ಸಾರ್ವತ್ರಿಕ ಮುಷ್ಕರ ಯಶಸ್ವಿಗೆ ಬೀಡಿ ಕಾರ್ಮಿಕರ ಮಹಾಸಭೆ ನಿರ್ಧಾರ
ಮಂಗಳೂರು : ನಮ್ಮನ್ನಾಳುತ್ತಿರುವ ಸರಕಾರಗಳು ಕಾಯ್ದೆ-ಕಾನೂನುಗಳನ್ನು ತಿದ್ದುಪಡಿ ಮಾಡಿ ಜನ ಸಾಮಾನ್ಯರನ್ನು ಶೋಷಿಸುತ್ತಿವೆ. ಸ್ವಾತಂತ್ರ್ಯಾನಂತರ ಭಾರತೀಯರ ತೆರಿಗೆ ಹಣದಿಂದ ಸ್ಥಾಪಿಸಲ್ಪಟ್ಟು ದೇಶದ ಆರ್ಥಿಕತೆಗೆ, ಅಭಿವೃದ್ಧಿಗೆ ತನ್ನದೇ ಆದ ಮಹತ್ತರ ಕೊಡುಗೆಗಳನ್ನು ನೀಡುತ್ತಿರುವ ಸರಕಾರಿ ಸ್ವಾಮ್ಯದ ಸಾರ್ವಜನಿಕ ಆಸ್ತಿ ಉದ್ದಿಮೆಗಳನ್ನು ಮುಚ್ಚಲಾಗುತ್ತಿದೆ ಮತ್ತು ಖಾಸಗೀಕರಿಸಲಾಗುತ್ತಿದೆ. ಕಾರ್ಮಿಕ ಕಾನೂನುಗಳನ್ನು ಮಾಲಕರ ಪರವಾಗಿ ಬದಲಾಯಿಸಲಾಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚುತ್ತಿರುವುದರಿಂದ ಇತರ ಎಲ್ಲಾ ಉತ್ಪನ್ನ, ಸೇವೆಗಳ ಬೆಲೆ ನಿಯಂತ್ರಣವಿಲ್ಲದೆ ಏರುತ್ತಿದೆ. ಕೋಮು ಭಾವನೆಯನ್ನು ಕೆರಳಿಸಿ ಜನಸಾಮಾನ್ಯರ ನಿಜವಾದ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ಕನಿಷ್ಠ ಮಜೂರಿಯಲ್ಲಿ ದುಡಿಯುತ್ತಿರುವ ಬೀಡಿ ಕಾರ್ಮಿಕರಿಗೆ ಪಾವತಿಸಬೇಕಾದ ತುಟ್ಟಿಭತ್ತೆ ಮತ್ತು ಕನಿಷ್ಠಕೂಲಿಯನ್ನು ಸರಿಯಾಗಿ ನೀಡದೆ ಸತಾಯಿಸಲಾಗುತ್ತಿದೆ. ಸರಕಾರದ ಇಂತಹ ನೀತಿಗಳನ್ನು ವಿರೋಧಿಸಿ ʼಭಾರತ ಉಳಿಸಿ - ಜನತೆಯನ್ನು ರಕ್ಷಿಸಿ’ ಎಂಬ ಘೋಷಣೆಯೊಂದಿಗೆ ಮಾ.೨೮/೨೯ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಲು ಬೀಡಿ ಕಾರ್ಮಿಕರ ಮಹಾಸಭೆ ತೀರ್ಮಾನಿಸಿದೆ.
ನಗರದ ಕೊಡಿಯಾಲ್ ಬೈಲ್‌ನಲ್ಲಿರುವ ಸಿಬಿಇಎ ಸಭಾಂಗಣದ ಎಸ್.ಚಂದಪ್ಪ ಅಂಚನ್ ಸಭಾಂಗಣ ಹಾಗೂ ಎಂ. ಶಿವಪ್ಪ ಕೋಟ್ಯಾನ್ ವೇದಿಕೆಯಲ್ಲಿ ಮಂಗಳವಾರ ನಡೆದ ಎಐಟಿಯುಸಿ ನೇತೃತ್ವದ ಬೀಡಿ ಆ್ಯಂಡ್ ಟೊಬೆಕ್ಕೊ ಲೇಬರ್ ಯೂನಿಯನ್‌ನ ೮೬ ನೇ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಯಿತು.
ಮಾ.೨೮ರಂದು ತಾಲೂಕು ಕೇಂದ್ರಗಳಲ್ಲಿ ನಡೆಯುವ ಮುಷ್ಕರದಲ್ಲಿ ಭಾಗವಹಿಸುವುದಲ್ಲದೆ ಮಾ.೨೯ರಂದು ಬೆಳಗ್ಗೆ ೧೦ಕ್ಕೆ ನಗರದ ಜ್ಯೋತಿ ಟಾಕೀಸ್ ಬಳಿಯಿಂದ ಹೊರಡುವ ರ್ಯಾಲಿ ಹಾಗೂ ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂದೆ ನಡೆಯುವ ಪ್ರತಿಭಟನಾ ಪ್ರದರ್ಶನದಲ್ಲೂ ಭಾಗವಹಿಸಲು ಮಹಾಸಭೆ ತೀರ್ಮಾನಿಸಿದೆ.
ಯೂನಿಯನ್‌ನ ಅಧ್ಯಕ್ಷೆ ಸುಲೋಚನಾ ಹರೀಶ್ ಕವತ್ತಾರು ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಯೂನಿಯನ್ ಕಾರ್ಯದರ್ಶಿ ವಿ.ಎಸ್. ಬೇರಿಂಜ, ಬ್ಯಾಂಕ್ ನೌಕರರ ಸಂಘಟನೆಯ ಮುಖ್ಯಸ್ಥರಾದ ವಿನ್ಸೆಂಟ್ ಡಿಸೋಜ, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ವಿ. ರಾವ್, ಬೀಡಿ ನೌಕರರ ಸಂಘಟನೆಯ ತಿಮ್ಮಪ್ಪ ಕಾವೂರು, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ. ಶೇಖರ್, ಜೊತೆ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್, ಯೂನಿಯನ್‌ನ ಕೋಶಾಧಿಕಾರಿ ಕರುಣಾಕರ್ ಮಾರಿಪಲ್ಲ ಮಾತನಾಡಿದರು.