ಕೇರಳ ಎಡ ಪ್ರಜಾಸತ್ತಾತ್ಮಕ ರಂಗದ ಈ ನಡೆ ಜನಸಾಮಾನ್ಯರಿಗೆ ಉಪಯೋಗವೇ?

Update: 2022-03-29 09:01 GMT

ಕೇರಳ ಎಡ ಪ್ರಜಾಸತ್ತಾತ್ಮಕ ರಂಗದ ನೇತೃತ್ವ ನಡೆಸುತ್ತಿರುವ ಸ್ವಯಂ ವೈರುಧ್ಯಗಳ ರಾಜಕೀಯ ನಡೆಗಳು ಆ ರಾಜ್ಯದ ಜನಸಾಮಾನ್ಯರಿಗಾಗಲೀ ದೇಶದ ಜನಸಾಮಾನ್ಯರಿಗಾಗಲೀ ಹೆಚ್ಚೇನೂ ಉಪಯೋಗಕಾರಿಯಾಗದು ಎನ್ನುವುದಕ್ಕೆ ಹೆಚ್ಚಿನ ವಿಶ್ಲೇಷಣೆಯ ಅಗತ್ಯವಿಲ್ಲ. ಜಾಗತಿಕ ಬಂಡವಾಳದ ಅಗತ್ಯಕ್ಕೆ ತಕ್ಕಂತೆ ಸಿಪಿಐ(ಎಂ) ಕೂಡ ತನ್ನ ನಿಲುವು ಹಾಗೂ ಧೋರಣೆಗಳನ್ನು ಬದಲಾಯಿಸುತ್ತಾ ಬರುತ್ತಿದೆ ಎಂಬ ಅಂಶ ಕೂಡ ಗಮನಾರ್ಹ.

ಪಕ್ಕದ ಕೇರಳ ರಾಜ್ಯ ಕೆಲವು ತಿಂಗಳುಗಳಿಂದ ಹಲವಾರು ಸುದ್ಧಿಗಳಿಗೆ ಕಾರಣವಾಗುತ್ತಿದೆ. ಕೊರೋನ ಮೊದಲ ಬಾರಿ ಕಾಣಿಸಿಕೊಂಡ ರಾಜ್ಯ ಹಾಗೆಯೇ ಅದನ್ನು ಸಮರ್ಥವಾಗಿ ನಿಭಾಯಿಸಿದ ರಾಜ್ಯವೂ ಕೇರಳವೆಂದು ದೇಶ ಅಲ್ಲದೇ ಅಂತರ್‌ರಾಷ್ಟ್ರೀಯವಾಗಿಯೂ ಸುದ್ದಿ ಮಾಡಿತ್ತು.

ಕೇರಳ ಸುಮಾರು ಮೂರುಮುಕ್ಕಾಲು ಕೋಟಿ ಜನಸಂಖ್ಯೆಯ ರಾಜ್ಯ. ದೇಶಾದ್ಯಂತ ಕೇರಳೀಯರು ಹರಡಿದ್ದಾರೆ. ಅಮೆರಿಕ, ಯೂರೋಪು, ಏಶ್ಯ, ಆಫ್ರಿಕಾ ಖಂಡದ ರಾಷ್ಟ್ರಗಳು ಅಲ್ಲದೇ ಗಲ್ಫ್ ರಾಷ್ಟಗಳಲ್ಲೂ ಕೇರಳೀಯರು ಹರಡಿಕೊಂಡಿದ್ದಾರೆ. ಪ್ರತಿ ಮನೆಯಿಂದ ಒಬ್ಬಿಬ್ಬರಾದರೂ ಹೊರರಾಷ್ಟ್ರಗಳಲ್ಲಿ ದುಡಿದು ಕೇರಳಕ್ಕೆ ಹಣ ಕಳಿಸುತ್ತಾರೆ. ಕೊರೋನ ಮೂಲಕ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಸಾಕಷ್ಟು ಜನರು ಹೊರದೇಶಗಳಿಂದ ವಾಪಸಾಗಬೇಕಾಗಿ ಬಂದಿತ್ತು. ಅವರಲ್ಲಿ ಹಲವರು ಈಗ ಜಮೀನು ಕೊಂಡು ಇಲ್ಲವೇ ಗುತ್ತಿಗೆಗೆ ಹಿಡಿದು ಕೃಷಿ ಮಾಡುವತ್ತ ಸಾಗಿದ್ದಾರೆ.

ಕೇರಳ ಪ್ರಧಾನವಾಗಿ ಗ್ರಾಹಕ ರಾಜ್ಯವಾಗಿದೆ. ಉತ್ಪಾದಕ ರಾಜ್ಯವಾಗಿ ಬೆಳೆದಿಲ್ಲ. ಜನರ ಜೀವನ ಮಟ್ಟ ಉಳಿದ ರಾಜ್ಯಗಳಿಗಿಂತಲೂ ಮುಂದಿರುವುದು ನಿಜವಾದರೂ ಅದು ಪ್ರಧಾನವಾಗಿ ಸಾಧ್ಯವಾಗಿದ್ದು ರಾಜ್ಯದ ಉತ್ಪಾದಕತೆಯಿಂದಲ್ಲ. ಅನಿವಾಸಿ ಕೇರಳೀಯರ ಹಣ ರವಾನೆ ಮತ್ತು ಪ್ರವಾಸೋದ್ಯಮ ಇತ್ಯಾದಿ ಸೇವಾವಲಯಗಳ ಕೊಡುಗೆಗಳು ಹಾಗೂ ಸರಕಾರಗಳು ಮಾಡುತ್ತಾ ಬಂದಿರುವ ಸಾಲಗಳ ಕೊಡುಗೆಗಳು ಪ್ರಧಾನವಾಗಿವೆ. ಕೇರಳದ ಆರ್ಥಿಕತೆಯನ್ನು ಸಾಲ ಆರ್ಥಿಕತೆ ಎನ್ನಬಹುದು. ಕೇರಳ ದೇಶದಲ್ಲಿಯೇ ಮೂರನೇ ಸಾಲಗಾರ ರಾಜ್ಯವಾಗಿದೆ ಎಂದು 2021-22ರ ಸರಕಾರಿ ವರದಿ ಹೇಳುತ್ತದೆ. ಇದೇ ಸಾಲಿನಲ್ಲಿ ಕೇರಳ ರಾಜ್ಯದ ಒಟ್ಟು ಸಾಲ 3.27 ಲಕ್ಷ ಕೋಟಿ ರೂಪಾಯಿಗಳಾಗಿವೆ. ರಾಜ್ಯದ ಒಟ್ಟು ವಾರ್ಷಿಕ ಉತ್ಪನ್ನದ ಶೇಕಡಾ 38.3ರಷ್ಟು ಸಾಲವನ್ನು ಕೇರಳ ಹೊಂದಿದೆ. ಕೇರಳ ಸಾಮಾಜಿಕ ಕ್ಷೇಮಾಭಿವೃದ್ಧ್ದಿಗಳಿಗಾಗಿ ವ್ಯಯಿಸುತ್ತಿರುವ ಮೊತ್ತ ಕೂಡ ದೇಶದ ಇತರ ಎಲ್ಲಾ ರಾಜ್ಯಗಳಿಗಿಂತಲೂ ಹಲವು ಪಟ್ಟು ಹೆಚ್ಚಿನದಾಗಿದೆ. ಒಂದು ಅಂದಾಜಿನ ಪ್ರಕಾರ ರಾಷ್ಟ್ರೀಯ ಸರಾಸರಿ ಶೇಕಡಾ 30ರಷ್ಟಿದ್ದರೆ ಕೇರಳದಲ್ಲಿ ಅದು ಶೇಕಡಾ 162ರಷ್ಟಿದೆ.

 ಕೇರಳ ಈಗ ಸುದ್ದಿ ಮಾಡುತ್ತಿರುವುದು ಅಭಿವೃದ್ಧಿಯ ಕಾರಣಗಳಿಂದಾಗಿ ಅಲ್ಲ. ಬದಲಿಗೆ ರಾಜಕೀಯ ಹಾಗೂ ಆಡಳಿತಾತ್ಮಕ ಕಾರಣಗಳಿಂದಾಗಿ. ಮೊದಲನೆಯದು ಪಿಣರಾಯಿ ವಿಜಯನ್ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಸರಕಾರವು ಜಾರಿಗೆ ತರಲು ಹೊರಟಿರುವ ಕೇರಳ ರೈಲು ಯೋಜನೆಯದು. ಇದರ ಸರ್ವೆ ನಡೆಸಲು ವಿವಾದಿತ ಫ್ರೆಂಚ್ ಕಂಪೆನಿಯೊಂದಕ್ಕೆ ಗುತ್ತಿಗೆ ಕೊಟ್ಟಿರುವ ವಿಚಾರವನ್ನು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ. ಅಲ್ಲದೇ ಈ ಯೋಜನೆಯು ಪರಿಸರಕ್ಕೆ ಮತ್ತು ಸುಮಾರು 20,000 ಕುಟುಂಬಗಳಿಗೆ ಹಾನಿ ಮಾಡುತ್ತದೆ ಎಂದಿದೆ. ಈ ಯೋಜನೆಯ ಹಿಂದೆ ಭಾರೀ ಕಮಿಷನ್ ಲಾಬಿ ಹಾಗೂ ಭ್ರಷ್ಟಾಚಾರಗಳಿವೆ ಎಂದೆಲ್ಲಾ ಆರೋಪಿಸಿದೆ.

ಇದು ಕೇರಳದ ರಾಜಧಾನಿ ತಿರುವನಂತಪುರದಿಂದ ನಮ್ಮ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಕಾಸರಗೋಡು ಜಿಲ್ಲೆಯನ್ನು ನಾಲ್ಕು ಗಂಟೆಗಳ ಅವಧಿಯೊಳಗೆ ತಲುಪುವ ಸೆಮಿ ಹೈಸ್ಪೀಡ್ ರೈಲು ಯೋಜನೆಯಾಗಿದೆ. 529 ಕಿ.ಮೀ. ಉದ್ದದ ಈ ರೈಲು ಯೋಜನೆಯನ್ನು ಸಿಲ್ವರ್ ಲೈನ್ ಯೋಜನೆ ಎನ್ನಲಾಗುತ್ತಿದೆ. ಹನ್ನೊಂದು ನಿಲ್ದಾಣಗಳ ಈ ಯೋಜನೆಯಲ್ಲಿ ಗಂಟೆಗೆ ಕನಿಷ್ಠ 120 ಕಿ. ಮೀ. ಗರಿಷ್ಠ 200 ಕಿ. ಮೀ. ವೇಗದಲ್ಲಿ ರೈಲು ಚಲಿಸುತ್ತದೆ ಎನ್ನಲಾಗಿದೆ. ಸುಮಾರು 66,079 ಕೋಟಿ ರೂ.ಗಳ ಯೋಜನೆ ಇದಾಗಿದೆ. 1,300 ಎಕರೆ ಭೂಮಿಯನ್ನು ಇದಕ್ಕಾಗಿ ಸ್ವಾಧೀನಪಡಿಸಬೇಕಾಗುತ್ತದೆ ಎಂಬ ಅಂದಾಜಿದೆ.

ಆದರೆ ಕಾಂಗ್ರೆಸ್ ಇದರ ಯೋಜನಾ ವೆಚ್ಚ ಒಂದೂಕಾಲು ಲಕ್ಷ ಕೋಟಿಗಳಿಗೂ ಮೀರುತ್ತದೆ ಹಾಗಾಗಿ ದುಬಾರಿಯಾಗುತ್ತದೆ ಎಂದು ಟೀಕಿಸಿದೆ. ಈ ಯೋಜನೆ ಹಾದು ಹೋಗುವ ಮಾರ್ಗವನ್ನು ಗುರುತಿಸಿ ಕಲ್ಲು ಗುರುತುಗಳನ್ನು ನೆಡಲು ಹಲವಾರು ಕಡೆಗಳಲ್ಲಿ ಆಯಾ ಪ್ರದೇಶದ ಜನರು ತಡೆಯೊಡ್ಡುತ್ತಿದ್ದಾರೆ. ಹಲವೆಡೆ ಪೊಲೀಸ್ ಬಲಪ್ರಯೋಗಗಳು ಹಾಗೂ ಲಾಠಿಗಳ ಪ್ರಯೋಗಗಳು ನಡೆದಿವೆ.

 ಪ್ರಸ್ತುತ ಈಗ ತಿರುವನಂತಪುರದಿಂದ ಕಾಸರಗೋಡಿಗೆ ಇರುವ ರೈಲು ಪ್ರಯಾಣ ಹನ್ನೆರಡು ಗಂಟೆಗಳಷ್ಟು ದೀರ್ಘ ಅವಧಿಯದ್ದಾಗಿದೆ. ರಸ್ತೆ ಪ್ರಯಾಣ ಮತ್ತೂದೀರ್ಘಾವಧಿಯದಾಗಿದೆ. ಕೇರಳ ಸಂಚಾರ ದಟ್ಟಣೆಯ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದೆ. ಕೇರಳದ ರಸ್ತೆಗಳಲ್ಲಿ ಸಾಗುವುದು ದುಸ್ತರವೆನ್ನಿಸುವ ಸ್ಥಿತಿಯಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಇತರ ರಾಜ್ಯಗಳಿಗಿಂತಲೂ ಕಿರಿದಾದವುಗಳಾಗಿವೆ. ಕೇರಳ ದೇಶದಲ್ಲಿಯೇ ಹೆಚ್ಚು ಜನಸಂಖ್ಯಾ ದಟ್ಟಣೆಯಿರುವ ರಾಜ್ಯವಾಗಿರುವುದರಿಂದ ರಸ್ತೆ ಅಗಲೀಕರಣ ಕೂಡ ಕಷ್ಟದಾಯಕವಾಗಿದೆ. ಆದರೂ ಈಗ ಕೆಲವು ರಾಷ್ಟ್ರೀಯ ಹೆದ್ದಾರಿಗಳನ್ನು ನಾಲ್ಕು ಹಾಗೂ ಆರು ಪಥವಾಗಿಸಲಾಗುತ್ತಿದೆ. ಅದಕ್ಕಾಗಿ ರಸ್ತೆಯ ಬದಿಯ ಸಾವಿರಾರು ಮರಗಳನ್ನು ಕಡಿದುರುಳಿಸಲಾಗಿಸಲಾಗುತ್ತಿದೆ. ಹಲವಾರು ಮನೆ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ.

  ಎಡಪ್ರಜಾಸತ್ತಾತ್ಮಕ ರಂಗದ ಸರಕಾರ ಸಂಚಾರ ದಟ್ಟಣೆಯ ಸಮಸ್ಯೆಗೆ ಪರಿಹಾರವಾಗಿ ಹಾಗೂ ರಾಜ್ಯದ ಒಂದು ತುದಿಯನ್ನು ಮತ್ತೊಂದು ತುದಿಯಲ್ಲಿರುವ ರಾಜಧಾನಿಗೆ ಸೆಮಿ ಸ್ಪೀಡ್ ರೈಲು ಯೋಜನೆಯ ಮೂಲಕ ಜೋಡಿಸಿ ರಾಜ್ಯದ ಅಭಿವೃದ್ಧಿಯನ್ನು ಹಾಗೂ ಜನಸಾಮಾನ್ಯರ ಓಡಾಟಗಳನ್ನು ಸುಗಮಗೊಳಿಸಿ ವೇಗ ಸಾಧಿಸಲು ರೈಲು ಯೋಜನೆ ಅತ್ಯವಶ್ಯಕವೆಂದು ಪ್ರತಿಪಾದಿಸುತ್ತಿದೆ. ಅದರಿಂದಾಗಿ ಅತ್ಯಂತ ಕಡಿಮೆ ಮನೆಗಳು ಹಾಗೂ ಕಟ್ಟಡಗಳನ್ನು ತೆರವುಗೊಳಿಸಬೇಕಾಗುತ್ತದೆ ಅಷ್ಟೆ. ಅಲ್ಲದೆ ಇದು ಬಹುತೇಕವಾಗಿ ಮೆಟ್ರೋ ರೈಲಿನಂತೆ ಭೂಮಿಯಿಂದ ಮೇಲೆ ಎತ್ತರದಲ್ಲಿ ಮತ್ತು ಭೂಮಿಯಡಿಯಲ್ಲಿ ನಿರ್ಮಿಸುವ ಹಳಿಗಳ ಮೇಲೆ ಚಲಿಸುವಂತಹುದಾಗಿದೆ. ಅಲ್ಲದೆ ಐದರಷ್ಟು ನಿಲ್ದಾಣಗಳು ಎತ್ತರದಲ್ಲಿಯೂ ಉಳಿದವುಗಳು ಭೂಮಿಯಡಿ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಅರಣ್ಯ ನಾಶ ಕೂಡ ಅತ್ಯಲ್ಪವಾಗಿದೆ. ಕೇರಳ ರೈಲು ಮಾರ್ಗಗಳ ಅಭಿವೃದ್ಧಿಗಾಗಿಯೇ ಕೇರಳ ರೈಲ್ವೆ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಎಂಬ ಕಂಪೆನಿಯನ್ನು ಹುಟ್ಟುಹಾಕಲಾಗಿದೆ. ಈ ಕಂಪೆನಿಯಲ್ಲಿ ರಾಜ್ಯದ ಪಾಲು ಶೇಕಡಾ 51ರಷ್ಟಿದ್ದರೆ. ಯೂನಿಯನ್ ಸರಕಾರದ ಪಾಲು 49ರಷ್ಟು ಇದೆ.

ಆದರೆ ಈ ರೈಲು ಯೋಜನೆ ಹಾದು ಹೋಗುವ ಮಾರ್ಗವನ್ನು ಗುರುತು ಮಾಡಲು ರಾಜ್ಯದ ಹಲವಾರು ಕಡೆಗಳಲ್ಲಿ ತಮ್ಮ ಆಸ್ತಿ ಪಾಸ್ತಿಗಳನ್ನು ಕಳೆದುಕೊಳ್ಳುವ ಜನರಿಂದ ಪ್ರತಿರೋಧ ಎದುರಾಗುತ್ತಿದೆ. ಇದಕ್ಕೆ ಪ್ರಧಾನ ಕಾರಣ ಪ್ರಸ್ತಾಪಿತ ಪರಿಹಾರ ಮೊತ್ತ ಕಡಿಮೆಯದು ಮತ್ತು ಈ ರೈಲು ಯೋಜನೆಯಿಂದಾಗಿ ಅದರ ಅಕ್ಕ ಪಕ್ಕದ ಜಮೀನುಗಳ ಬೆಲೆಗಳೇನೂ ಏರದು ಬದಲಿಗೆ ಕಡಿಮೆಯಾಗಬಹುದು ಎಂಬ ಅಂಶ ಪ್ರಧಾನವಾಗಿ ಕೆಲಸ ಮಾಡುತ್ತಿದೆ. ರಿಯಲ್ ಎಸ್ಟೇಟ್ ಲಾಬಿ ಕೂಡ ಈ ಪ್ರತಿಭಟನೆಯ ಹಿಂದೆ ಕೆಲಸ ಮಾಡುತ್ತಿದೆ.

ಜೊತೆಗೆ ಈ ಯೋಜನೆ ಕಾರ್ಯ ಸಾಧುವಾದುದಲ್ಲ. ವ್ಯಾಪಕ ಪರಿಸರ ನಾಶ ಹಾಗೂ ಜನರ ಆಸ್ತಿಪಾಸ್ತಿ ನಾಶಕ್ಕೆ ಕಾರಣವಾಗಲಿದೆ, ಕೇರಳ ರಾಜ್ಯಕ್ಕೆ ಅದು ದುಬಾರಿಯಾಗಲಿದೆ, ಆರ್ಥಿಕವಾಗಿಯೂ ಈ ಯೋಜನೆ ಬಹಳ ದುಬಾರಿಯಾಗಲಿದೆ, ಇದರಿಂದಾಗಿ ರಾಜ್ಯ ಸಾಲದಲ್ಲಿ ಮುಳುಗಲಿದೆ ಎಂದೆಲ್ಲಾ ವಾದಗಳನ್ನು ಮುಂದಿಡಲಾಗುತ್ತಿದೆ. ಜನರ ಪ್ರತಿಭಟನೆಯನ್ನು ಕಾಂಗ್ರೆಸ್ ಬೆಂಬಲಿಸಿ ನಿಲ್ಲುತ್ತಿದೆ. ಕೇರಳ ಬಿಜೆಪಿ ಕೂಡ ವಿರೋಧಿಸುತ್ತಿದೆ. ಆದರೆ ಒಕ್ಕೂಟ ಸರಕಾರ ಈ ಯೋಜನೆಯನ್ನು ವಿರೋಧಿಸುತ್ತಿಲ್ಲ. ಅಲ್ಲದೆ ಒಕ್ಕೂಟ ರೈಲ್ವೆ ಸಚಿವಾಲಯವೂ ಈ ಯೋಜನೆಯಲ್ಲಿ ಭಾಗೀದಾರಿಯಾಗಿದೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತನ್ನ ಸರದಿಯ ಗೆಲುವು ಸಾಧಿಸುವಲ್ಲಿ ಸೋತು ಕುಳಿತಿರುವ ಕಾಂಗ್ರೆಸ್ ಪಕ್ಷ ಈ ರೈಲು ಯೋಜನೆಯನ್ನು ವಿರೋಧಿಸುವ ಹೋರಾಟವನ್ನು ತನ್ನ ಮುಂದಿನ ಚುನಾವಣೆಯ ಗೆಲುವಿನ ಅಸ್ತ್ರವನ್ನಾಗಿಸಲು ಪ್ರಯತ್ನಿಸುತ್ತಿದೆ. ಕಳೆದ ವಿಧಾನಸಭೆಯ ಅವಧಿಯಲ್ಲಿ ಶಬರಿಮಲೆಯ ಅಯ್ಯಪ್ಪದೇವಸ್ಥಾನದೊಳಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಪ್ರತಿಭಟನೆ ನಡೆಸಿ ವೋಟು ಗಳಿಸಲು ಪ್ರಯತ್ನ ನಡೆಸಿತ್ತು. ಈ ವಿಚಾರದಲ್ಲಿ ಬಿಜೆಪಿಯೊಂದಿಗೆ ಪೈಪೋಟಿಗೆ ಇಳಿದು ಬಿಟ್ಟಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಬಿಜೆಪಿಗಾಗಲಿ ಕಾಂಗ್ರೆಸಿಗಾಗಲೀ ಅದರಿಂದ ದೊಡ್ಡ ಲಾಭವಾಗಿರಲಿಲ್ಲ. ಪಿಣರಾಯಿ ಸರಕಾರ ಮತ್ತೊಮ್ಮೆ ಚುನಾವಣೆ ಗೆದ್ದು ಅಧಿಕಾರ ಹಿಡಿಯಿತು. ಕೇರಳದ ಇತಿಹಾಸದಲ್ಲಿ ಎರಡು ವಿಧಾನ ಸಭಾ ಅವಧಿಗಳನ್ನು ನಿರಂತರವಾಗಿ ಒಂದೇ ಪಕ್ಷ ಹಿಡಿತ ಸಾಧಿಸಲು ಅದುವರೆಗೂ ಆಗಿರಲಿಲ್ಲ.

ಸದ್ಯಕ್ಕೆ ದೇಶದಲ್ಲಿ ಕೇರಳದಲ್ಲಿ ಮಾತ್ರ ಆಡಳಿತದಲ್ಲಿರುವ ಸಿಪಿಐ (ಎಂ) ಪಕ್ಷ ತನ್ನ ರಾಜ್ಯ ಸಮ್ಮೇಳನವನ್ನು ಪೂರ್ತಿಗೊಳಿಸಿ ಮಹಾಧಿವೇಶನ ನಡೆಸಹೊರಟಿದೆ. ಈ ಸಂದರ್ಭದಲ್ಲಿ ಅದರ ಕೆಲವು ಹೇಳಿಕೆಗಳು ಹೊರಬಿದ್ದಿವೆ. ಅದರಲ್ಲಿ ಮುಖ್ಯವಾಗಿ ಹೆಚ್ಚು ಗಮನ ಸೆಳೆಯುತ್ತಿರುವುದು ‘‘ಕಾರ್ಮಿಕ ಸಂಘಟನೆಗಳು ಸಮರ ಶೀಲತೆಯನ್ನು ಕಡಿಮೆಗೊಳಿಸಬೇಕು. ಕಾರಣ ರಾಜ್ಯಕ್ಕೆ ಬಂಡವಾಳ ಹರಿದುಬರುವಂತೆ ಮಾಡಬೇಕಾಗಿದೆ. ಕಾರ್ಮಿಕರ ಸಮರ ಶೀಲತೆಯಿಂದಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಕಡಿಮೆಯಾಗಿದೆ. ಆ ಸಮಸ್ಯೆಯನ್ನು ಪರಿಹರಿಸಲು ಇದು ಅಗತ್ಯ.’’ ಇದನ್ನು ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ರಾಜ್ಯ ಸಮ್ಮೇಳನದ ಸಮಾರೋಪ ಸಮಾವೇಶದಲ್ಲೇ ಸ್ಪಷ್ಟವಾಗಿಯೇ ಹೇಳಿದ್ದರು. ಅಲ್ಲದೆ ಅದರ ಸಮ್ಮೇಳನದ ದಸ್ತಾವೇಜಿನಲ್ಲಿಯೂ ಇದನ್ನು ಹೇಳಲಾಗಿದೆ. ಈ ನಿಲುವು ಕಾರ್ಮಿಕ ವಿರೋಧಿ ನಿಲುವು ಮತ್ತು ಬಂಡವಾಳಶಾಹಿ ನಿಲುವು ಎಂದೆಲ್ಲಾ ಟೀಕೆಗಳೂ ಹಲವು ವಲಯಗಳಿಂದ ಬರುತ್ತಿವೆ.

ಕೇರಳದಲ್ಲಿ ತಲೆಹೊರೆಗಳನ್ನು ಇಳಿಸುವ ಹಮಾಲಿ ಕೆಲಸದವರು ‘ನೋಕು ಕೂಲಿ’ (ನೋಡಲು ಕೂಲಿ) ಎಂಬ ಹೆಸರಿನಲ್ಲಿ ಕೆಲಸ ಮಾಡದೆ ಕಡ್ಡಾಯ ಸುಲಿಗೆ ಮಾಡುವ ವಿಧಾನವೊಂದು ಚಾಲ್ತಿಯಲ್ಲಿದೆ. ಯಾವುದೇ ಲಾರಿ ಇಲ್ಲವೇ ಗೂಡ್ಸ್ ವಾಹನಗಳು ವಸ್ತುಗಳನ್ನು ತುಂಬಿಕೊಂಡು ಬಂದಲ್ಲಿ ಸಂಬಂಧಪಟ್ಟ ಮಾಲಕರು ಆ ಪ್ರದೇಶದ ಹಮಾಲಿದಾರರ ಸಂಘಟನಾ ಘಟಕ ನಿಗದಿಪಡಿಸಿದಷ್ಟು ಕೂಲಿಹಣವನ್ನು ನೀಡಲೇಬೇಕು. ಆದರೆ ಕೆಲಸ ಮಾಡುವಂತೆ ಒತ್ತಾಯಿಸುವಂತಿಲ್ಲ. ಒಂದುವೇಳೆ ಅವರು ಸಾಮಾನುಗಳನ್ನು ಇಳಿಸಿಕೊಟ್ಟರೂ ಬಹಳ ಅಜಾಗರೂಕತೆಯಿಂದ ವಸ್ತುಗಳು ಹಾಳಾಗುವಂತೆ ಇಲ್ಲವೇ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಇಳಿಸಿಬಿಟ್ಟು ಹೋಗುವ ರೂಢಿ ಬೆಳೆದಿತ್ತು. ಅವರ ಇಂತಹ ದುಂಡಾವರ್ತನೆಗಳನ್ನು ಪ್ರಶ್ನಿಸುವಂತೆ ಇರಲಿಲ್ಲ. ಒಂದು ವೇಳೆ ಪ್ರಶ್ನಿಸಿದರೆ ಅಂತಹವರ ಜೊತೆಗೆ ಎಲ್ಲಾ ವಿಚಾರಗಳಲ್ಲೂ ತಗಾದೆ, ಅಸಹಕಾರಗಳು, ಕಿರುಕುಳಗಳು ಸಾಮಾನ್ಯವಾಗಿದ್ದವು. ಇವು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅದು ನ್ಯಾಯಾಲಯದ ಕಟ್ಟೆಯೂ ಹತ್ತಿ ನ್ಯಾಯಾಲಯ ಅದು ನಿಯಮ ಬಾಹಿರವಾದ ಕಾರ್ಯ, ಅದನ್ನು ನಿಲ್ಲಿಸಬೇಕೆಂದು ತಾಕೀತು ಮಾಡಿದ ಮೇಲೆ ಇತ್ತೀಚೆಗೆ ಕೇರಳ ವಿಧಾನಸಭೆ ಆ ಬಗ್ಗೆ ನಿಯಮ ರೂಪಿಸಿದೆ. ನೋಕು ಕೂಲಿಯನ್ನು ಯಾರೂ ಪಡೆಯುವಂತಿಲ್ಲ ಎಂದು ತಾಕೀತು ಮಾಡಿದೆ. ಆ ರೀತಿ ಪಡೆಯುವವರ ಮೇಲೆ ಕ್ರಮ ಹಾಗೂ ಶಿಕ್ಷೆಯನ್ನು ನಿಗದಿಗೊಳಿಸಿ ಕಾನೂನು ಅನುಮೋದಿಸಿದೆ.

ಮತ್ತೊಂದು ಪ್ರಮುಖವಾದ ತೀರ್ಮಾನವೆಂದರೆ ಸಿಪಿಐ (ಎಂ) ಗುಡಿ, ದೇವಸ್ಥಾನಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಂಘ ಪರಿವಾರ ನಡೆಸುತ್ತಿರುವ ಗುಡಿ, ದೇವಸ್ಥಾನಗಳ ಅಪಬಳಕೆಯನ್ನು ತಡೆಯಲು ಇದು ಅಗತ್ಯವಾಗಿದೆ ಎಂಬ ಸಮರ್ಥನೆಗಳನ್ನು ನೀಡಲಾಗಿದೆ. ಅದರಂತೆ ಕೆಲವು ದೇವಸ್ಥಾನಗಳ ಚಟುವಟಿಕೆಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದೆ ಕೂಡ. ಈ ಕ್ರಮಗಳನ್ನು ಬಿಜೆಪಿ ವಿರೋಧಿಸಿದೆ. ಸಿಪಿಐ (ಎಂ)ನ ಈ ತೀರ್ಮಾನದ ಬಗ್ಗೆಯೂ ಸಾಕಷ್ಟು ಟೀಕೆಗಳು ಬರುತ್ತಿವೆ. ಇವರು ಹೇಳುವ ವೈಜ್ಞಾನಿಕ ಸಮಾಜವಾದವೆಲ್ಲಿ ದೇವಸ್ಥಾನಗಳ ಚಟುವಟಿಕೆಗಳೆಲ್ಲಿ? ಒಂದಕ್ಕೊಂದು ವೈರುಧ್ಯವಿರುವಂತಹ ವಿಚಾರಗಳಿವು. ನಾಯಕತ್ವದ ಮಟ್ಟದಲ್ಲೇ ಹೀಗಿರಬೇಕಾದರೆ ಇನ್ನು ಕಾರ್ಯಕರ್ತರ ಪ್ರಜ್ಞಾಮಟ್ಟ ಹೇಗೆ ವೈಜ್ಞಾನಿಕವಾಗಲು ಸಾಧ್ಯವಾಗುತ್ತದೆ ಎಂಬ ಪ್ರಶ್ನೆ ಸಹಜವಾಗಿಯೇ ಹಲವು ವಲಯಗಳಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿದೆ.

ಆದರೆ ಕೇರಳದ ಸಿಪಿಐ (ಎಂ), ಸಿಪಿಐನಂತಹ ಪಕ್ಷಗಳ ಹಲವಾರು ನಾಯಕರು ಜಾತೀಯತೆಯ ಆಚರಣೆಗಳು, ಬ್ರಾಹ್ಮಣಶಾಹಿ ಆಚರಣೆಗಳನ್ನು ಮೊದಲಿನಿಂದಲೂ ಖುದ್ದು ಆಚರಿಸುತ್ತಲೇ ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ದಲಿತ, ಆದಿವಾಸಿ ಹಿನ್ನೆಲೆಯವರು ಎಂಬ ಕಾರಣಕ್ಕಾಗಿಯೇ ಅವರ ಮೇಲೆ ಈ ಪಕ್ಷಗಳು ದೌರ್ಜನ್ಯ ನಡೆಸಿರುವ ಉದಾಹರಣೆಗಳು ಕೂಡ ಸಾಕಷ್ಟಿವೆ.

ಸಿಪಿಐ (ಎಂ) ತನ್ನ ಸಮ್ಮೇಳನದ ದಸ್ತಾವೇಜುಗಳಲ್ಲಾಗಲೀ ತಮ್ಮ ನಿರ್ಣಯಗಳಲ್ಲಾಗಲೀ ದೇಶ ಎದುರಿಸುತ್ತಿರುವ ಫ್ಯಾಶಿಸಂ ಅಪಾಯಗಳ ಮೇಲೆ ಕೇಂದ್ರೀಕರಿಸಿಲ್ಲದಿರುವುದು ಎದ್ದು ಕಾಣಿಸುತ್ತದೆ. ಹೆಚ್ಚಿನ ಒತ್ತು ಎಡ ಮತ್ತು ಇತರ ಪ್ರಜಾತಾಂತ್ರಿಕ ರಾಜಕೀಯ ಶಕ್ತಿಗಳನ್ನು ಒಗ್ಗೂಡಿಸಿ ಚುನಾವಣೆಗಳಲ್ಲಿ ಜಯಗಳಿಸುವ ಮೂಲಕ ಸಂಘಪರಿವಾರದ ಶಕ್ತಿಗಳ ಪ್ರಭಾವ ಬೆಳೆಯದಂತೆ ತಡೆಯುವ ಪ್ರಸ್ತಾಪಗಳಿವೆ. ಇದು ಫ್ಯಾಶಿಸಂ ಎಂದರೆ ಸಂಘಪರಿವಾರಕ್ಕೆ ಸೀಮಿತ ಎನ್ನುವ ಎಡ ಮತ್ತು ಪ್ರಗತಿಪರ ವಲಯಗಳ ನಿಲುವುಗಳಿಗೆ ತಕ್ಕಂತೆ ಇದೆ. ಆದರೆ ಇದು ಆ ಪಕ್ಷ ಮೊದಲಿನಿಂದಲೂ ಮಾಡಿಕೊಂಡು ಬರುತ್ತಿರುವ ಮಾಮೂಲಿ ಚುನಾವಣಾ ರಾಜಕೀಯ ನಡೆಯಾಗಿದೆ. ಗುರಿ ಮಾಡುವುದರಲ್ಲಿ ಮಾತ್ರ ವ್ಯತ್ಯಾಸವಿರಬಹುದು ಅಷ್ಟೆ. ಅಲ್ಲದೆ ಹಾಗೆ ರಚನೆಗೊಂಡ ಸರಕಾರಗಳು ಭಾರೀ ಕಾರ್ಪೊರೇಟ್ ಶಕ್ತಿಗಳಿಗೆ ಅನುಕೂಲವಾಗುವಂತೆ ಆಡಳಿತ ನಡೆಸುತ್ತಾ ಬಂದಿರುವುದರ ಪರಿಣಾಮಗಳನ್ನು ಇಂದು ಆಯಾ ಪ್ರದೇಶದ ಜನರು ಎದುರಿಸುತ್ತಿದ್ದಾರೆ. ಪಶ್ಚಿಮ ಬಂಗಾಳ ಹಾಗೂ ತ್ರಿಪುರಗಳನ್ನು ಸಿಪಿಐ (ಎಂ) ಆಡಳಿತಾತ್ಮಕವಾಗಿ ಕಳೆದುಕೊಂಡು ಬಹಳ ಕಾಲವಾಗಿದೆ.

ಕೇರಳ ಎಡ ಪ್ರಜಾಸತ್ತಾತ್ಮಕ ರಂಗದ ನೇತೃತ್ವ ನಡೆಸುತ್ತಿರುವ ಸ್ವಯಂ ವೈರುಧ್ಯಗಳ ಇಂತಹ ರಾಜಕೀಯ ನಡೆಗಳು ಆ ರಾಜ್ಯದ ಜನಸಾಮಾನ್ಯರಿಗಾಗಲೀ ದೇಶದ ಜನಸಾಮಾನ್ಯರಿಗಾಗಲೀ ಹೆಚ್ಚೇನೂ ಉಪಯೋಗಕಾರಿಯಾಗದು ಎನ್ನುವುದಕ್ಕೆ ಹೆಚ್ಚಿನ ವಿಶ್ಲೇಷಣೆಯ ಅಗತ್ಯವಿಲ್ಲ. ಜಾಗತಿಕ ಬಂಡವಾಳದ ಅಗತ್ಯಕ್ಕೆ ತಕ್ಕಂತೆ ಸಿಪಿಐ(ಎಂ) ಕೂಡ ತನ್ನ ನಿಲುವು ಹಾಗೂ ಧೋರಣೆಗಳನ್ನು ಬದಲಾಯಿಸುತ್ತಾ ಬರುತ್ತಿದೆ ಎಂಬ ಅಂಶ ಕೂಡ ಗಮನಾರ್ಹ.

ಮಿಂಚಂಚೆ: nandakumarnandana67@gmail.com

Writer - ನಂದಕುಮಾರ್ ಕೆ.ಎನ್.

contributor

Editor - ನಂದಕುಮಾರ್ ಕೆ.ಎನ್.

contributor

Similar News