ಒಂದೇ ದಿನದಲ್ಲಿ ರಾಜೀನಾಮೆ ಸಲ್ಲಿಸಿದ ಶ್ರೀಲಂಕಾದ ನೂತನ ಹಣಕಾಸು ಸಚಿವ

Update: 2022-04-05 17:32 GMT

ಕೊಲಂಬೊ, ಎ.5: ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ವಿರೋಧಿಸಿ ದೇಶದೆಲ್ಲೆಡೆ ವ್ಯಾಪಿಸಿರುವ ಪ್ರತಿಭಟನೆಯ ನಡುವೆಯೇ ಸೋಮವಾರ ಶ್ರೀಲಂಕಾದ ನೂತನ ವಿತ್ತಸಚಿವರಾಗಿ ನೇಮಕಗೊಂಡಿದ್ದ ಅಲಿ ಸಬ್ರಿ ಮಂಗಳವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಸೋಮವಾರ ಸಚಿವ ಸಂಪುಟವನ್ನು ವಿಸರ್ಜಿಸಿದ್ದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ , ಅರ್ಥ ಸಚಿವರಾಗಿದ್ದ ತನ್ನ ಸಹೋದರ ಬಾಸಿಲ್ ರಾಜಪಕ್ಸರನ್ನು ವಜಾಗೊಳಿಸಿ ಆ ಹುದ್ದೆಗೆ ಅಲಿ ಸಬ್ರಿಯನ್ನು ನೇಮಕಗೊಳಿಸಿದ್ದರು. ಆದರೆ ತಕ್ಷಣದಿಂದ ಅನ್ವಯವಾಗುವಂತೆ ಹುದ್ದೆಗೆ ರಾಜೀನಾಮೆ ಸಲ್ಲಿಸುವುದಾಗಿ ಮಂಗಳವಾರ ಅಧ್ಯಕ್ಷರನ್ನುದ್ದೇಶಿಸಿ ಬರೆದಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ದೇಶಕ್ಕೆ ಈಗ ಎದುರಾಗಿರುವ ಅಸಾಮಾನ್ಯ ಬಿಕ್ಕಟ್ಟಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ತಕ್ಷಣ ಮಧ್ಯಂತರ ವ್ಯವಸ್ಥೆಯನ್ನು ಮಾಡುವ ಅಗತ್ಯವಿದೆ. ನೂತನ ವಿತ್ತಸಚಿವರ ನೇಮಕ ಸೇರಿದಂತೆ ಹೊಸ, ಪೂರ್ವಭಾವಿ ಮತ್ತು ಅಸಾಂಪ್ರದಾಯಿಕ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಅಲಿ ಸಬ್ರಿ ಅಧ್ಯಕ್ಷರಿಗೆ ಬರೆದಿರುವ ಪತ್ರದಲಿ್ಲ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News