ಉ.ಪ್ರ: ಗೋರಖನಾಥ ದೇವಸ್ಥಾನದ ಹೊರಗೆ ಐಐಟಿ ಪದವೀಧರನಿಂದ ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ

Update: 2022-04-04 16:40 GMT

ಲಕ್ನೋ,ಎ.4: ಉತ್ತರ ಪ್ರದೇಶದ ಗೋರಖ್ಪುರದ ಗೋರಖ್‌ನಾಥ ದೇವಸ್ಥಾನದ ಹೊರಗೆ ಐಐಟಿ ಪದವೀಧರನೋರ್ವ ಇಬ್ಬರು ಪೊಲೀಸರ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿ ಧಾರ್ಮಿಕ ಘೋಷಣೆಗಳನ್ನು ಕೂಗುತ್ತ ದೇಗುಲದೊಳಗೆ ನುಗ್ಗಲು ಯತ್ನಿಸಿದ ಘಟನೆ ರವಿವಾರ ಸಂಜೆ ನಡೆದಿದ್ದು,ಜನರ ಗುಂಪು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದೆ. ಭಯೋತ್ಪಾದಕ ದಾಳಿಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಹ್ಮದ್ ಮುರ್ತಝಾ ಅಬ್ಬಾಸಿ ಎಂಬಾತ ಮಚ್ಚಿನಂತಹ ಆಯುಧವನ್ನು ಝಳಪಿಸುತ್ತ ಗೋರಖ್‌ನಾಥ ದೇವಸ್ಥಾನದ ಹೊರಗೆ ಕೂಗಾಡುತ್ತಿದ್ದುದನ್ನು ವೀಡಿಯೊಗಳು ತೋರಿಸಿವೆ. ಗೋರಖ್‌ನಾಥ ದೇವಸ್ಥಾನವು ಉ.ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು ಮಹಂತರಾಗಿರುವ ಗೋರಖ್‌ನಾಥ ಮಠದ ಮುಖ್ಯ ಸ್ಥಾನವಾಗಿದೆ.

ಗುಂಪು ಮುರ್ತಝಾನತ್ತ ಕಲ್ಲುಗಳನ್ನು ತೂರುತ್ತಿರುವುದನ್ನು ಮತ್ತು ಅಂತಿಮವಾಗಿ ಆತನನ್ನು ನೆಲಕ್ಕೆ ಕೆಡವುತ್ತಿರುವುದನ್ನೂ ವೀಡಿಯೊಗಳು ತೋರಿಸಿವೆ. ಗೋರಖ್‌ಪುರ ನಿವಾಸಿಯಾಗಿರುವ ಮುರ್ತಝಾ ಪ್ರತಿಷ್ಠಿತ ಐಐಟಿ-ಬಾಂಬೆಯಿಂದ 2015ರಲ್ಲಿ ಪದವಿಯನ್ನು ಪಡೆದಿದ್ದಾನೆ. ಆತನ ಬಳಿ ಲ್ಯಾಪ್‌ಟಾಪ್,ಫೋನ್ ಮತ್ತು ಟಿಕೆಟ್ ಒಂದು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿಯಿಂದ ವಶಪಡಿಸಿಕೊಳ್ಳಲಾಗಿರುವ ವಸ್ತುಗಳಿಂದ ಇದೊಂದು ದೊಡ್ಡ ಷಡ್ಯಂತ್ರವಾಗಿದ್ದಂತೆ ಕಂಡು ಬರುತ್ತಿದೆ. ಇದು ಭಯೋತ್ಪಾದಕ ದಾಳಿಯಾಗಿರಬಹುದು ಎನ್ನುವುದನ್ನು ನಾವು ನಿರಾಕರಿಸುವಂತಿಲ್ಲ’ ಎಂದು ಎಡಿಜಿಪಿ ಪ್ರಶಾಂತ್ ಕುಮಾರ್ ತಿಳಿಸಿದರು. ಮುರ್ತಝಾ ಮತ್ತು ಆತನಿಂದ ದಾಳಿಗೊಳಗಾಗಿದ್ದ ಇಬ್ಬರು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News