ಏನಿದು ಕೊಲ್ಲೂರು ದೇವಸ್ಥಾನದ ‘ಸಲಾಂ ಮಂಗಳಾರತಿ’ ?

Update: 2022-03-26 16:00 GMT

ಕೊಲ್ಲೂರು : ಕೊಲ್ಲೂರಿನ ಇತಿಹಾಸ ಪ್ರಸಿದ್ಧ ಶ್ರೀಮುಕಾಂಬಿಕಾ ದೇವಸ್ಥಾನದಲ್ಲಿ ಕೆಲವು ಶತಮಾನಗಳಿಂದ ಸಂಪ್ರದಾಯದಂತೆ ಪ್ರತಿದಿನ ಸಂಜೆ ದೇವಿಗೆ ನಡೆಯುವ ಕೊನೆಯ ಪೂಜೆ ‘ಸಲಾಂ ಮಂಗಳಾರತಿ’ ಇದೀಗ ವಿವಾದಕ್ಕೆ ಸಿಲುಕಿದೆ.

ಮೈಸೂರಿನ ಹುಲಿ ಎಂದೇ ಇತಿಹಾಸಕಾರರಿಂದ ಹಾಗು ಈಗಲೂ ಕರೆಸಿಕೊಳ್ಳುತ್ತಿರುವ ಟಿಪ್ಪುಸುಲ್ತಾನ್  ಹೆಸರಿನಲ್ಲಿ ನಡೆಯುವ ಪೂಜೆ ಇದೀಗ ಆಡಳಿತದಲ್ಲಿರುವ ಬಿಜೆಪಿ ಪಕ್ಷ ಹಾಗೂ ಸಂಘ ಪರಿವಾರದ ಕಂಗೆಣ್ಣಿಗೆ ಗುರಿಯಾಗಿದೆ.

ಟಿಪ್ಪು ಸುಲ್ತಾನ್ ರಾಜನಾಗಿ ಧರ್ಮ ಸಹಿಷ್ಣು  ಆಗಿದ್ದರು ಎಂಬುದಕ್ಕೆ ಕೊಲ್ಲೂರು ದೇವಸ್ಥಾನ ಸೇರಿದಂತೆ ಕರಾವಳಿ ಹಾಗೂ ರಾಜ್ಯಾದ್ಯಂತ ಹತ್ತಾರು ನಿದರ್ಶನಗಳು ಈಗಲೂ ದೊರೆತರೂ, ರಾಜನಾಗಿ ಆಡಳಿತದ ಸಂದರ್ಭದಲ್ಲಿ ನಡೆಸಿದ  ಹತ್ಯೆಯನ್ನೇ ಗುರಾಣಿಯಾಗಿರಿಸಿಕೊಂಡಿರುವ ಈ ಸಂಘಟನೆಗಳು ಟಿಪ್ಪುವನ್ನು ಮತಾಂಧ, ಕ್ರೂರಿ, ನರಹಂತಕನಂತೆ ಚಿತ್ರಿಸಿ ಟಿಪ್ಪು ಹೆಸರಿನಲ್ಲಿ ಕೊಲ್ಲೂರಿನಲ್ಲಿ ಪ್ರತಿದಿನ ಸಂಜೆ ನಡೆಯುವ ಸಲಾಂ ಮಂಗಳರಾತಿಯ ಹೆಸರನ್ನು ತೆಗೆದು ದೇವರ ಹೆಸರಿನಲ್ಲಿ ಮಹಾಮಂಗಳಾರತಿ ಮಾಡುವಂತೆ ಒತ್ತಾಯಿಸಿ ಸಂಬಂಧ ಪಟ್ಟವರಿಗೆ ಮನವಿ ಸಲ್ಲಿಸಿದೆ.

ಮೈಸೂರಿನ ಹುಲಿ ಟಿಪ್ಪು ಸುಲ್ತಾನ್‌ ನೆನಪಿನಲ್ಲೇ ನಡೆಯುವ ಈ ಪೂಜೆ ಟಿಪ್ಪು ಧಾರ್ಮಿಕ ಸಹಿಷ್ಣುತೆಯ ದೊರೆಯಾಗಿದ್ದ ಎಂಬುದಕ್ಕೆ ನಿದರ್ಶನ ಎಂದು  ಹಿರಿಯರು ಹೇಳುತ್ತಾರೆ. 17ನೇ ಶತಮಾನದ ಪೂರ್ವಾರ್ಧದಲ್ಲಿ ಕೆಳದಿ ಅರಸರನ್ನು ಸೋಲಿಸಿದ ಕಾರಣ ಅವರ ವಶದಲ್ಲಿದ್ದ ಕೊಲ್ಲೂರಿನ ಈ ದೇವಳ ಸಹ ಟಿಪ್ಪು ಸುಲ್ತಾನನ ಸುಪರ್ದಿಗೆ ಬಂದಿತ್ತು. ಈ ಸಂದರ್ಭ ಟಿಪ್ಪು ಮೂಕಾಂಬಿಕಾ ದೇವಸ್ಥಾನಕ್ಕೂ ಭೇಟಿ ನೀಡಿ ದೇವಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದ ಐತಿಹ್ಯವಿದೆ.

ಟಿಪ್ಪು ಸುಲ್ತಾನ್ ದೇವಳಕ್ಕೆ ಬಂದ ಸಂದರ್ಭದಲ್ಲಿ ದೇವಿಗೆ ತನ್ನ ಗೌರವ ಸಲ್ಲಿಸಿದ ಕಾರಣಕ್ಕಾಗಿ ದೇವಿಗೆ ದಿನದ ಕೊನೆಯಲ್ಲಿ ನಡೆಯುವ ಮಂಗಳಾರತಿಗೆ ‘ಸಲಾಂ ಮಂಗಳಾರತಿ’ ಎಂದ ಕರೆಯಲಾಗುತ್ತಿದೆ ಎಂದು ಇತಿಹಾಸ ಹೇಳುತ್ತದೆ.  ಈ ಪೂಜೆಯ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿ ದೀವಟಿಗೆಯೊಂದಿಗೆ ಬಂದು ಅಧಿಕಾರಿಗಳನ್ನು ದೇವಸ್ಥಾನದೊಳಗೆ ಕರೆದುಕೊಂಡು ಹೋಗುತ್ತಾರೆ ಎಂದು ದೇವಳದ ಹಿಂದಿನ ಅಧಿಕಾರಿಯೊಬ್ಬರು ಹೇಳುತ್ತಾರೆ.

ಸಲಾಂ ಮಂಗಳಾರತಿಗೆ ಪ್ರದೋಷ ಪೂಜೆ ಎಂದೂ ಕರೆಯಲಾಗುತ್ತದೆ. ಈ ಪೂಜೆಯಿಂದ ಜನ್ಮದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದ್ದು, ಟಿಪ್ಪು ಈ ಪೂಜೆಯಲ್ಲಿ ಭಾಗವಹಿಸಿದ್ದರು ಎಂದು ಸಹ ಪ್ರತೀತಿ ಇದೆ. ಸೌಹಾರ್ದತೆಯ ಪ್ರತೀಕ ಎಂಬಂತ್ತಿರುವ ಈ ಪೂಜೆಯಲ್ಲಿ ಪ್ರತಿದಿನ ನೂರಾರು ಮಂದಿ ಭಾಗವಹಿಸುತ್ತಾರೆ.

ಟಿಪ್ಪು ಸುಲ್ತಾನ್ ಕೊಲ್ಲೂರು ದೇವಸ್ಥಾನಕ್ಕೆ ಬಂದ ಬಗ್ಗೆಯಾಗಲಿ, ದೇವಳಕ್ಕೆ ಯಾವುದೇ ಕೊಡುಗೆ ನೀಡಿದ ಬಗ್ಗೆಯಾಗಲೀ ದೇವಸ್ಥಾನದಲ್ಲಿ ಯಾವುದೇ ದಾಖಲೆಗಳು ಲಭ್ಯವಿಲ್ಲ. ಇದಕ್ಕೆ ಇರುವ ಏಕೈಕ ಸಾಕ್ಷಿಯೇ ಪ್ರತಿನಿತ್ಯ ಟಿಪ್ಪು ಹೆಸರಿನಲ್ಲಿ ನಡೆಯುವ ಸಲಾಂ ಮಂಗಳಾರತಿ. ಅಂದು ಟಿಪ್ಪುವನ್ನು ಸ್ವಾಗತಿಸಿ, ದೀವಟಿಗೆಯೊಂದಿಗೆ ದೇವಳದ ಒಳಗೆ ಕರೆದೊಯ್ದ ಪ್ರತೀಕವಾಗಿ ಈಗಲೂ ಅಧಿಕಾರಿಗಳನ್ನು ಪೂಜೆಯ ವೇಳೆ ದೀವಟಿಗೆಯಲ್ಲಿ ಕರೆದೊಯ್ಯಲಾಗುತ್ತಿದೆ ಎಂದು ಹಿರಿಯರು ಹೇಳುತ್ತಾರೆ. ಪೂಜೆಯ ವೇಳೆ ಅನ್ನದ ನೈವೇದ್ಯವನ್ನೂ ದೇವಿಗೆ ಅರ್ಪಿಸಲಾಗುತ್ತದೆ.

ಇದೇ ರೀತಿ ಟಿಪ್ಪು ಸುಲ್ತಾನ್ ಕೊಲ್ಲೂರಿಗೆ ಸಮೀಪದ ಶಂಕರನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ಗಂಟೆಯೊಂದನ್ನು ಕೊಡುಗೆಯಾಗಿ ನೀಡಿರುವ ದಾಖಲೆಗಳಿವೆ. ಅದು ಇಂದೂ ದೇವಸ್ಥಾನದಲ್ಲಿದೆ ಎಂದು ಹೇಳುತ್ತಾರೆ. ಅದೇ ರೀತಿ ಟಿಪ್ಪುಸುಲ್ತಾನ್, ಮರಾಠರಿಂದ ಕೊಳ್ಳೆ ಹೊಡೆಯಲ್ಪಟ್ಟ ಶೃಂಗೇರಿ ಮಠ ಹಾಗೂ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಿರುವುದಕ್ಕೆ ಮಠದಲ್ಲಿ ದಾಖಲೆಗಳು ಇಂದಿಗೂ ಇವೆ. ಇವೆಲ್ಲವೂ ಟಿಪ್ಪು ಸುಲ್ತಾನ್ ಧಾರ್ಮಿಕ ಸಹಿಷ್ಣು ಆಗಿದ್ದರು ಎಂಬುದಕ್ಕೆ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News