ಅಕ್ರಮ ಆಸ್ತಿ ಪ್ರಕರಣ: ಸಚಿವ ವಿ. ಸೋಮಣ್ಣ ನಿರೀಕ್ಷಣಾ ಜಾಮೀನು ಅರ್ಜಿ ರದ್ದು
ಬೆಂಗಳೂರು, ಎ.1: ತಮ್ಮ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ವಿ.ಸೋಮಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ರದ್ದು ಮಾಡಿದೆ.
ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಶುಕ್ರವಾರ ಜಾಮೀನು ಅರ್ಜಿ ರದ್ದು ಮಾಡಿದೆ.
ವಿ.ಸೋಮಣ್ಣ ವಿರುದ್ಧ ಹಲವು ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲು ಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸೋಮಣ್ಣ ನಿರೀಕ್ಷಣಾ ಜಾಮೀನು ಕೋರಿದ್ದರು. ಬುಧವಾರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶವನ್ನು ಎ.1ಕ್ಕೆ ಕಾಯ್ದಿರಿಸಿತ್ತು. ಶುಕ್ರವಾರ ಜಾಮೀನು ಅರ್ಜಿಯನ್ನು ರದ್ದುಗೊಳಿಸಿ ಆದೇಶಿಸಿದೆ.
ಅಕ್ರಮ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಸಲ್ಲಿಸಿರುವ ವರದಿಯನ್ನು ನ್ಯಾಯಾಲಯವು ಕಳೆದ ಸೋಮವಾರ ತಿರಸ್ಕರಿಸಿತ್ತು. ಸೋಮಣ್ಣ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶ ನೀಡಿತ್ತು. ಎ.16ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೋಮಣ್ಣ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ಶೇ.204 ಅಕ್ರಮ ಆಸ್ತಿ: ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಡಿ ಸೋಮಣ್ಣ ತಮ್ಮ ಆಸ್ತಿ ಕುರಿತು ಸ್ವಯಂ ಘೋಷಣೆ ಮಾಡಿಕೊಂಡಿರುವ ಮಾಹಿತಿ ಪ್ರಕಾರ 1993-94 ರಿಂದ 2009-10ರ ಅವಧಿಯಲ್ಲಿ ಅವರ ಆಸ್ತಿಯು 18,49,89,441 ರೂ.ಆಗಿದೆ. ಈ ಪೈಕಿ ಅಂದಾಜು 12.42 ಕೋಟಿ ರೂ.ಅಕ್ರಮ ಆಸ್ತಿ ಕಂಡು ಬಂದಿದೆ. ಅಕ್ರಮ ಆಸ್ತಿಯ ಪ್ರಮಾಣ ಶೇ.204 ಆಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ದೂರುದಾರ ಮೂಡಲಪಾಳ್ಯದ ರಾಮಕೃಷ್ಣ ಅವರ ಪರವಾಗಿ ವಕೀಲರಾದ ಬಿ.ಎನ್.ಜಗದೀಶ್ ಅವರು ವಾದಿಸಿದ್ದರು.