ರಾಜ್ಯಗಳು ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬಹುದು: ಸುಪ್ರೀಂಕೋರ್ಟ್ ನಲ್ಲಿ ಕೇಂದ್ರದ ಅಫಿಡವಿಟ್

Update: 2022-03-28 06:55 GMT

ಹೊಸದಿಲ್ಲಿ: ಇತರ ಸಮುದಾಯಗಳಿಗಿಂತ ಕಡಿಮೆ ಸಂಖ್ಯೆಯಲ್ಲಿರುವ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡುವ ಜವಾಬ್ದಾರಿಯನ್ನು ಕೇಂದ್ರ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಹಿಸಿಕೊಟ್ಟಿದೆ ಎಂದು hindustantimes.com ವರದಿ ಮಾಡಿದೆ.

ಕೇಂದ್ರ ಸರಕಾರವು ಆರು ಸಮುದಾಯಗಳಾದ ಕ್ರಿಶ್ಚಿಯನ್, ಸಿಖ್, ಮುಸ್ಲಿಂ, ಬೌದ್ಧ, ಪಾರ್ಸಿ ಹಾಗೂ ಜೈನರನ್ನು ರಾಷ್ಟ್ರೀಯ ಮಟ್ಟದಲ್ಲಿ ಅಲ್ಪಸಂಖ್ಯಾತರೆಂದು ಅಧಿಸೂಚನೆ ಹೊರಡಿಸಿದೆ. ರಾಜ್ಯಗಳು ಹಾಗೂ  ಕೇಂದ್ರಾಡಳಿತ ಪ್ರದೇಶಗಳು ಕಡಿಮೆ ಸಂಖ್ಯೆಯಲ್ಲಿರುವ ಹಿಂದೂಗಳನ್ನು ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತರೆಂದು ಸೂಚಿಸಲು ಮುಕ್ತವಾಗಿವೆ ಎಂದು ರವಿವಾರ  ಸಂಜೆ ಅಫಿಡವಿಟ್ ಸಲ್ಲಿಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಸುಪ್ರೀಂಕೋರ್ಟ್ ಗೆ ತಿಳಿಸಿದೆ.

"ರಾಜ್ಯ ಸರಕಾರಗಳು ಧಾರ್ಮಿಕ ಅಥವಾ ಭಾಷಾ ಸಮುದಾಯವನ್ನು ರಾಜ್ಯದೊಳಗೆ 'ಅಲ್ಪಸಂಖ್ಯಾತ ಸಮುದಾಯ' ಎಂದು ಘೋಷಿಸಬಹುದು" ಎಂದು ಕೇಂದ್ರ ಸರಕಾರ ಹೇಳಿದೆ.

ಮಹಾರಾಷ್ಟ್ರ ಸರಕಾರವು 2016ರಲ್ಲಿ ಯಹೂದಿಗಳನ್ನು ಅಲ್ಪಸಂಖ್ಯಾತ ಸಮುದಾಯವೆಂದು ಸೂಚಿಸಿದೆ ಎಂದು ಕೇಂದ್ರ ಸರಕಾರವು ಬೆಟ್ಟು ಮಾಡಿದೆ.

ಕರ್ನಾಟಕ ಸರಕಾರವು ಉರ್ದು, ತೆಲುಗು, ತಮಿಳು, ಮಲಯಾಳಂ, ಮರಾಠಿ, ತುಳು, ಲಮಾಣಿ, ಹಿಂದಿ, ಕೊಂಕಣಿ ಹಾಗೂ ಗುಜರಾತಿ ಭಾಷೆಗಳನ್ನು ಅಲ್ಪಸಂಖ್ಯಾತರ ಭಾಷೆ ಎಂದು ಘೋಷಿಸಿದೆ. ಸದರಿ ರಾಜ್ಯದ ನಿಯಮಗಳ ಪ್ರಕಾರ ರಾಜ್ಯಗಳು ಸಂಸ್ಥೆಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳೆಂದು ಪ್ರಮಾಣೀಕರಿಸಬಹುದು ಎಂದು ಅಫಿಡವಿಟ್ ಹೇಳುತ್ತದೆ.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಆಯೋಗ (ಎನ್ ಸಿಎಂಇಐ) ಕಾಯಿದೆ, 2004 ರ ಸೆಕ್ಷನ್ 2 (ಎಫ್) ನ ಸಿಂಧುತ್ವವನ್ನು ಪ್ರಶ್ನಿಸಿರುವ ದಿಲ್ಲಿ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರಕಾರ ತನ್ನ ಅಫಿಡವಿಟ್ ಅನ್ನು ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News