ರಾ.ಹೆ. 169ರ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ: ಎಸ್‌ಡಿಪಿಐ ಆರೋಪ

Update: 2022-03-24 16:59 GMT

ಮಂಗಳೂರು, ಮಾ.24: ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಕುಲಶೇಖರದಿಂದ ಸಾಣೂರುವರೆಗಿನ 45 ಕಿಮೀ ಚತುಷ್ಪಥ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿ ಆರೋಪಿಸಿದೆ.

ರಾ.ಹೆ.169ರ ಚತುಷ್ಪಥ ಯೋಜನೆ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ನಡೆದ ಭ್ರಷ್ಟಾಚಾರದ ವಿರುದ್ಧ ಸಂತ್ರಸ್ತರ ದೂರಿನ ಮೇರೆಗೆ ಸಮಿತಿಯು ಸ್ಥಳಪರಿಶೀಲನೆ ನಡೆಸಿದ ಬಳಿಕ ಈ ಆರೋಪ ಹೊರಿಸಿದೆ.

180 ಎಕರೆ ಜಮೀನು ಭೂಸ್ವಾಧೀನ ಬಗ್ಗೆ 2017ರ ಡಿಸೆಂಬರ್‌ನಲ್ಲಿ ದ.ಕ.ಜಿಲ್ಲಾಧಿಕಾರಿಗಳು ಅಂತಿಮ ಅಧಿಸೂಚನೆಯನ್ನು ಹೊರಡಿಸಿದ್ದರು,. ಬಳಿಕ ಸಂಬಂಧಪಟ್ಟ ಮಾಲಕರಿಗೆ ನೋಟಿಸ್ ನೀಡಿ ಸರ್ವೆ ನಡೆಸಲಾಗಿತ್ತು. ಆದರೆ ಇದೀಗ ಪ್ರಭಾವಿ ವ್ಯಕ್ತಿಗಳ ಹಿತಾಸಕ್ತಿಗೆ ಮಣಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರೂಟ್ ಮ್ಯಾಪನ್ನು ಬದಲಾಯಿಸಿದ್ದಾರೆ. ಇದರ ಹಿಂದೆ ಹಲವು ಪ್ರಭಾವಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮಧ್ಯೆ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಅನುಮಾನಗಳು ದಟ್ಟವಾಗುತ್ತಿದೆ ಎಂದು ಆಪಾದಿಸಿದೆ. ಅಲ್ಲದೆ ಈ ಬಗ್ಗೆ ಕಾನೂನು ಹೋರಾಟ ನಡೆಸಲಿದೆ ಎಂದು ಸಮಿತಿ ಎಚ್ಚರಿಕೆ ನೀಡಿದೆ.

ಸ್ಥಳ ಪರಿಶೀಲನೆ ನಡೆಸಿದ ಸಮಿತಿಯ ನಿಯೋಗದಲ್ಲಿ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಆಸಿಫ್ ಕೋಟೆಬಾಗಿಲು, ಕಾರ್ಯದರ್ಶಿ ಅಝರ್ ತೋಡಾರ್ , ಮೂಡುಬಿದಿರೆ ಬ್ಲಾಕ್ ಅಧ್ಯಕ್ಷ ಆಸಿಫ್ ತೋಡಾರ್, ಕಾರ್ಯದರ್ಶಿ ಶಹರಾಜ್, ಸಂತ್ರಸ್ತರಾದ ನಾಝಿಮ್ ಕಡಲಕೆರೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News