ಮನೆ ಬಾಗಿಲಿಗೆ ಪಡಿತರ ಪೂರೈಕೆ: ಪಂಜಾಬ್ ಸಿಎಂ ಭಗವಂತ್ ಮಾನ್ ಘೋಷಣೆ

Update: 2022-03-28 17:17 GMT

ಚಂಡಿಗಢ, ಮಾ. 28: ಮನೆ ಬಾಗಿಲಿಗೆ ಪಡಿತರ ಪೂರೈಕೆ ಯೋಜನೆ ಜಾರಿಗೆ ತಂದಿರುವ ಬಗ್ಗೆ ಸೋಮವಾರ ಘೋಷಿಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಮನೆ ಬಾಗಿಲಿಗೇ ಉತ್ತಮ ಗುಣಮಟ್ಟದ ಪಡಿತರವನ್ನು ಪೂರೈಕೆ ಮಾಡುವುದರಿಂದ ಬಡವರು ಇನ್ನು ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಅಗತ್ಯತೆ ಇಲ್ಲ ಎಂದಿದ್ದಾರೆ.

ಆದರೆ, ಈ ಯೋಜನೆ ಅರ್ಹ ಫಲಾನುಭವಿಗಳಿಗೆ ಆಯ್ಕೆಯಾಗಿರುತ್ತದೆ. ಈ ಯೋಜನೆಯ ಕುರಿತ ವಿವರಣೆ ಶೀಘ್ರದಲ್ಲಿ ಲಭ್ಯವಾಗಲಿದೆ ಎಂದು ಮಾನ್ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ‘‘ಮನೆ ಬಾಗಿಲಿಗೆ ಪಡಿತರ ಪೂರೈಸಲು ಆಪ್ ಸರಕಾರ ನಿರ್ಧರಿಸಿದೆ. ಈ ಯೋಜನೆ ಅಡಿಯಲ್ಲಿ ಉತ್ತಮ ಗುಣಮಟ್ಟದ ಪಡಿತರ ವಸ್ತುಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ಪೂರೈಕೆ ಮಾಡಲಾಗುವುದು. ಈಗ ಯಾರೊಬ್ಬರು ಸರತಿ ಸಾಲಿನಲ್ಲಿ ನಿಂತುಕೊಳ್ಳುವ ಅಥವಾ ಅದಕ್ಕಾಗಿ ಕೆಲಸ ತ್ಯಜಿಸುವ ಅಗತ್ಯ ಈಗ ಇಲ್ಲ’’ ಎಂದು ಅವರು ಹೇಳಿದ್ದಾರೆ.

‘‘ನಮ್ಮ ಅಧಿಕಾರಿಗಳು ಫಲಾನುಭವಿಗಳಿಗೆ ದೂರವಾಣಿ ಕರೆ ಮಾಡಲಿದ್ದಾರೆ. ಫಲಾನುಭವಿಗಳ ಅನುಕೂಲತೆ ಹಾಗೂ ಲಭ್ಯತೆಗೆ ಅನುಗುಣವಾಗಿ ಅವರ ಮನೆಗಳಿಗೆ ಪಡಿತರ ಪೂರೈಕೆ ಮಾಡಲಾಗುವುದು’’ ಎಂದ ಮಾನ್ ಹೇಳಿದ್ದಾರೆ. ಅರವಿಂದ ಕೇಜ್ರಿವಾಲ್ ಅವರ ಸರಕಾರ ದಿಲ್ಲಿಯಲ್ಲಿ ಈ ಯೋಜನೆಯನ್ನು ಆರಂಭಿಸಿತು. ಆದರೆ, ದುರಾದೃಷ್ಟವಶಾತ್ ಅದು ನಿಂತಿತು. ಪಂಜಾಬ್‌ನಲ್ಲಿ ನಾವು ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ನಾವು ಈ ಯೋಜನೆಯನ್ನು ಯಶಸ್ವಿಯಾಗಿ ನಡೆಸಲಿದ್ದೇವೆ ಎಂದು ಮಾನ್ ಹೇಳಿದರು.

 ಸೋಮವಾರ ಆನ್‌ಲೈನ್‌ನಲ್ಲಿ ವಿವರಣೆ ನೀಡಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಒಮ್ಮೆ ಪಂಜಾಬ್ ಸರಕಾರ ಜನರಿಗೆ ಪಡಿತರವನ್ನು ಮನೆ ಬಾಗಿಲಿಗೆ ಪೂರೈಸುವ ನೀತಿಯನ್ನು ಅನುಷ್ಠಾನಗೊಳಿಸಿದರೆ, ಇತರ ರಾಜ್ಯಗಳ ನಾಗರಿಕರು ಕೂಡ ಈ ಯೋಜನೆಯನ್ನು ಆರಂಭಿಸುವಂತೆ ಆಗ್ರಹಿಸಲಿದ್ದಾರೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News