತ್ಯ ನೆರವು ಹಾಗೂ ಅನುದಾನ ನೀಡಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.
ದ.ಕ. ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕ್ಷಯ ಹಾಗೂ ಎಚ್‌ಐವಿ ಸಂಬಂಧಿತ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದ.ಕ.ಜಿಲ್ಲೆ ಕ್ಷಯ ಮುಕ್ತವಾಗಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಆಸಕ್ತಿ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡಿದರೆ ಪ್ರಗತಿ ಸಾಧಿಸಬಹುದಾಗಿದೆ. ರೋಗಿಗಳ ಪರವಾಗಿ ಅಧಿಕಾರಿಗಳು ಯಾವುದೇ ಉತ್ತಮ ಯೋಜನೆ ರೂಪಿಸಿದರೂ ಅದಕ್ಕೆ ಬೇಕಾದ ನೆರವು ಹಾಗೂ ಅನುದಾನ ನೀಡಲು ಜಿಲ್ಲಾಡಳಿತ ಸಿದ್ಧವಿದೆ ಎಂದರು.
ಪಡಿತರ ಚೀಟಿ ಹೊಂದಿಲ್ಲದ ಕ್ಷಯರೋಗಿಗಳನ್ನು ಗುರುತಿಸಬೇಕು, ಅರ್ಹತೆಗೆ ಅನುಗುಣವಾಗಿ ಬಿಪಿಎಲ್ ಪಡಿತರ ಚೀಟಿಗಳನ್ನು ಕೊಡಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್, ಫಾದರ್ ಮುಲ್ಲರ್ ಆಸ್ಪತ್ರೆಯ ವಿಭಾಗ ಮುಖ್ಯಸ್ಥ ಡಾ.ಸೌರಭ್ ಕುಮಾರ್, ಡಾ.ಎಲಿಜಬೆತ್, ನ್ಯಾಯವಾದಿ ಹರಿಶ್ಚಂದ್ರ, ಮಾದಕ ವಸ್ತು ನಿಯಂತ್ರಣಾಧಿಕಾರಿ ಡಾ.ಶಂಕರ್ ನಾಯಕ್, ಕೌನ್ಸಿಲರ್ ಭವ್ಯಾ ಮತ್ತಿತರರು ಉಪಸ್ಥಿತರಿದ್ದರು.