×
Ad

ಸಾಧನೆ ಮಾಡದ ಖಾಸಗಿ ಬ್ಯಾಂಕ್‌ಗಳ ವಿರುದ್ಧ ಕ್ರಮ: ದ.ಕ. ಜಿಪಂ ಸಿಇಒ ಎಚ್ಚರಿಕೆ

Update: 2022-03-22 21:16 IST
ಡಾ.ಕುಮಾರ್

ಮಂಗಳೂರು : ಪ್ರಧಾನಮಂತ್ರಿ ಉದ್ಯೋಗ ಸೃಜನ ಸಹಿತ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯಗಳನ್ನು ನೀಡದೆ ಯಾವುದೇ ಸಾಧನೆಯನ್ನೂ ಮಾಡದ ಜಿಲ್ಲೆಯ ಖಾಸಗಿ ಬ್ಯಾಂಕ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಪಂ ಸಿಇಒ ಡಾ.ಕುಮಾರ್ ಎಚ್ಚರಿಕೆ ನೀಡಿದರು.

ನಗರದ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರಕಾರ ರೂಪಿಸಿರುವ ವಿವಿಧ ಯೋಜನೆಗಳಡಿ ಸರಕಾರಿ ಸ್ವಾಮ್ಯದ ಎಲ್ಲಾ ಬ್ಯಾಂಕುಗಳು ಅರ್ಹ ಫಲಾನುಭವಿಗಳಿಗೆ ಸಾಲಸೌಲಭ್ಯ ಹಾಗೂ ಸವಲತ್ತುಗಳನ್ನು ಒದಗಿಸುವ ಮೂಲಕ ಉತ್ತಮ ಸಾಧನೆ ಮಾಡಿವೆ. ಆದರೆ ಐಸಿಐಸಿಐ, ಹೆಚ್‌ಡಿಎಫ್‌ಸಿ ಮತ್ತು ಆಕ್ಸಿಸ್ ಬ್ಯಾಂಕ್‌ಗಳು ಸಾಧನೆ ಮಾಡದೆ ಸರಕಾರದ ಯೋಜನೆಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ವಿಫಲವಾಗಿವೆ ಎಂದರು.

ಜಿಲ್ಲೆಗೆ 2022-23ನೇ ಸಾಲಿಗೆ 21,023 ಕೋ.ರೂ.ಗಳ ಸಾಲ ಯೋಜನೆಯನ್ನು ನಿಗದಿ ಮಾಡಲಾಗಿದೆ. ಈ ಪೈಕಿ 14,223 ಕೋ.ರೂ. ಆದ್ಯತಾ ವಲಯಕ್ಕೆ ಮೀಸಲಿರಿಸಲಾಗಿದೆ. ಸಾಲ ಮತ್ತು ಆದ್ಯತಾ ವಲಯಕ್ಕೆ ಮೀಸಲಿರಿಸಿದ ಗುರಿ ಸಾಧನೆಗೆ ಎಲ್ಲಾ ಬ್ಯಾಂಕ್‌ಗಳು ಶ್ರಮ ವಹಿಸಬೇಕು. ನಿಗದಿಪಡಿಸಲಾದ ಗುರಿ ಸಾಧಿಸಬೇಕು. ಇಲ್ಲದಿದ್ದಲ್ಲಿ ಆ ಬ್ಯಾಂಕುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಕುಮಾರ್ ತಾಕೀತು ಮಾಡಿದರು.

ಕೇಂದ್ರ ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯತನ ತೋರಲಾಗಿದೆ, ಈ ಬಾರಿಯು ಕೂಡ ನಿರಿಕ್ಷಿತ ಪ್ರಗತಿ ಸಾಧಿಸಿಲ್ಲ ಈ ಬ್ಯಾಂಕುಗಳಿಗೆ ನೋಟಿಸ್ ಜಾರಿ ಮಾಡಲಾಗುವುದು, ಪ್ರಸಕ್ತ ಹಣಕಾಸು ವರ್ಷದ ಮುಂದಿನ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ತೋರದಿದ್ದರೆ ಶಿಸ್ತುಕ್ರಮ ಅನಿವಾರ್ಯ ಎಂದು ಡಾ.ಕುಮಾರ್ ಎಚ್ಚರಿಸಿದರು.

ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪ್ರವೀಣ್ ಮಾತನಾಡಿ 2022-23ರ ಜಿಲ್ಲಾ ಸಾಲ ಯೋಜನೆಯಲ್ಲಿ ಶೇ.70ನ್ನು ಆದ್ಯತಾ ವಲಯಕ್ಕೆ ಮೀಸಲಿರಿಸಲಾಗಿದೆ. ಕೃಷಿಗೆ 6651 ಕೋ.ರೂ., ಎಂಎಸ್‌ಎಂಇ ಕ್ಷೇತ್ರಕ್ಕೆ 5213 ಕೋ.ರೂ., ವಸತಿಗೆ 1462 ಕೋ.ರೂ., ಶಿಕ್ಷಣ ಕ್ಷೇತ್ರಕ್ಕೆ 107 ಕೋ.ರೂ. ಇತರ ಆದ್ಯತಾ ವಲಯಕ್ಕೆ 790 ಕೋ.ರೂ. ನಿಗದಿಪಡಿಸಲಾಗಿದೆ. ಜಿಲ್ಲೆಯ ಎಲ್ಲ ರಾಷ್ಟ್ರೀಕೃತ, ಖಾಸಗಿ, ವಾಣಿಜ್ಯ, ಸಹಕಾರಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ ಅವುಗಳ ನಿರ್ವಹಣೆ ಮತ್ತು ಸಂಭಾವ್ಯತೆಯ ಆಧಾರದಲ್ಲಿ ಗುರಿ ಹಂಚಿಕೆ ಮಾಡಲಾಗಿದೆ ಎಂದರು.

ಸಭೆಯಲ್ಲಿ ಆರ್‌ಬಿಐ ಸಹಾಯಕ ಮಹಾಪ್ರಬಂಧಕ ಪಿ. ಬಿಶ್ವಾಸ್, ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿ ಉಪ ಮಹಾಪ್ರಬಂಧಕ ಶ್ರೀಕಾಂತ್ ಕೆ.ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಬ್ಯಾಂಕ್‌ವಾರು, ಶಾಖಾವಾರು, ತಾಲೂಕುವಾರು ಸಾಲ ಯೋಜನೆಯ ಕುರಿತ ಜಿಲ್ಲಾ ಸಾಲ ಯೋಜನೆಯ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

2020-21ನೇ ಆರ್ಥಿಕ ವರ್ಷದಲ್ಲಿ ಪಿಎಂಇಜಿಪಿ ಯೋಜನೆಯ ಅನುಷ್ಠಾನದಲ್ಲಿ ರಾಜ್ಯದಲ್ಲೇ ಜಿಲ್ಲೆಗೆ ತೃತೀಯ ಸ್ಥಾನ ಲಭಿಸಿದೆ.  ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ನೀಡಿದ ಈ ಪ್ರಶಸ್ತಿಯನ್ನು ಜಿಪಂ ಸಿಇಒ ಡಾ.ಕುಮಾರ್ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪ್ರವೀಣ್‌ಗೆ ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News