ಜಾನಪದವನ್ನು ಜನಪರಗೊಳಿಸಿದ ಮಳವಳ್ಳಿ ಮಹದೇವಸ್ವಾಮಿ

Update: 2022-03-21 19:30 GMT

ಜಾನಪದ ಗಾಯಕ, ದಲಿತ ಸಮುದಾಯದ ಮಳವಳ್ಳಿ ಮಹದೇವಸ್ವಾಮಿಯವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಈ ಬಾರಿಯ ಗೌರವ ಡಾಕ್ಟರೇಟ್ ದೊರಕಿದೆ. ಮಳವಳ್ಳಿ ಮಹದೇವಸ್ವಾಮಿಯವರು ದಕ್ಷಿಣ ಕರ್ನಾಟಕದ ಬಹು ದೊಡ್ಡ ಹೆಸರು. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕೃಷ್ಣಾಪುರದವರಾದ ಮಳವಳ್ಳಿಯವರ ಮೂಲ ಹೆಸರು ಕೃಷ್ಣಾಪುರ ಎಂ.ಮಹದೇವಸ್ವಾಮಿ. ಜನನ 16-6-1959. ಓದಿದ್ದು ಹತ್ತನೇ ತರಗತಿವರೆಗೆ. ಒಲಿದಿದ್ದು ಜಾನಪದದ ಕಡೆಗೆ. ತಂದೆ ಶಹನಾಯಿ ಮಾದಯ್ಯ ಸುಪ್ರಸಿದ್ಧ ಶಹನಾಯ್ ವಾದಕರು, ತಾಯಿ ಮಂಚಮ್ಮ ಸೋಬಾನೆ ಹಾಡುಗಾರ್ತಿ. ಹಾಗಾಗಿ ತಂದೆಯ ಜೊತೆಗೆ ಬಾಲ್ಯದಿಂದಲೇ ನಾಟಕದ ತಂಡದ ಜೊತೆ ತೆರಳುತ್ತಿದ್ದ ಮಹದೇವಸ್ವಾಮಿಯವರು ಅಲ್ಲಿ ತಮ್ಮ ಗಾಯನದ ಝಲಕ್ ಪ್ರಾರಂಭಿಸಲಾರಂಭಿಸಿದರು. ಹಾಗೆ ಬರುಬರುತ್ತಾ ಹರಿಕಥೆ ಓದುವ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಲಾರಂಭಿಸಿದರು. ಹೀಗೆ ಅವರ ಹರಿಕಥೆ ಓದುವುದು ಜನಪ್ರಿಯ ಆಗುತ್ತಿದ್ದಂತೆ ಆ ಕಾಲದಲ್ಲಿ ಸುಪ್ರಸಿದ್ಧ ಕ್ಯಾಸೆಟ್ ಕಂಪೆನಿ ಝೇಂಕಾರ್ 1988ರಲ್ಲೇ ಮಹದೇವಸ್ವಾಮಿಯವರ ಬಳಿ ಬಂದು ತಮ್ಮ ಎಲ್ಲಾ ಕಥೆಗಳನ್ನು ಕ್ಯಾಸೆಟ್ ರೂಪದಲ್ಲಿ ತಮಗೆ ಮಾಡಲು ಹಕ್ಕು ಕೊಡುವಂತೆ ಕೇಳಿದರು. ಆದರೆ ಮಹದೇವಸ್ವಾಮಿಯವರ ಸಹೋದರ ಮತ್ತು ಸಂಗೀತಗಾರರಾದ ವಿ.ನಾಗೇಂದ್ರ ಆ ಪ್ರಸ್ತಾಪ ತಿರಸ್ಕರಿಸುವಂತೆ ಸಲಹೆ ನೀಡಿ ಮಹದೇವಸ್ವಾಮಿಯವರೇ ಕ್ಯಾಸೆಟ್‌ಗಳನ್ನು ಮಾಡುವಂತೆ ಹೇಳಿದರಂತೆ. ಈ ಸಲಹೆ ಸ್ವೀಕರಿಸಿದ ಮಹದೇವಸ್ವಾಮಿಯವರು ತಮ್ಮ ಮ್ಯೂಸಿಕ್ ತಂಡದ ಹೆಸರಿನಲ್ಲಿ ಬ್ಯಾಂಡ್ ಸೆಟ್‌ಗಾಗಿ ಆ ಕಾಲದಲ್ಲಿ (1992) ಸರಕಾರದಿಂದ ಸುಮಾರು 8 ಸಾವಿರ ರೂ. ಸಾಲ ಪಡೆದರಂತೆ. ಆ ಸಾಲ ಮಹದೇವಸ್ವಾಮಿಯವರ ಬದುಕಿನ ದಿಕ್ಕು ಬದಲಿಸಿತು.

ಇದರ ಜೊತೆಗೆ ತಮ್ಮ ಹೆಂಡತಿಯ ಒಡವೆಗಳನ್ನು ಅಡವಿಟ್ಟು ಸುಮಾರು 60 ಸಾವಿರ ಹಣದಲ್ಲಿ ಪ್ರಥಮವಾಗಿ ಸಿದ್ದಪ್ಪಾಜಿಯವರ ಕತೆಯ ಮೂರು ಕ್ಯಾಸೆಟ್‌ಗಳನ್ನು ಅವರು ಹೊರತಂದರು(1993). ಅಂದಹಾಗೆ ಅದರ ವ್ಯಾಪಾರ? ಅದೇ ವರ್ಷ ನಡೆದ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯಲ್ಲಿ ಆ ಮೂರು ಕ್ಯಾಸೆಟ್ ಗಳು ಮಾರಾಟವಾಗಿ ಆ ಕಾಲದಲ್ಲೇ ಸುಮಾರು 90 ಸಾವಿರ ಹಣ ಬಂತಂತೆ! ಅಂದರೆ ಒಂದೇ ಜಾತ್ರೆಯಲ್ಲಿ ಅವರು ಹಾಕಿದ ಹಣ ಲಾಭದ ಸಮೇತ ವಾಪಸ್ ಬಂದಿತು. ಇದು ಮಹದೇವಸ್ವಾಮಿಯವರ ಉತ್ಸಾಹವನ್ನು ನೂರ್ಮಡಿಗೊಳಿಸಿತು. ಮುಂದೆ ಮಹದೇವಸ್ವಾಮಿಯವರು ಮುಟ್ಟಿದ್ದೆಲ್ಲ ಚಿನ್ನ. ಹೇಗೆಂದರೆ ಇದುವರೆಗೂ ಮಹದೇವಸ್ವಾಮಿಯವರು ತಮ್ಮ ಗಾಯನದ ಸುಮಾರು 150ಕ್ಕೂ ಹೆಚ್ಚು ಕ್ಯಾಸೆಟ್ ಗಳನ್ನು ಮಾಡಿದ್ದಾರೆ. ಈಗ ಯೂಟ್ಯೂಬ್‌ನಲ್ಲೂ ಸಕ್ರಿಯರಾಗಿದ್ದಾರೆ.

ಮಹದೇವಸ್ವಾಮಿಯವರಿಗೆ ಆರಂಭದಿಂದಲೂ ಹೆಗಲಿಗೆ ಹೆಗಲು ಕೊಟ್ಟು ಹಾಡುಗಳನ್ನು ಬರೆದುಕೊಡುವುದು, ಸಂಗೀತ ಸಂಯೋಜಿಸಿದವರು ಅವರ ಸಹೋದರ ವಿ.ನಾಗೇಂದ್ರರವರು. ನಂತರ ಚಾಮರಾಜನಗರದ ಕಾಗಲವಾಡಿ ಗ್ರಾಮದವರಾದ ಕಾಗಲವಾಡಿ ಶಿವಯ್ಯನವರು. ಕಾಗಲವಾಡಿ ಶಿವಯ್ಯನವರ ಸಾಹಿತ್ಯ ಮತ್ತು ರಾಗ ಸಂಯೋಜನೆಯಲ್ಲಿ ಮೂಡಿಬಂದ ‘‘ಮಾದಪ್ಪಕಾಯೋ ತಂದೆ...’’ ತಮ್ಮ ಅತ್ಯಂತ ಜನಪ್ರಿಯ ಕ್ಯಾಸೆಟ್ ಎಂದು ಸ್ವತಃ ಮಹದೇವಸ್ವಾಮಿಯವರು ಸ್ಮರಿಸಿಕೊಳ್ಳುತ್ತಾರೆ. ಹಾಗೆಯೇ ಸಹೋದರ ವಿ.ನಾಗೇಂದ್ರ ಅವರ ‘‘ತಾಳಿ ತಾಳಿ ಚಿನ್ನದ ತಾಳಿ... ಹೆಣ್ಣಿನ ಬಾಳಿಗೆ ಇದುವೆ ಬೇಲಿ...’’ ಅವರ ಮತ್ತೊಂದು ಜನಪ್ರಿಯ ಗೀತೆ ಎಂದು ಕೂಡ ಅವರು ಸ್ಮರಿಸಿಕೊಳ್ಳುತ್ತಾರೆ. ಈಗ ಯೂಟ್ಯೂಬ್ ಕಾಲದಲ್ಲಿ ಮಹದೇವಸ್ವಾಮಿಯವರಿಗೆ ಸಾಹಿತ್ಯ ಮತ್ತು ರಾಗಸಂಯೋಜನೆಯಲ್ಲಿ ಬೆಂಬಲವಾಗಿರುವವರು ಯಳಂದೂರಿನ ಕೊಮಾರನಪುರ ರವಿಕುಮಾರ್‌ರವರು.

ಮಹದೇವಸ್ವಾಮಿಯವರ ಮತ್ತಷ್ಟು ಜನಪ್ರಿಯ ಹಾಡುಗಳನ್ನು ಪ್ರಸ್ತಾಪಿಸುವುದಾದರೆ, ‘ಹೋಗಲಾರೆ ಹಲಗೂರಿಗೆ ನಾನು...’, ‘ಮಾದೇಶ್ವರ ದಯಬಾರದೆ...’, ‘ನಿನ ಪಾದ ನಂಬಿ ಬಂದೆ...’, ‘ಅಂದದ ಗಿರಿ ಚಂದ ನೋಡಿರೊ...’ ಇತ್ಯಾದಿ. ಅಂದಹಾಗೆ ಮಲೈ ಮಹದೇಶ್ವರ, ಸಿದ್ದಪ್ಪಾಜಿ ಕುರಿತ ಅವರ ಹಾಡುಗಳು ಮಹದೇಶ್ವರ ಬೆಟ್ಟಕ್ಕೆ ಭಕ್ತಾದಿಗಳನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಿಸಲು ಸಹಕಾರಿಯಾಯಿತು ಎಂದರೆ ಅತಿಶಯೋಕ್ತಿಯೆನಿಸದು. ಆ ಮಟ್ಟಿಗೆ ಮಹದೇವಸ್ವಾಮಿಯವರ ಖ್ಯಾತಿ ಇದೆ. ಹೇಗೆ ಅಯ್ಯಪ್ಪಸ್ವಾಮಿಯ ಜನಪ್ರಿಯತೆ ಹೆಚ್ಚಿಸಲು ಜೇಸುದಾಸ್ ಹಾಡುಗಳು ವೇದಿಕೆ ಒದಗಿಸಿದವೋ ಹಾಗೆ ಮಲೈಮಹದೇಶ್ವರ, ಸಿದ್ದಪ್ಪಾಜಿ ಮತ್ತು ಮಂಟೇಸ್ವಾಮಿ ಜನಪ್ರಿಯತೆ ಹೆಚ್ಚಿಸಲು ಮಹದೇವಸ್ವಾಮಿಯವರ ಹಾಡುಗಳು, ಮಳವಳ್ಳಿ ಮಹದೇವಸ್ವಾಮಿಯವರ ಕ್ಯಾಸೆಟ್‌ಗಳು ನೆರವಾಗಿವೆ. ಮಹದೇವಸ್ವಾಮಿಯವರ ಕ್ಯಾಸೆಟ್‌ಗಳ ದಾಖಲೆ ಬಹಳ ರೋಚಕ.

ಬಹುಶಃ ದಾಖಲೆ ಮೇಲೆ ದಾಖಲೆ ಸಂಖ್ಯೆಯಲ್ಲಿ ಅವು ಮಾರಾಟವಾಗಿರಬಹುದು, ಸುಮಾರು 20 ಲಕ್ಷ ಕ್ಯಾಸೆಟ್‌ಗಳು ಮಾರಾಟವಾಗಿರಬಹುದು ಎಂದು ಅವರು ತಿಳಿಸುತ್ತಾರೆ. ಅಂದಹಾಗೆ ಎಲ್ಲರ ಅಂಕಿ ಸಂಖ್ಯೆ ದಾಖಲು ಇಟ್ಟಿರುವ ನಮ್ಮ ಜನಪ್ರಿಯ ಸಿನೆಮಾ ಮತ್ತು ಸಂಗೀತ ಪತ್ರಕರ್ತರು ಮಳವಳ್ಳಿ ಮಹದೇವಸ್ವಾಮಿಯವರ ಬಗ್ಗೆ ಅಂತಹ ದಾಖಲೆಗಳು ಇಟ್ಟಿಲ್ಲ, ಬರೆದಿಲ್ಲ! ಹೇಗೆಂದರೆ, ತೊಂಬತ್ತರ ದಶಕದ ಆ ಕ್ಯಾಸೆಟ್ ಯುಗದಲ್ಲಿ ನನಗೆ ತಿಳಿದಂತೆ ಎಲ್ಲರ ಮನೆಯಲ್ಲೂ ಮಳವಳ್ಳಿ ಮಹದೇವಸ್ವಾಮಿಯವರ ಮಹದೇಶ್ವರ ಮತ್ತು ಮಂಟೇಸ್ವಾಮಿಯವರ ಹಾಡುಗಳು ಬೆಳಗ್ಗೆ ಎದ್ದಂತೆ ಸುಪ್ರಭಾತದಂತೆ ಹಾಕಲ್ಪಡುತ್ತಿದ್ದವು. ಟೇಪ್ ರೆಕಾರ್ಡರ್ ಅಂದರೆ ಅಲ್ಲಿ ಮಳವಳ್ಳಿ ಮಹದೇವಸ್ವಾಮಿಯವರ ಕ್ಯಾಸೆಟ್ ಇರಲೇಬೇಕು ಎಂಬಂತಿತ್ತು ಸಂಗೀತ ಸಂಪ್ರದಾಯ. ಇನ್ನು ಮೈಸೂರು ಭಾಗದಲ್ಲಿ ಹೆಚ್ಚು ಇರುವ ಖಾಸಗಿ ಬಸ್ಸುಗಳಲ್ಲಿ ಮಳವಳ್ಳಿಯವರ ಹಾಡುಗಳು ಕಡ್ಡಾಯ ಇರಲೇಬೇಕು! ಸಿನೆಮಾ ಹಾಡು ಬಿಟ್ಟರೆ ಮಳವಳ್ಳಿ ಮಹದೇವಯ್ಯನ ಹಾಡು ಹಾಕಿ ಎಂದು ಪ್ರಯಾಣಿಕರೇ ಡಿಮ್ಯಾಂಡ್ ಮಾಡುತ್ತಿದ್ದರು, ಆ ಪರಿಯ ಬೇಡಿಕೆ ಮಳವಳ್ಳಿ ಮಹದೇವಸ್ವಾಮಿಯವರಿಗೆ ಆ ಕಾಲದಲ್ಲಿ! ಇನ್ನು ರೇಷ್ಮೆ ನೂಲು ತೆಗೆಯುವ ಕೈಗಾರಿಕೆ ಜಾಸ್ತಿ ಇದ್ದ ಆ ಕಾಲದಲ್ಲಿ ನೂಲು ತೆಗೆಯುವ ಕಾರ್ಮಿಕರು ಜೋರಾಗಿ ಮಳವಳ್ಳಿ ಮಹದೇವಸ್ವಾಮಿಯವರ ಹಾಡುಗಳನ್ನು ಹಾಕಿಕೊಂಡೆ, ಜೊತೆಗೆ ಹಾಡು ಗುನುಗಿಕೊಂಡೆ ನೂಲು ತೆಗೆಯುತ್ತಿದ್ದದ್ದು! ಆನಂತರದ ವೀಡಿಯೊ ಕ್ಯಾಸೆಟ್ ಪ್ರಪಂಚದಲ್ಲೂ ಅಷ್ಟೇ, ಮಳವಳ್ಳಿ ಮಹದೇವಸ್ವಾಮಿಯವರು ಈ ಅವಕಾಶವನ್ನು ಬಿಡಲಿಲ್ಲ. ತಮ್ಮ ಹಾಡುಗಳಿಗೆ ಕೊಮಾರನಪುರ ರವಿಕುಮಾರ್ ಮತ್ತು ಇತರರಿಂದ ನೃತ್ಯ ಸಂಯೋಜನೆ ಮಾಡಿಸಿ, ಹಾಡಿ ವೀಡಿಯೊ ಆಲ್ಬಂ ಬಿಡುಗಡೆ ಮಾಡಿ ಅವುಗಳ ಮೂಲಕವೂ ಸಾಕಷ್ಟು ಜನಪ್ರಿಯತೆ ಗಳಿಸಿದರು.

ಇಷ್ಟೆಲ್ಲಾ ಜನಪ್ರಿಯತೆ ಗಳಿಸಿದರೂ ನಮ್ಮ ಸಿನೆಮಾ ಕ್ಷೇತ್ರ ಅವರನ್ನು ಗುರುತಿಸಲಿಲ್ಲ. ಅವರ ಸೇವೆ ಬಳಸಿಕೊಳ್ಳಲಿಲ್ಲ. ಬಹುಶಃ ಮಹದೇವಸ್ವಾಮಿಯವರ ದಲಿತ ಸಮುದಾಯದ ಹಿನ್ನೆಲೆ ಅದಕ್ಕೆ ಕಾರಣ. ಆದರೆ ಜನ ಹಾಗಲ್ಲ. ಜನರು, ಜನಪದ ಶೈಲಿಯ ತಮ್ಮದೇ ಹಾಡುಗಳನ್ನು ಹೆಚ್ಚು ಇಷ್ಟ ಪಟ್ಟರು. ಮಹದೇವಸ್ವಾಮಿಯವರ ಹಾಡುಗಳನ್ನು ಕೇಳಿ ಮಹದೇಶ್ವರ ಬೆಟ್ಟಕ್ಕೆ ಮುಂದಿನ ಸಾರಿ ಯಾವಾಗ ಹೋಗುವುದು ಎಂದು ಅಲ್ಲೇ ನಿರ್ಧರಿಸುತ್ತಿದ್ದರು. ಚಿಕ್ಕಲ್ಲೂರಿನ ಸಿದ್ದಪ್ಪಾಜಿ ಕ್ಷೇತ್ರ, ಬೊಪ್ಪೇಗೌಡನಪುರದ ಮಂಟೇಸ್ವಾಮಿ ಕ್ಷೇತ್ರಕ್ಕೆ ಹೋಗಲೇಬೇಕು ಎಂದು ಅಲ್ಲಲ್ಲೇ ನಿರ್ಧಾರ ಮಾಡಿಕೊಳ್ಳುತ್ತಿದ್ದರು. ಖಂಡಿತವಾಗಿ, ಅಲ್ಲಿ ಕೆಲಸ ಮಾಡುತ್ತಿದ್ದದ್ದು ಮಹದೇವಸ್ವಾಮಿಯವರ ಹಾಡುಗಳು. ಆಗೆಲ್ಲ ನಾನು ಮಹದೇವಸ್ವಾಮಿಯವರಿಗೆ ಆ ಪ್ರಶಸ್ತಿ ಬರುತ್ತೆ, ಈ ಪ್ರಶಸ್ತಿ ಬರುತ್ತದೆ ಅಂದುಕೊಳ್ಳುತ್ತಿದ್ದೆ. ಆದರೆ ಮೊದಲೇ ಹೇಳಿದ ದಲಿತ ಕಾರಣ ಮಹದೇವಸ್ವಾಮಿಯವರ ಜೊತೆ ಇರುತ್ತಲ್ಲ! ಜಾತಿ ಅರ್ಹತೆ ಎಲ್ಲಾ ಅರ್ಹತೆ ಮತ್ತು ಯೋಗ್ಯತೆಗಳಿಗಿಂತ ಬಲು ದೊಡ್ಡದು. ಆದ್ದರಿಂದ ಜಾತಿಯುಕ್ತ ವ್ಯವಸ್ಥೆಯಲ್ಲಿ ಮಳವಳ್ಳಿ ಮಹದೇವಸ್ವಾಮಿಯವರಂತಹ ತಳ ಸಮುದಾಯಗಳ ಪ್ರತಿಭೆಗಳು ಬಹಳ ನಷ್ಟ ಅನುಭವಿಸಿವೆ, ಅನುಭವಿಸುತ್ತಲೇ ಇವೆ. ಈ ಕಾರಣಕ್ಕೆ ತಡವಾಗಿಯಾದರೂ ಮಹದೇವಸ್ವಾಮಿಯವರಿಗೆ ಈ ಬಾರಿಯ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಬಂದಿರುವುದು ಖಂಡಿತ ಅದು ಮಹದೇವಸ್ವಾಮಿಯವರಿಗೆ ಸಂದ ಅರ್ಹ ಗೌರವವಾಗಿದೆ.

ಆ ಮೂಲಕ ವಿಶ್ವವಿದ್ಯಾನಿಲಯ ಕೂಡ ತನ್ನ ಗೌರವ ಮತ್ತು ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಆ ಮಟ್ಟಿಗೆ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಅನ್ನು ಮೀರಿ ಮಳವಳ್ಳಿ ಮಹದೇವಸ್ವಾಮಿಯವರ ಪ್ರತಿಭೆ ಪ್ರಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಜಾತಿ ಪೊರೆ ಕಳಚಿ ವ್ಯವಸ್ಥೆ ಮಳವಳ್ಳಿ ಮಹದೇವಸ್ವಾಮಿಯವರಂತಹ ಇಂತಹ ಅನೇಕ ಪ್ರತಿಭೆಗಳನ್ನು ಸಾಹಿತ್ಯ, ಸಂಗೀತ, ಕಲೆ, ನಾಟಕ, ಚಿತ್ರಕಲೆ... ಹೀಗೆ ಅನೇಕ ಕ್ಷೇತ್ರಗಳಲ್ಲಿ ತಾರತಮ್ಯ ಮೀರಿ ಗೌರವಿಸಬೇಕಿದೆ. ಅಂತಹ ಗೌರವ ಸಮ ಸಮಾಜದ ಸ್ಪಷ್ಟ ಪರಿಕಲ್ಪನೆಯ ಸುಭದ್ರ ತಳಪಾಯವಾಗಿದೆ. ಈ ನಿಟ್ಟಿನಲ್ಲಿ ಮಳವಳ್ಳಿ ಮಹದೇವಸ್ವಾಮಿಯವರು ಅಕ್ಷರಶಃ ಅಭಿನಂದನಾರ್ಹರು. ಅವರಿಂದ ಇನ್ನಷ್ಟು ಹೆಚ್ಚು ಹೆಚ್ಚು ಹಾಡುಗಳು, ಅವರಿಗೆ ಸಂದಿರುವ ಈ ಡಾಕ್ಟರೇಟ್ ತಳಸಮುದಾಯಗಳ ಇನ್ನಷ್ಟು ಸಾಧಕರಿಗೆ ಸ್ಫೂರ್ತಿಯಾಗಲಿ.

Writer - ರಘೋತ್ತಮ ಹೊ.ಬ.

contributor

Editor - ರಘೋತ್ತಮ ಹೊ.ಬ.

contributor

Similar News