ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಹೋರಾಟ: ಸಿದ್ದರಾಮಯ್ಯ

Update: 2022-03-23 08:14 GMT

ಬೆಂಗಳೂರು, ಮಾ.23: ಐದು ರಾಜ್ಯಗಳ ಚುನಾವಣೆ ಇದೆ ಎಂಬ ಕಾರಣಕ್ಕೆ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಕೊನೆಯ ಬಾರಿ ಬೆಲೆಯೇರಿಕೆ ಮಾಡಿತ್ತು. ಚುನಾವಣೆ ಫಲಿತಾಂಶದ ನಂತರ ಬೆಲೆ ಹೆಚ್ಚಾಗಬಹುದು ಎಂದು ಜನ ನಿರೀಕ್ಷೆ ಮಾಡಿದ್ದರು, ಅದು ನಿಜವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಲೆಯೇರಿಕೆ ಬಗ್ಗೆ  ವಿಧಾನಸೌಧದ ಮೊಗಸಾಲೆಯಲ್ಲಿಂದು ಮಾತನಾಡಿದ ಅವರು, ಬೆಲೆಯೇರಿಕೆ ವಿರೋಧಿಸಿ ಹೋರಾಟ ಮಾಡಲು ಪಕ್ಷದಲ್ಲಿ ತೀರ್ಮಾನ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದರು.

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸುಮಾರು 80 ಪೈಸೆ, ಗ್ಯಾಸ್ ಮೇಲೆ ರೂ. 50 ಏರಿಕೆ ಮಾಡಲಾಗಿದೆ. ಈಗಾಗಲೇ ಜನ ಬೆಲೆಯೇರಿಕೆ ಇಂದ ತತ್ತರಿಸಿ ಹೋಗಿದ್ದಾರೆ. ಅಡುಗೆ ಎಣ್ಣೆ, ಕಬ್ಬಿಣ, ಸಿಮೆಂಟ್ ಹೀಗೆ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ. ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಮೇಲೆ ಬೆಲೆ ನಿಯಂತ್ರಣ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಡೀಸೆಲ್‌ ಬೆಲೆ ಹೆಚ್ಚಾದರೆ ಗೊಬ್ಬರ, ಆಹಾರ ವಸ್ತುಗಳು ಹೀಗೆ ಎಲ್ಲದರ ಬೆಲೆ ಹೆಚ್ಚಾಗುತ್ತದೆ. ಇದರಿಂದ ಸಾಮಾನ್ಯ ಜನರಿಗೆ ಹೊರೆಯಾಗಲಿದೆ ಎಂದರು.

ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳ ಮೇಲಿನ ತೆರಿಗೆ ಕಡಿಮೆ ಮಾಡಿ, ಸಾಮಾನ್ಯ ಜನರ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿದೆ. ಬೆಲೆಯೇರಿಕೆಗೆ ನನ್ನ ವಿರೋಧವಿದೆ. ಕೇಂದ್ರ ಸರ್ಕಾರ ಈ ಕೂಡಲೆ ಸಾಮಾನ್ಯ ಜನರಿಗೆ ಹೊರೆಯಾಗುವಂತೆ ಬೆಲೆಯೇರಿಕೆ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯ ಮಾಡುತ್ತೇನೆ.

ಪೆಟ್ರೋಲ್, ಡೀಸೆಲ್‌ ಮತ್ತು ಗ್ಯಾಸ್ ಗಳ ಬೆಲೆಯೇರಿಕೆ ಮಾಡಿರುವುದನ್ನು ವಾಪಸ್ ಪಡೆಯಬೇಕು. ಯಾರು ಅತ್ಯಧಿಕ ಪ್ರಮಾಣದ ಆಸ್ತಿ ಸಂಪಾದನೆ ಮಾಡಿದ್ದಾರೆ ಅಂಥವರ ಮೇಲೆ ಹೆಚ್ಚು ತೆರಿಗೆ ವಿಧಿಸಿ, ಬಡವರು, ಸಾಮಾನ್ಯ ವರ್ಗದ ಜನರ ಮೇಲಿನ ತೆರಿಗೆ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News