ಹರ್ಯಾಣ ವಿಧಾನ ಸಭೆಯಲ್ಲಿ ಮತಾಂತರ ತಡೆ ಮಸೂದೆ ಅಂಗೀಕಾರ ಕಾಂಗ್ರೆಸ್ ಸದಸ್ಯರಿಂದ ಸಭಾ ತ್ಯಾಗ

Update: 2022-03-22 18:14 GMT

ಚಂಡಿಗಢ, ಮಾ. 22: ಹರ್ಯಾಣ ಕಾನೂನುಬಾಹಿರ ಮತಾಂತರ ತಡೆ ಮಸೂದೆ-2022 ‘ಅಸಾಂವಿಧಾನಿಕ’ ಎಂದು ವ್ಯಾಖ್ಯಾನಿಸಿ ಕಾಂಗ್ರೆಸ್ ಶಾಸಕರ ಸಭಾ ತ್ಯಾಗದ ನಡುವೆ ಹರ್ಯಾಣ ವಿಧಾನ ಸಭೆಯಲ್ಲಿ ಮಂಗಳವಾರ ಮಸೂದೆ ಅಂಗೀಕರಿಸಲಾಯಿತು. ‘‘ಬಲವಂತ, ಅನಗತ್ಯ ಪ್ರಭಾವ ಅಥವಾ ಆಮಿಷದ ಮುಖಾಂತರ ಮತಾಂತರ’ ತಡೆಯಲು ಈ ಕಾಯ್ದೆ ಪ್ರಯತ್ನಿಸುತ್ತದೆ.

ಈ ಮಸೂದೆಯನ್ನು ಹರ್ಯಾಣ ವಿಧಾನ ಸಭೆಯಲ್ಲಿ ಮಾರ್ಚ್ 4ರಂದು ಮಂಡಿಸಲಾಗಿತ್ತು. ಇದರೊಂದಿಗೆ ಇಂತಹ ಕಾಯ್ದೆಯನ್ನು ಅಂಗೀಕರಿಸಿದ ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಹಿಮಾಚಲ ಪ್ರದೇಶ ಸೇರಿದಂತೆ ಬಿಜೆಪಿ ಆಡಳಿತವಿರುವ ಇತರ 10 ರಾಜ್ಯಗಳೊಂದಿಗೆ ಹರ್ಯಾಣ ಸೇರಿದೆ. ಹರ್ಯಾಣ ಕಾನೂನು ಬಾಹಿರ ಮತಾಂತರ ತಡೆ ಮಸೂದೆ-2022 ಪ್ರಕಾರ ಆಮಿಷ ಒಡ್ಡಿ, ಬಲವಂತದಿಂದ, ಮೋಸದ ಮೂಲಕ ಮತಾಂತರ ನಡೆಸಿದರೆ 1ರಿಂದ 5 ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿಗಿಂತ ಕಡಿಮೆಯಾಗದಂತೆ ದಂಡ ವಿಧಿಸುವ ಅವಕಾಶ ಇದೆ. ಪುರಾವೆಗಳನ್ನು ನೀಡುವ ಹೊರೆ ಆರೋಪಿ ಮೇಲೆ ಬೀಳುತ್ತದೆ.

ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದೆ ಅಪ್ರಾಪ್ತ, ಮಹಿಳೆ, ವ್ಯಕ್ತಿಯನ್ನು ಮತಾಂತರಿಸಿದರೆ ಅಥವಾ ಮತಾಂತರಕ್ಕೆ ಪ್ರಯತ್ನಿಸಿದರೆ, 4 ವರ್ಷಗಳ ಅವಧಿಗೆ ಕಡಿಮೆ ಇಲ್ಲದಂತೆ ಗರಿಷ್ಠ 10 ವರ್ಷಗಳ ವರೆಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆ ಹಾಗೂ 3 ಲಕ್ಷ ರೂಪಾಯಿಗೆ ಕಡಿಮೆ ಇಲ್ಲದಂತೆ ದಂಡ ವಿಧಿಸಬಹುದು ಎಂದು ಮಸೂದೆ ಹೇಳುತ್ತದೆ. ಈಗ ಅಸ್ತಿತ್ವದಲ್ಲಿರುವ ಬಲವಂತದ ಮತಾಂತರ ತಡೆ ಕಾಯ್ದೆಯಲ್ಲಿ ಈಗಾಗಲೇ ಅಂತಹ ನಿಯಮಗಳು ಇವೆ. ಅಲ್ಲದೆ, ಅಪರಾಧಿಗಳಿಗೆ ಶಿಕ್ಷೆ ನೀಡಬಹುದು. ಆದುದರಿಂದ ಹೊಸ ಕಾಯ್ದೆ ತರುವ ಅಗತ್ಯತೆ ಇಲ್ಲ ಎಂದು ಪ್ರತಿಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ಹೇಳಿದ್ದಾರೆ. ಇದು ಹರ್ಯಾಣ ಚರಿತ್ರೆಯಲ್ಲಿ ಕಪ್ಪು ಅಧ್ಯಾಯ ಎಂದು ನಾನು ಭಾವಿಸುತ್ತೇನೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಕಿರಣ್ ಚೌದರಿ ತಿಳಿಸಿದ್ದಾರೆ.

ಈ ಮಸೂದೆ ಕೋಮು ವಿಭಜನೆ ಹೆಚ್ಚಿಸಲಿದೆ. ಈ ಮಸೂದೆಯ ಬಗ್ಗೆ ಭಯವಾಗುತ್ತಿದೆ. ಈ ಮಸೂದೆ ಭವಿಷ್ಯದಲ್ಲಿ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಅವರು ಹೇಳಿದ್ದಾರೆ. ಇನ್ನೋರ್ವ ಕಾಂಗ್ರೆಸ್ ನಾಯಕ ರಘುವೀರ್ ಸಿಂಗ್, ಈ ಮಸೂದೆಯನ್ನು ತರಲು ಯಾವುದೇ ತುರ್ತು ಇರಲಿಲ್ಲ. ಇದು ವಿಭಜನೆಯ ರಾಜಕೀಯಕ್ಕೆ ಅವಕಾಶ ಮಾಡಿ ಕೊಡುತ್ತದೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದಿದ್ದಾರೆ. ಅನಂತರ ಕಾಂಗ್ರೆಸ್ ಸದಸ್ಯರು ಸದನ ತ್ಯಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News