×
Ad

ತೊಕ್ಕೊಟ್ಟು: ಮೊಮ್ಮಗಳ ಹುಟ್ಟುಹಬ್ಬಕ್ಕೆ ಚರ್ಚ್ ನಲ್ಲಿ ಪೂಜೆ ಸಲ್ಲಿಸಿ ಬರುತ್ತಿದ್ದ ಮಹಿಳೆ ಅಪಘಾತಕ್ಕೆ ಬಲಿ

Update: 2022-03-26 11:47 IST
ರಸ್ತೆ ಅಪಘಾತದಲ್ಲಿ ಮೃತಪಟ್ಟ ಎಮಿಲ್ಡ ಡಿಸೋಜ

ಉಳ್ಳಾಲ, ಮಾ.26: ಸ್ಕೂಟರ್ ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಮಹಿಳೆಯೊಬ್ಬರು ಮೃತಪಟ್ಟ ಘಟನೆ ರಾ.ಹೆ.66ರ ತೊಕ್ಕೊಟ್ಟು ಸಮೀಪದ ಕಾಪಿಕಾಡು ಎಂಬಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ. ಈ ನಡುವೆ ಅಪಘಾತಕ್ಕೆ ಕಾರಣವಾದ ಕಾರು ನಿಲ್ಲಿಸದೆ ಪರಾರಿಯಾಗಿದೆ.

ಕಾಪಿಕಾಡ್ ಉಮಾಮಹೇಶ್ವರಿ ದೇವಸ್ಥಾನದ ಬಳಿಯ ನಿವಾಸಿ ಎಮಿಲ್ಡ ಡಿಸೋಜ (59) ಮೃತಪಟ್ಟವರು. ಅವರು ಇಂದು ಮೊಮ್ಮಗಳ (ಮಗಳ ಮಗಳು)ಹುಟ್ಟುಹಬ್ಬವಾದ ಕಾರಣ  ಬೆಳ್ಳಂಬೆಳಗ್ಗೆ ತೊಕ್ಕೊಟ್ಟು ಚರ್ಚ್ ಗೆ ತೆರಳಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ವಾಪಸ್ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಅರ್ಧ ದಾರಿಯವರೆಗೂ ಸಂಬಂಧಿಕರ ಜತೆಗೆ ನಡೆದುಕೊಂಡೇ ಬರುತ್ತಿದ್ದ ಎಮಿಲ್ಡರನ್ನು ಪ್ಲೇವಿ ಡಿಸೋಜ ಎಂಬ ಪರಿಚಯಸ್ಥ ಮಹಿಳೆಯ ತನ್ನ ದ್ವಿಚಕ್ರ ವಾಹನದಲ್ಲಿ ಹತ್ತಿಸಿಕೊಂಡಿದ್ದಾರೆ. ದ್ವಿಚಕ್ರ ವಾಹನ ಕಾಪಿಕಾಡು ರಾಜ್ ಕೇಟರರ್ಸ್ ಬಳಿ ತಲುಪುತ್ತಿದ್ದಂತೆ ಹಿಂದಿನಿಂದ ಬಂದ ಕಾರೊಂದು ಢಿಕ್ಕಿ ಹೊಡೆದಿದೆಯೆನ್ನಲಾಗಿದೆ. ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ಎಮಿಲ್ಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ.

 ಸ್ಕೂಟರ್ ಚಲಾಯಿಸುತ್ತಿದ್ದ ಪ್ಲೇವಿ ಡಿಸೋಜ(47) ಕೂಡಾ ಗಾಯಗೊಂಡಿದ್ದ,  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೊಮ್ಮಗಳ ಹುಟ್ಟುಹಬ್ಬಕ್ಕಾಗಿ ಎಮಿಲ್ಡ ತಿಂಡಿ ಎಲ್ಲ ಸಿದ್ಧಪಡಿಸಿ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿ ಚರ್ಚ್ ಗೆ ತೆರಳಿದ್ದರಂತೆ. ಮೃತರು ಪತಿ, ಪುತ್ರ, ಪುತ್ರಿ, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News