ಬಪ್ಪನಾಡು ಜಾತ್ರೆಯಲ್ಲಿ ಇತರ ಧರ್ಮೀಯರು ವ್ಯಾಪಾರ ನಡೆಸಲು ಯಾವುದೇ ನಿರ್ಬಂಧವಿಲ್ಲ: ಮೊಕ್ತೇಸರರ ಸ್ಪಷ್ಟನೆ
ಮಂಗಳೂರು : ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮರು ಅಂಗಡಿಗಳನ್ನು ಹಾಕುವಂತಿಲ್ಲ ಎಂಬ ಬ್ಯಾನರ್ ಗೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದೇವಸ್ಥಾನದ ಅನುವಂಶಿಕ ಮುಕ್ತೇಸರರು ಹಾಗೂ ಆಡಳಿತ ಮೊಕ್ತೇಸರರು ಸ್ಪಷ್ಟಪಡಿಸಿದ್ದಾರೆ.
ಕಳೆದ ಕೆಲದಿನಗಳಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಬಳಿ ಮತ್ತು ಮುಲ್ಕಿ ಬಸ್ ನಿಲ್ದಾಣದ ಬಳಿ ಹಾಕಲಾಗಿರುವ "ಮುಸ್ಲಿಮರಿಗೆ ವ್ಯಾಪಾರ ನಡೆಸಲು ಅವಕಾಶ ನೀಡುವುದಿಲ್ಲ" ಎಂಬ ಬ್ಯಾನರ್ ಗೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಹಾಗೂ ಆಡಳಿತ ಮುಕ್ತರಾಗಿರುವ ಎನ್.ಎಸ್. ಮನೋಹರ ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪತ್ರಿಕೆಯೊಂದಿಗೆ ಮಾತನಾಡಿದ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ದುಗ್ಗಣ್ಣ ಸಾವಂತರು, ಬ್ಯಾನರ್ ಗೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ. ದೇವಸ್ಥಾನದ ವತಿಯಿಂದ ಈ ಬ್ಯಾನರನ್ನು ಹಾಕಲಾಗಿಲ್ಲ. ಮುಸ್ಲಿಮರು ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ-ವಹಿವಾಟು ನಡೆಸುವ ಕುರಿತು ದೇವಸ್ಥಾನದ ವತಿಯಿಂದ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ. ಜಾತ್ರಾ ಮಹೋತ್ಸವದಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಕೆಲವು ಮುಸ್ಲಿಮರು ಹಾಕಿದ್ದ ಅಂಗಡಿಗಳನ್ನು ಅವರೇ ತೆರವುಗೊಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಆಡಳಿತ ಮೊಕ್ತೇಸರರಾದ ಎಂ.ಎಸ್. ಮನೋಹರ ಶೆಟ್ಟಿ ಅವರು, ಯಾವುದೇ ಧರ್ಮದವರು ಅಮ್ಮನವರ ಜಾತ್ರೆಯಲ್ಲಿ ವ್ಯಾಪಾರ ವಹಿವಾಟು ನಡೆಸುವ ಬಗ್ಗೆ ದೇವಸ್ಥಾನದ ಕಡೆಯಿಂದ ಯಾವುದೇ ನಿರ್ಬಂಧವಿಲ್ಲ. ಆದರೆ, ಅಹಿತಕರ ಘಟನೆಗಳು ನಡೆದರೆ ಎಲ್ಲರಿಗೂ ರಕ್ಷಣೆ ಕೊಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆಂದು ಬರುವ ಎಲ್ಲರಿಗೂ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಬಳಿಕ ಅವರು ಒಪ್ಪಿಗೆ ನೀಡಿದರೆ ವ್ಯಾಪಾರಕ್ಕೆ ಪರವಾನಿಗೆ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ದೇವಸ್ಥಾನದ ಆಡಳಿತ ಸಮಿತಿಯ ಹೆಸರಿನಲ್ಲಿ ಬರೆಯಲಾಗಿದ್ದ ಬ್ಯಾನರ್ ತೆರವು
ಇತ್ತೀಚೆಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಮತ್ತು ಬಸ್ಸು ನಿಲ್ದಾಣದಲ್ಲಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶವಿಲ್ಲ ಎಂಬ ಅರ್ಥದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಹೆಸರಿನಲ್ಲಿ ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು. ಈ ಬಗ್ಗೆ ಬೆಳಗ್ಗೆ ತುರ್ತು ಸಭೆ ನಡೆಸಿದ ಆಡಳಿತ ಮಂಡಳಿ, ಆ ಬ್ಯಾನರ್ ಗಳನ್ನು ತೆರವು ಮಾಡಿತ್ತು. ಆ ಬಳಿಕ ದುಷ್ಕರ್ಮಿಗಳು ʼಸಮಸ್ತ ಹಿಂದೂ ಬಾಂಧವರುʼ ಎಂಬ ಹೆಸರಿನಲ್ಲಿ ಮತ್ತೊಂದು ಬ್ಯಾನರನ್ನು ಅಳವಡಿಸಿದ್ದಾರೆ ಎಂದು ತಿಳಿದು ಬಂದಿದೆ.