ಉಡುಪಿ ನಗರಸಭೆ ಇತರ ಅನಧಿಕೃತ ಕಟ್ಟಡಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

Update: 2022-03-28 11:20 GMT

ಉಡುಪಿ : ಧ್ವೇಷದ ರಾಜಕಾರಣಕ್ಕಾಗಿ ಉಡುಪಿ ಜಾಮೀಯ ಮಸೀದಿಗೆ ಸೇರಿದ ಜಾಗದಲ್ಲಿ ನಿರ್ಮಿಸಲಾದ ಎಸ್‌ಡಿಪಿಐ ಜಿಲ್ಲಾಧ್ಯಕ್ಷರ ಕಟ್ಟಡವನ್ನು ನಗರಸಭೆ ತೆರವುಗೊಳಿಸಿದೆ. ಜಿಲ್ಲೆಯಲ್ಲಿ ಅನಧಿಕೃತ ಕಟ್ಟಡ ಕೇವಲ ಇದೊಂದು ಮಾತ್ರವೇ ಎಂಬುದರ ಬಗ್ಗೆ ಉಡುಪಿ ಜಿಲ್ಲಾಡಳಿತ ಹಾಗೂ ನಗರ ಸಭೆ ಕೂಡಲೇ ಶ್ವೇತಪತ್ರ ಹೊರಡಿಸಬೇಕು. ಧೈರ್ಯ ಹಾಗೂ ಬದ್ಧತೆ ಇದ್ದರೆ ಶಾಸಕ ರಘುಪತಿ ಭಟ್ ಈ ಸವಾಲನ್ನು ಸ್ವೀಕರಿಸಬೇಕು ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಈ ಕಟ್ಟಡ ತೆರವುಗೊಳಿಸುವ ಮೂಲಕ ನಮ್ಮ ಸೈದ್ಧಾಂತಿಕ ಹಾಗೂ ಬಿಜೆಪಿ ವಿರುದ್ಧದ ಧ್ವನಿಯನ್ನು ಧಮನಿಸಲು ಸಾಧ್ಯವಿಲ್ಲ. ಇದರಲ್ಲಿ ಯಾವುದೇ ರಾಜೀ ಇಲ್ಲ. ಬಿಜೆಪಿವರು ವಿಚಾರದಿಂದ ನಮ್ಮನ್ನು ಎದುರಿಸಲು ಸಾಧ್ಯವಾಗದೇ ಈ ರೀತಿ ಧ್ವೇಷ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವ್ಯಾಪಾರ ಬಹಿಷ್ಕಾರ ಒಳ್ಳೆಯದಲ್ಲ

ಮುಸ್ಲಿಮ್ ವ್ಯಾಪಾರಿಗಳಿಗೆ ಸಂಘಪರಿವಾರದ ಜಾತ್ರೆಗಳಲ್ಲಿ ಬಹಿಷ್ಕಾರ ಹಾಕುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದನ್ನು ಕೆಲವು ಮಾಧ್ಯಮಗಳು ಧರ್ಮಯುದ್ಧ ಎಂಬುದಾಗಿ ಬಿಂಬಿಸುತ್ತಿದೆ. ಈ ವಿವಾದವನ್ನು ಸಂಘಪರಿವಾರದ ಕೆಲವು ಸಂಘಟನೆಗಳು ನಡೆಸುತ್ತಿವೆಯೇ ಹೊರತು ಹಿಂದು ಮುಸ್ಲಿಮರು ಭಾಗಿ ಯಾಗಿಲ್ಲ. ಇದಕ್ಕೆ ರಾಜ್ಯ ಸರಕಾರ ಕೂಡ ಕುಮ್ಮಕ್ಕು ಕೊಡುತ್ತಿದೆ ಎಂದು ಅವರು ದೂರಿದರು.

ಸಾವಿರಾರು ಮಂದಿ ಹಿಂದುಗಳು ಇಂದು ಗಲ್ಫ್ ದೇಶಗಳಲ್ಲಿ ದೊಡ್ಡ ಉದ್ದಿಮೆ, ಬ್ಯಾಂಕ್, ವಿವಿಗಳನ್ನು ನಡೆಸುತ್ತಿದ್ದಾರೆ. ಆದರೆ ಜಾತ್ಯತೀತ ರಾಷ್ಟ್ರ ವಾಗಿರುವ ಭಾರತದಲ್ಲಿ ಈ ರೀತಿಯ ಬೆಳವಣಿಗೆ ಶೋಭೆ ತರುವಂತದಲ್ಲ.  ಈಗಾಗಲೇ ನೋಟು ಅಮಾನೀಕರಣ ಹಾಗೂ ಕೋವಿಡ್‌ನಿಂದ ಸಾಕಷ್ಟು ವ್ಯಾಪಾರಸ್ಥರು ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದಾರೆ. ರಾಜ್ಯ ಸರಕಾರಕ್ಕೆ ವಿವೇಚನೆ ದೂರದೃಷ್ಠಿ ಇದ್ದರೆ ಇದನ್ನು ಕೂಡಲೇ ನಿಲ್ಲಿಸಬೇಕೆಂದು ಅವರು ಒತ್ತಾಯಿಸಿದರು.

ರಘುಪತಿ ಭಟ್‌ಗೆ ಸವಾಲು

ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿಗೆ ಸಂಬಂಧಿಸಿದಂತೆ ನಡೆಸಿದ ಬಂದ್ ವೇಳೆ ಮುಸ್ಲಿಮರು ಹಿಂದುಗಳ ಅಂಗಡಿಗಳನ್ನು ಕೂಡ ಬಲವಂತದಿಂದ ಬಂದ್ ಮಾಡಿಸಿದ್ದಾರೆಂದು ಶಾಸಕ ರಘುಪತಿ ಭಟ್ ಸುಳ್ಳು ಹೇಳಿ ಸದನದ ದಾರಿ ತಪ್ಪಿಸಿದ್ದಾರೆ. ಅಂತಹ ಒಂದೇ ಒಂದು ಪ್ರಕರಣಗಳು ಇಡೀ ರಾಜ್ಯದಲ್ಲಿ ನಡೆದಿದ್ದರೆ ಶಾಸಕರು ತೋರಿಸಲಿ ಎಂದು ಅವರು ಸವಾಲು ಹಾಕಿದರು.

ಉಡುಪಿ ಜಾಮೀಯ ಮಸೀದಿಗೆ ಸಂಬಂಧಿಸಿ ಕಟ್ಟಡದಲ್ಲಿ ಹಿಂದುಗಳು ಕೂಡ ವ್ಯಾಪಾರ ಮಾಡುತ್ತಿದ್ದಾರೆ. ಅವರನ್ನು ಯಾರು ಕೂಡ ಬಂದ್ ಮಾಡಿಸಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಕೂಡಲೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಹೈಕೋರ್ಟ್ ತೀರ್ಪಿನ ಶಬರಿಮಲೆ ಕುರಿತು ಸುಪ್ರೀಂ ಕೋರ್ಟಿನ ತೀರ್ಪಿನ  ವಿರುದ್ಧ ಕೇರಳದಲ್ಲಿ ಗಲಭೆ ಸೃಷ್ಠಿಸಿದ ಬಿಜೆಪಿಯವರು, ಇಂದು ಕರ್ನಾಟಕದಲ್ಲಿ ನಮಗೆ ಪಾಠ ಹೇಳುತ್ತಿದ್ದಾರೆ. ರಘುಪತಿ ಭಟ್ ಹೈಕೋರ್ಟ್ ಆದೇಶವನ್ನು ಪಾಲಿಸಿ ಕೊಡವೂರು ಕಲ್ಮತ್ ಮಸೀದಿಗೆ ದಾರಿ ಮಾಡಿಕೊಡಲಿ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಉಪಾಧ್ಯಕ್ಷ ಶಾಹೀದ್ ಅಲಿ, ಪ್ರಧಾನ ಕಾರ್ಯದರ್ಶಿ ಖಲೀಲ್ ಅಹ್ಮದ್, ಉಡುಪಿ ಕ್ಷೇತ್ರ ಅಧ್ಯಕ್ಷ ಸಾಧಿಕ್ ಉಪಸ್ಥಿತರಿದ್ದರು.

ಬಿಜೆಪಿಯಿಂದ ಕೋಮುವಾದಿ ನಡೆ

ಕೊಲ್ಲೂರು ದೇವಸ್ಥಾನದಲ್ಲಿ ಟಿಪ್ಪು ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಸಲಾಂ ಮಂಗಳಾರತಿಯನ್ನು ನಿಲ್ಲಿಸಬೇಕೆಂದು ಹೇಳುವುದು ಕೋಮುವಾದಿ ನಡೆಯಾಗಿದೆ ಎಂದು ಅಬ್ದುಲ್ ಮಜೀದ್ ಟೀಕಿಸಿದರು.

ಟಿಪ್ಪು ಸುಲ್ತಾನ್ ತನ್ನ ಆಡಳಿತ ಅವಧಿಯಲ್ಲಿ 150 ಕ್ಕಿಂತ ಜಾಸ್ತಿ ದೇವಸ್ಥಾನ ಗಳಿಗೆ ದತ್ತಿ ನೀಡುತ್ತಿದ್ದರು. ಪರಧರ್ಮ ಸಹಿಷ್ಣು ರಾಜ ಆಗಿದ್ದ ಟಿಪ್ಪು, ಹಲವು ದೇವಸ್ಥಾನ ರಕ್ಷಣೆ ಮಾಡಿದ್ದರು. ಟಿಪ್ಪು ಮುಸ್ಲಿಮ್ ದೊರೆ ಎಂಬ ಕಾರಣಕ್ಕೆ ಈ ರೀತಿ ವಿರೋಧ ಮಾಡುವುದು ಮತ್ತು ಇತಿಹಾಸ ತಿರುವುದು ಸರಿಯಲ್ಲ ಎಂದು ಅವರು ತಿಳಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News