×
Ad

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ; ಮಾ. 30ರಂದು ಸಿಟಿ ಸ್ಕ್ಯಾನ್ ಯಂತ್ರ ಲೋಕಾರ್ಪಣೆ

Update: 2022-03-29 16:49 IST

ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ರಾಜ್ಯದ 3 ಆಸ್ಪತ್ರೆಗಳಿಗೆ ಸಿಟಿ ಸ್ಕ್ಯಾನ್ ಯಂತ್ರ ನೀಡಲಾಗುತ್ತಿದ್ದು, ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ನೀಡಲಾಗಿರುವ ಯಂತ್ರದ ಲೋಕಾರ್ಪಣಾ ಕಾರ್ಯಕ್ರಮ ಮಾ.30ರಂದು ನಡೆಯುವುದು ಎಂದು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಶ್ರೀಪತಿ ರಾವ್ ಅವರು ತಿಳಿಸಿದರು. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಾ. 30ರಂದು ಬೆಳಿಗ್ಗೆ 10 ಗಂಟೆಗೆ ಸಿ.ಟಿ. ಸ್ಕ್ಯಾನ್ ಲೋಕಾರ್ಪಣಾ ಕಾರ್ಯಕ್ರಮ ನಡೆಯುವುದು. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗೆ ಅವರು ಉದ್ಘಾಟಿಸುವರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಎಚ್. ಮಂಜುನಾಥ್, ಸಂಸದ ನಳಿನ್ ಕುಮಾರ್ ಕಟೀಲ್, ಉಪವಿಭಾಗಾಧಿಕಾರಿ ಗಿರೀಶ್ ನಂದನ್, ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ಯು.ಪಿ. ಶಿವಾನಂದ್, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‍ನ ಪುತ್ತೂರು ಘಟಕದ ಅಧ್ಯಕ್ಷ ಡಾ. ನರಸಿಂಹ ಶರ್ಮ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನಗರಸಭೆ ಅಧ್ಯಕ್ಷ ಜೀವಂಧರ ಜೈನ್ ಅವರು ಅಧ್ಯಕ್ಷತೆ ವಹಿಸುವರು ಎಂದು ಅವರು ಮಾಹಿತಿ ನೀಡಿದರು.

32 ಸ್ಲೈಸ್ ರೆಸೆಲ್ಯೂಶನ್ ಹೊಂದಿರುವ ಸಿ.ಟಿ. ಸ್ಕ್ಯಾನ್ ಯಂತ್ರ ಇದಾಗಿದ್ದು, ಸುಮಾರು ರೂ. 2 ಕೋಟಿ ಬೆಲೆಬಾಳುವ ಈ ಯಂತ್ರವನ್ನು ಧರ್ಮಸ್ಥಳ ಯೋಜನೆಯಿಂದ ನಮಗೆ ನೀಡಲಾಗಿದೆ. ಆಸ್ಪತ್ರೆ ವತಿಯಿಂದ ನಿರ್ವಹಣೆ ಮಾಡಲಾಗುತ್ತದೆ. ತಾಂತ್ರಿಕ ಸಿಬ್ಬಂದಿ ಆಸ್ಪತ್ರೆಯವರಾಗಿದ್ದು, ಧರ್ಮಸ್ಥಳ ಯೋಜನೆಯ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆಗೆ ಇದು ಒಳಪಡುತ್ತದೆ. ಇತರರಿಗೂ ಇದರ ಬಳಕೆ ಸಿಗಲಿದ್ದು, ರಿಯಾಯಿತಿ ದರ ವಿಧಿಸಲಾಗುತ್ತದೆ ಎಂದು ಡಾ. ಶ್ರೀಪತಿ ರಾವ್ ಅವರು ಹೇಳಿದರು. 

ರಾಜ್ಯದ ಆಯ್ದ ಆಸ್ಪತ್ರೆಗಳಿಗೆ ಸಿಟಿ ಸ್ಕ್ಯಾನ್ ಯಂತ್ರ ಒದಗಿಸುವ ಯೋಜನೆಯ ಉಪಕ್ರಮದ ಅಡಿಯಲ್ಲಿ ಇದು ಕಾರ್ಯರೂಪಕ್ಕೆ ಬರುತ್ತಿದೆ. ಯಂತ್ರ ಒದಗಿಸುವ ಬಗ್ಗೆ ಆಸ್ಪತ್ರೆಗಳಿಗೆ ಯೋಜನೆ ವತಿಯಿಂದ ಮುಂಚಿತವಾಗಿ ಪತ್ರ ಕಳುಹಿಸಲಾಗಿತ್ತು. ಅದರಂತೆ ಅನೇಕ ಆಸ್ಪತ್ರೆಗಳು ಪ್ರಸ್ತಾವನೆ ಸಲ್ಲಿಸಿದ್ದವು. ಈ ಪೈಕಿ ದ.ಕ.  ಜಿಲ್ಲೆಯಲ್ಲಿ ಪ್ರಗತಿ ಆಸ್ಪತ್ರೆಯನ್ನು ಆಯ್ಕೆ ಮಾಡಲಾಗಿದೆ. ಇದು ನಮಗೆ ಹೆಮ್ಮೆಯ ಸಂಗತಿ ಎಂದು ಡಾ. ಶ್ರೀಪತಿ ರಾವ್ ಅವರು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಆನಂದ್ ಅವರು ಮಾತನಾಡಿ, ಸಿಟಿ ಸ್ಕ್ಯಾನ್ ವ್ಯವಸ್ಥೆಗಾಗಿ ರಾಜ್ಯದಲ್ಲಿ 3 ಆಸ್ಪತ್ರೆಗಳನ್ನು ಸದ್ಯ ಆಯ್ಕೆ ಮಾಡಲಾಗಿದ್ದು,  ಈಗಾಗಲೇ ಕಾಸರಗೋಡಿನ ಜನಾರ್ದನ ಆಸ್ಪತ್ರೆಗೆ ಸಿ.ಟಿ. ಸ್ಕ್ಯಾನ್ ಯಂತ್ರ ನೀಡಲಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಡಾ. ನಾಗೇಶ್ ಅವರ ಆಸ್ಪತ್ರೆಗೆ 3ನೇ ಯಂತ್ರವನ್ನು ಶೀಘ್ರದಲ್ಲೇ ಹಸ್ತಾಂತರಿಸಲಾಗುವುದು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗ್ರಾಹಕ ಸೇವಾ ಕೇಂದ್ರ ಸಂಯೋಜಕ ಜಯಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News