ನಮ್ಮ ಶಿಕ್ಷಣ ಇಷ್ಟವಾಗದಿದ್ದರೆ ಬೇರೆ ರಾಜ್ಯ, ದೇಶಗಳಿಗೆ ಹೋಗಿ: ಗುಜರಾತ್ ಶಿಕ್ಷಣ ಸಚಿವ

Update: 2022-04-07 05:39 GMT
ಜಿತು ವಘಾನಿ (Photo - PTI)

ಅಹ್ಮದಾಬಾದ್: ಗುಜರಾತ್‍ನ ಶಾಲಾ ಶಿಕ್ಷಣವನ್ನು ಇಷ್ಟಪಡದವರು, ತಾವು ಹುಟ್ಟಿ ಬೆಳೆದ ರಾಜ್ಯವನ್ನು ಟೀಕಿಸುವ ಬದಲು ತಮ್ಮ ಮಕ್ಕಳ ಸರ್ಟಿಫಿಕೆಟ್‍ಗಳನ್ನು ಪಡೆದುಕೊಂಡು ತಮಗೆ ಇಷ್ಟ ಇರುವ ರಾಜ್ಯ ಅಥವಾ ದೇಶಗಳಿಗೆ ತೆರಳಿ ಎಂದು ಗುಜರಾತ್ ಶಿಕ್ಷಣ ಸಚಿವ ಜಿತು ವಘಾನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಜಕೋಟ್‍ನಲ್ಲಿ ಶಾಲಾ ಕಟ್ಟಡವೊಂದರ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಹಲವು ಮಂದಿ ಪೋಷಕರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. "ಗುಜರಾತ್‍ನಲ್ಲೇ ಹುಟ್ಟಿ ಬೆಳೆದ ಜನ, ಶಾಲಾ ಶಿಕ್ಷಣಕ್ಕೆ ಬೇರೆ ರಾಜ್ಯಗಳೇ ಉತ್ತಮ ಎಂಬ ಅಭಿಪ್ರಾಯದಲ್ಲಿದ್ದಾರೆ" ಎಂದು ಆಮ್ ಆದ್ಮಿ ಪಕ್ಷವನ್ನು ಪರೋಕ್ಷವಾಗಿ ಟೀಕಿಸಿದರು. ಗುಜರಾತ್‍ನಲ್ಲಿ ಶಾಲಾ ಶಿಕ್ಷಣ ಗುಣಮಟ್ಟವನ್ನು ಆಮ್ ಆದ್ಮಿ ಪಕ್ಷ ಕಟುವಾಗಿ ಟಿಕಿಸಿತ್ತು.

"ಕೆಲವು ಮಂದಿ ಗುಜರಾತ್‍ನಲ್ಲಿ ಜೀವಿಸುತ್ತಿದ್ದಾರೆ. ಇಲ್ಲೇ ಹುಟ್ಟಿದವರು. ಅವರ ಮಕ್ಕಳು ಇಲ್ಲಿ ಕಲಿತಿದ್ದಾರೆ. ಇಲ್ಲೇ ವಹಿವಾಟು ನಡೆಸುತ್ತಿದ್ದಾರೆ.. ಆದರೆ ನಿಮಗೆ ಇತರ ರಾಜ್ಯವೇ ಉತ್ತಮ ಎನಿಸಿದರೆ, ಯಾವ ರಾಜ್ಯ, ಉತ್ತಮ ಎನಿಸುತ್ತದೆಯೋ ತಮ್ಮ ಮಕ್ಕಳ ಸರ್ಟಿಫಿಕೇಟ್ ಪಡೆದುಕೊಂಡು ತೆರಳಿ" ಎಂದು ವಘಾನಿ ಹೇಳಿದರು.

"ಇಲ್ಲಿ ಪ್ರತಿಯೊಂದೂ ಕೆಟ್ಟದ್ದು ಎಂಬ ಮನೋಭಾವನೆ ಹೊಂದಿರುವವರು, ಒಂದು ಕ್ಷಣವೂ ಇಲ್ಲಿ ಕಾಯುತ್ತಾ ಕೂರುವ ಅಗತ್ಯವಿಲ್ಲವೆಂದು ಹೇಳಲು ಬಯಸುತ್ತೇನೆ" ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News