×
Ad

ಮಂಗಳೂರು: ಪೆಟ್ರೋಲ್, ಡೀಸೆಲ್ ಪೂರೈಕೆ ಸ್ಥಗಿತದ ವಿರುದ್ಧ ಬಂಕ್ ಮಾಲಕರಿಂದ ಸಚಿವ ಸುನೀಲ್ ಕುಮಾರ್‌ಗೆ ಮನವಿ

Update: 2022-04-03 17:58 IST

ಮಂಗಳೂರು : ನಯಾರಾ ಪೆಟ್ರೋಲಿಯಂ ಕಂಪನಿಯವರು ರಾಜ್ಯದಲ್ಲಿ ತಮ್ಮ ಅಧೀನದ ಪೆಟ್ರೋಲ್ ಬಂಕ್‌ಗಳಿಗೆ ಕಳೆದ ಎರಡು ವಾರದಿಂದ ಪೆಟ್ರೋಲ್, ಡೀಸೆಲ್ ಪೂರೈಕೆ ಮಾಡದೆ ಸ್ಥಗಿತಗೊಳಿಸಿದ್ದಾರೆ. ಅಲ್ಲದೆ ಮಾರುಕಟ್ಟೆ ಬೆಲೆಗಿಂತ 2 ರೂ. ಹೆಚ್ಚಿಸಿ ಅನ್ಯಾಯ ಎಸಗಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ಬಂಕ್ ಮಾಲಕರು ರಾಜ್ಯ ಇಂಧನ ಸಚಿವ ಸುನೀಲ್ ಕುಮಾರ್‌ಗೆ ಶನಿವಾರ ಮನವಿ ಸಲ್ಲಿಸಿದ್ದಾರೆ.

ಗುರುವಾರ ತಣ್ಣೀರುಬಾವಿಯಲ್ಲಿ ಪ್ರತಿಭಟನೆ ನಡೆಸಿದ್ದ ನೂರಾರು ಖಾಸಗಿ ಪೆಟ್ರೋಲ್ ಬಂಕ್‌ಗಳ ಮಾಲಕರು ನಯಾರಾ ಕಂಪೆನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಎಲ್ಲಾ ಡೀಲರ್‌ಗಳೂ ಮುಂಗಡ ಹಣ ಪಾವತಿಸಿ ಇಂಧನಕ್ಕೆ ಆರ್ಡರ್ ಮಾಡಿದರೂ ಕೂಡ ಸಕಾಲಕ್ಕೆ ಪೂರೈಕೆ ಮಾಡಲಾಗುತ್ತಿಲ್ಲ. ತಣ್ಣೀರುಬಾವಿಯಲ್ಲಿರುವ ನಯಾರಾ ಕಂಪನಿಯ ಸಹವರ್ತಿ ಸಂಸ್ಥೆ ಏಜಿಸ್‌ನವರ ಇಂಧನ ಸಂಗ್ರಹಣಾಗಾರದಲ್ಲಿ ಲಕ್ಷಾಂತರ ಲೀಟರ್ ಪೆಟ್ರೋಲ್, ಡೀಸೆಲ್ ಸಂಗ್ರಹಿಸಿ ಇರಿಸಲಾಗಿದೆ. ಅದನ್ನು ವಿತರಣೆ ಮಾಡುತ್ತಿಲ್ಲ ಎಂದು ಬಂಕ್ ಮಾಲಕರ ನಿಯೋಗ ಸಚಿವರ ಗಮನ ಸೆಳೆದರು.

ಸ್ವತಃ ನಾವೇ ಇಂಧನ ಪೂರೈಕೆ ಮಾಡಿಕೊಳ್ಳಲು ಹಣ ಹಾಕಿ ಟ್ಯಾಂಕರ್ ಇರಿಸಿಕೊಂಡು ಅಥವಾ ಟ್ರಾನ್ಸ್‌ಪೋರ್ಟ್ ಕಂಪನಿಯವರ ಮೊರೆ ಹೋಗಿದ್ದೆವು. ಲಾರಿ ಚಾಲಕರು ಕೂಡ ಏಜಿಸ್ ಸಮೀಪ ಕಾದು ಕುಳಿತರೂ ಇಂಧನ ಸಿಗುತ್ತಿಲ್ಲ ಎಂದು ಪೆಟ್ರೋಲ್ ಬಂಕ್ ಮಾಲಕರು ಆರೋಪಿಸಿದ್ದಾರೆ.

ನಾವು ಪ್ರತಿಯೊಂದು ಬಂಕ್ ತೆರೆಯಲು ಕನಿಷ್ಟ 2 ಕೋ.ರೂ. ವಿನಿಯೋಗಿಸಿದ್ದೇವೆ. ಅದಕ್ಕಾಗಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದೇವೆ. ಇದೀಗ ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಿದ ಕಾರಣ ವ್ಯವಹಾರದಲ್ಲಿ ನಷ್ಟ ಉಂಟಾಗಿದೆ. ಸಿಬ್ಬಂದಿಗಳಿಗೆ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ. ಯಾವುದೇ ಮುನ್ಸೂಚನೆ ನೀಡದೆ ಇಂಧನ ಸ್ಥಗಿತಗೊಳಿಸುವ ಮೂಲಕ ಬಂಕ್‌ಗಳನ್ನು ಮುಚ್ಚಿಸಲು ಹುನ್ನಾರ ಮಾಡಲಾಗುತ್ತಿದೆ ಎಂದು ಮಾಲಕರು ಆರೋಪಿಸಿದ್ದಾರೆ.

ಪೆಟ್ರೋಲ್ ಬಂಕ್ ತೆರೆಯಲು 30 ವರ್ಷದ ಅಗ್ರಿಮೆಂಟ್ ಮಾಡಿಕೊಂಡಿದ್ದೇವೆ. ಇನ್ನೂ ಒಂದು ವರ್ಷವಾಗಿಲ್ಲ, ಈಗಲೇ ಈ ರೀತಿ ಕೈಕೊಟ್ಟರೆ ಇನ್ನು 29 ವರ್ಷ ಇವರ ಜೊತೆ ವ್ಯಾಪಾರ ಮಾಡುವುದು ಹೇಗೆ ? ಕನಿಷ್ಠ ರಾಜ್ಯದಲ್ಲಿ 500ರಷ್ಟು ಬಂಕ್‌ಗಳು ನಯಾರಾದವರನ್ನು ನಂಬಿಕೊಂಡಿದ್ದಾರೆ, ನಮ್ಮನ್ನು ಬಿಸಿನೆಸ್ ಪಾರ್ಟನರ್ ತರ ನೋಡದೆ ಗುಲಾಮರಂತೆ ಪರಿಗಣಿಸುತ್ತಿದ್ದಾರೆ. ಹಾಗಾಗಿ ದ.ಕ. ಜಿಲ್ಲಾಧಿಕಾರಿ, ಇಂಧನ ಸಚಿವರು ಮಧ್ಯಪ್ರವೇಶಿಸಿ ಅಕ್ರಮವಾಗಿ ಇಂಧನ ದಾಸ್ತಾನು ಇಟ್ಟಿರುವ ಕಂಪನಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News