ಬಂಗಾಳ ವಿಧಾನಸಭೆಯಲ್ಲಿ ತೃಣಮೂಲ, ಬಿಜೆಪಿ ಶಾಸಕರ ಹೊಡೆದಾಟ; ಬಿಜೆಪಿಯ ಐವರು ಶಾಸಕರ ಅಮಾನತು

Update: 2022-03-28 14:32 GMT
Photo: Twittter/@amitmalviya

ಕೋಲ್ಕತಾ,ಮಾ.28: ಬೀರಭೂಮ್ ಹಿಂಸಾಚಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಹೇಳಿಕೆಯನ್ನು ನೀಡಬೇಕು ಎಂದು ಸೋಮವಾರ ವಿಧಾನಸಭೆಯಲ್ಲಿ ಬಿಜೆಪಿ ಆಗ್ರಹಿಸಿದ್ದು,ಈ ಸಂದರ್ಭ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪರ ಹೊಡೆದಾಡಿಕೊಂಡರು. ಸ್ಪೀಕರ್ ಅವರು ವಿಪಕ್ಷ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಐವರು ಬಿಜೆಪಿ ಶಾಸಕರನ್ನು ಈ ವರ್ಷದ ಉಳಿದ ಅವಧಿಗೆ ಅಮಾನತುಗೊಳಿಸಿದ್ದಾರೆ.ಮನೋಜ ತಿಗ್ಗಾ,ಶಂಕರ ಘೋಷ್,ನರಹರಿ ಮಹತೊ ಮತ್ತು ದೀಪಕ್ ಬರ್ಮನ್ ಅವರು ಅಧಿಕಾರಿ ಜೊತೆಯಲ್ಲಿ ಅಮಾನತುಗೊಂಡಿರುವ ಇತರ ನಾಲ್ವರು ಬಿಜೆಪಿ ಶಾಸಕರಾಗಿದ್ದಾರೆ. ಬೀರಭೂಮ್‌ನ ರಾಮಪುರಹಾಟ್ ಹಿಂಸಾಚಾರ ಕುರಿತು ಬಿಜೆಪಿ ಶಾಸಕರು ಘೋಷಣೆಗಳನ್ನು ಕೂಗಿದ ಬಳಿಕ ಸದನದಲ್ಲಿ ಕೋಲಾಹಲ ಆರಂಭಗೊಂಡಿತು. ಬೀರಭೂಮ್ ಹಿಂಸಾಕಾಂಡದಲ್ಲಿ ಐವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಹತ್ತು ಜನರ ಮೇಲೆ ಹಲ್ಲೆ ನಡೆಸಿ ಬಳಿಕ ಸಜೀವ ದಹನಗೊಳಿಸಲಾಗಿತ್ತು. ಕಚ್ಚಾ ಬಾಂಬ್ ದಾಳಿಯಲ್ಲಿ ಸ್ಥಳೀಯ ಟಿಎಂಸಿ ನಾಯಕ ಭಾದು ಶೇಖ್ ಸಾವಿಗೆ ಪ್ರತೀಕಾರವಾಗಿ ಈ ಹಿಂಸಾಚಾರ ನಡೆದಿತ್ತೆನ್ನಲಾಗಿದೆ. ಕಲಕತ್ತಾ ಉಚ್ಚ ನ್ಯಾಯಾಲಯದ ಹಸ್ತಕ್ಷೇಪದ ಬಳಿಕ ಸಿಬಿಐ ಹತ್ಯೆಗಳ ಕುರಿತು ತನಿಖೆಯನ್ನು ನಡೆಸುತ್ತಿದೆ.

ಸದನದ ಅಂಗಳದಲ್ಲಿ ಗುಂಪುಗೂಡಿದ ಶಾಸಕರು ಪರಸ್ಪರ ಹೊಡೆದಾಡಿಕೊಂಡಿದ್ದನ್ನು ವೀಡಿಯೊ ತುಣುಕುಗಳು ತೋರಿಸಿವೆ.

ಘಟನೆಯ ಬಳಿಕ ಬಿಜೆಪಿಯ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಅವರೂ ವೀಡಿಯೊವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು,ಹೊಡೆದಾಟವನ್ನು ನಿಲ್ಲಿಸಲು ಮಾರ್ಷಲ್‌ಗಳು ಮತ್ತು ಪೊಲೀಸ್ ಅಧಿಕಾರಿಗಳು ಹೆಣಗಾಡುತ್ತಿರುವುದನ್ನು ವೀಡಿಯೊ ತೋರಿಸಿದೆ.

ಪ.ಬಂಗಾಳ ವಿಧಾನಸಭೆ ಸಂಪೂರ್ಣ ಕೋಲಾಹಲಕ್ಕೆ ಸಾಕ್ಷಿಯಾಗಿದೆ. ಪ.ಬಂಗಾಳ ರಾಜ್ಯಪಾಲರ ಮೇಲೆ ಹಲ್ಲೆಯ ಬಳಿಕ ಈಗ ಟಿಎಂಸಿ ಶಾಸಕರು ಸದನದಲ್ಲಿ ರಾಮಪುರಹಾಟ್ ನರಮೇಧದ ಕುರಿತು ಚರ್ಚೆಗೆ ಆಗ್ರಹಿಸಿದ್ದ ಮುಖ್ಯ ಸಚೇತಕ ಮನೋಜ ತಿಗ್ಗಾ ಸೇರಿದಂತೆ ಬಿಜೆಪಿ ಶಾಸಕರ ಮೇಲೆ ಹಲ್ಲೆ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ಏನನ್ನು ಬಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಳವೀಯ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಹೊಡೆದಾಟದಲ್ಲಿ ಮೂಗಿಗೆ ಗಾಯಗೊಂಡಿರುವ ಟಿಎಂಸಿ ಶಾಸಕ ಅಸಿತ್ ಮಜುಮ್ದಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಪಕ್ಷ ನಾಯಕ ಸುವೇಂದು ಅಧಿಕಾರಿ ತನ್ನ ಮುಖಕ್ಕೆ ಗುದ್ದಿದ್ದರು ಎಂದು ಅವರು ಆಪಾದಿಸಿದ್ದಾರೆ.

‘ಪ್ರತಿಪಕ್ಷವು ಕಾನೂನು ಮತ್ತು ಸುವ್ಯವಸ್ಥೆ ಕುರಿತು ಚರ್ಚೆಗೆ ಆಗ್ರಹಿಸಿತ್ತು ಮತ್ತು ಸರಕಾರವು ನಿರಾಕರಿಸಿತ್ತು. ಅವರು ನಮ್ಮ ಶಾಸಕರೊಂದಿಗೆ ಹೊಡೆದಾಡಲು ಮಫ್ತಿಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ಕರೆತಂದಿದ್ದರು ಎಂದು ಆರೋಪಿಸಿದ ಅಧಿಕಾರಿ,‘ವಿಧಾನಸಭೆಯ ಒಳಗೂ ಶಾಸಕರಿಗೆ ಸುರಕ್ಷತೆಯಿಲ್ಲ. ಕೆಲವು ಟಿಎಂಸಿ ಶಾಸಕರು ತಿಗ್ಗಾ ಸೇರಿದಂತೆ ನಮ್ಮ ಕನಿಷ್ಠ 8-10 ಶಾಸಕರನ್ನು ಥಳಿಸಿದ್ದಾರೆ ’ ಎಂದರು.

ಬಿಜೆಪಿ ಶಾಸಕರು ನಂತರ ವಿಧಾನಸಭೆಯ ಹೊರಗೆ ಪ್ರತಿಭಟನಾ ಜಾಥಾ ನಡೆಸಿದರು.

 ಘಟನೆಗೆ ಬಿಜೆಪಿಯನ್ನು ಹೊಣೆಯಾಗಿಸಿದ ಟಿಎಂಸಿ ನಾಯಕ ಹಾಗೂ ಸಚಿವ ಫರ್ಹಾದ್ ಹಕೀಂ ಅವರು,‘ಸದನದೊಳಗೆ ನಮ್ಮ ಕೆಲವು ಶಾಸಕರು ಗಾಯಗೊಂಡಿದ್ದಾರೆ. ಬಿಜೆಪಿಯ ವರ್ತನೆಯನ್ನು ನಾವು ಖಂಡಿಸುತ್ತೇವೆ ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News