PHOTO- ವಿಧಾನಸಭೆಯಲ್ಲಿ ಕೈ-ಕೈ ಹಿಡಿದು ಒಟ್ಟಿಗೆ ಕೂತು ಸಿದ್ದರಾಮಯ್ಯ- ಬಿಎಸ್‍ವೈ ಮಾತುಕತೆ
ಬೆಂಗಳೂರು, ಮಾ. 23: ಬದ್ಧವೈರಿಗಳಂತೆ ಹೇಳಿಕೆಗಳ ಮೂಲಕ ವಾಗ್ಯುದ್ಧ ಮಾಡುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಕ್ಕ-ಪಕ್ಕದಲ್ಲಿ ಒಟ್ಟಿಗೆ ಕೂತು ಕೈ-ಕೈ ಹಿಡಿದು ಉಭಯ ಕುಶಲೋಪರಿ ವಿಚಾರಿಸಿದ್ದು ವಿಧಾನಸಭೆ ಕಲಾಪದಲ್ಲಿ ಎಲ್ಲರ ಅಚ್ಚರಿಗೆ ಕಾರಣವಾಯಿತು.
ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಸನದ ಬಳಿಗೆ ಧಾವಿಸಿ ಬಂದ ಬಿ.ಎಸ್.ಯಡಿಯೂರಪ್ಪ ನಾಳೆ(ಮಾ.24) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ತಾವು ಏರ್ಪಡಿಸಿರುವ ಭೋಜನ ಕೂಟಕ್ಕೆ ಸಿದ್ದರಾಮಯ್ಯನವರಿಗೆ ಖುದ್ದು ಆಹ್ವಾನ ನೀಡಿದರು. ಈ ವೇಳೆ ಉಭಯ ನಾಯಕರು ಕೆಲ ಹೊತ್ತು ಕೈ-ಕೈ ಹಿಡಿದುಕೊಂಡೆ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು.
ಆ ಬಳಿಕ ಕಾಂಗ್ರೆಸ್ ಪಕ್ಷದ ಒಬ್ಬೊಬ್ಬ ಸದಸ್ಯರನ್ನು ಖುದ್ದು ಮಾತನಾಡಿದ ಯಡಿಯೂರಪ್ಪ ‘ನಾಳೆ ಊಟಕ್ಕೆ ತಪ್ಪದೆ ಬರಬೇಕು' ಎಂದು ಆಹ್ವಾನಿಸಿದರು. ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರನ್ನು ಅವರಿದ್ದಲ್ಲಿಗೆ ತೆರಳಿದ ಬಿಎಸ್‍ವೈ ‘ಊಟಕ್ಕೆ ಬನ್ನಿ' ಎಂದು ಹೇಳಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ ಅವರಿಗೂ ಬಿಎಸ್‍ವೈ ಪತ್ರಿಕೆ ಕಳುಹಿಸಿ ಊಟಕ್ಕೆ ಬರುವಂತೆ ಆಹ್ವಾನಿಸಿದ್ದು ನಡೆಯಿತು.