×
Ad

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ ಆರಂಭ: ಸಚಿವ ಎಸ್.ಟಿ.ಸೋಮಶೇಖರ್

Update: 2022-04-08 14:28 IST

ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣೆ ಪ್ರಚಾರ ಆರಂಭಿಸಲಾಗಿದ್ದು ಹಲವರನ್ನು ಭೇಟಿ ಮಾಡಲಾಗುತ್ತಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವರು, ಏಪ್ರಿಲ್ 11 ರಿಂದ 14ರವರೆಗೆ ಮೈಸೂರು ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಮತ ಯಾಚನೆ ಮಾಡಲಾಗುತ್ತದೆ. ಅಭ್ಯರ್ಥಿ ರವಿಶಂಕರ್ ಗೆ ಬೆಂಬಲ ನೀಡುವಂತೆ ಮಾಜಿ ಕುಲಪತಿ ರಂಗಪ್ಪ ಅವರಿಗೂ ಮನವಿ ಮಾಡಲಾಗಿದೆ ಎಂದು ಹೇಳಿದರು.

ಜಗದೀಶ್ ಶೆಟ್ಟರ್ ಅವರು ಅಮಿತ್ ಶಾ ಅವರ ಭೇಟಿ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಜಗದೀಶ್ ಶೆಟ್ಟರ್ ಅವರು ಇದೇ ಮೊದಲು ದೆಹಲಿಗೆ ಹೋಗಿಲ್ಲ.  ಈ ಹಿಂದೆ ಅನೇಕ ಬಾರಿ ಹೋಗಿದ್ದಾರೆ. ಮುಖ್ಯಮಂತ್ರಿಗಳು ನಾನಾ ಯೋಜನೆಗಳ ಸಂಬಂಧ ವಿವಿಧ ಇಲಾಖೆಗಳ ಸಚಿವರನ್ನು ಭೇಟಿ ಮಾಡಿದ್ದಾರೆ ಎಂದರು.

ರೈತರಿಗೆ 1% ಉಳಿತಾಯ ಆಗುತ್ತದೆ ಎಂಬ ಆಲೋಚನೆಯಿಂದ ಡಿಸಿಸಿ ಬ್ಯಾಂಕ್ ಗಳನ್ನು ಅಪೆಕ್ಸ್ ಬ್ಯಾಂಕ್ ಗೆ ವಿಲೀನ ಮಾಡುವ ಚಿಂತನೆ ಮಾಡಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ವಿಲೀನ ಮಾಡಲಾಗಿದೆ. ಅಧಿಕಾರಿಗಳು ಅಲ್ಲಿಗೆ ಪ್ರವಾಸಕ್ಕೆ ತೆರಳಿ ವರದಿ ಸಿದ್ಧಪಡಿಸಲಿದ್ದಾರೆ. ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದ ನಂತರ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಮಾಡುವ ವಿಚಾರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಮೈಸೂರಿನ ಅಭಿವೃದ್ಧಿ ಬಗ್ಗೆ ಗಮನಹರಿಸಲಾಗಿದೆ. ಫಿಲ್ಮ್ ಸಿಟಿ ನಿರ್ಮಾಣ, ಏರ್ ಪೋರ್ಟ್, ಕೆಆರ್ ಆಸ್ಪತ್ರೆಗೆ ಹಣ ಬಿಡುಗಡೆಯಾಗಿದೆ ಎಂದರು.

ಮೈಸೂರು ಪಾಲಿಕೆ ಚುನಾವಣೆ ವಿಚಾರ ನಗರಾಭಿವೃದ್ಧಿ ಸಚಿವರಿಗೆ ಬರುತ್ತದೆ, ಬಜೆಟ್ ಆದ ಬಳಿಕ ಮೀಸಲಾತಿ ಪ್ರಕಟವಾಗುವ ಸಾಧ್ಯತೆ ಇದೆ. ಚುನಾವಣೆ ನಡೆಸುವ ಸಂಬಂಧ ಪಾಲಿಕೆ ಸದಸ್ಯರು ಕೋರ್ಟ್ ಮೊರೆಗೆ ಹೋಗುವುದು ಅವರ ಸ್ವತಂತ್ರ ಎಂದರು.

ಮೇಯರ್ ಚುನಾವಣೆಯಲ್ಲಿ ಕಳೆದ ಬಾರಿ ಜೆಡಿಎಸ್ ಸಹಕಾರ ನೀಡಿತ್ತು. ಈ ಬಾರಿ ಬೆಂಬಲ ಕೇಳುವ ಕುರಿತು ಹೈಕಮಾಂಡ್ ಸೂಚನೆಯಂತೆ ಕ್ರಮಕೈಗೊಳ್ಳಲಾಗುವುದು. ಉದ್ದೇಶಪೂರ್ವಕವಾಗಿ ಮೇಯರ್ ಚುನಾವಣೆ ಮುಂದೂಡಿಕೆ ಮಾಡಲಾಗುತ್ತಿದೆ ಎಂಬುದು ಸುಳ್ಳು ಎಂದು ಹೇಳಿದರು.

ಮಹಿಳಾ ಮೇಯರ್ ಮೇಲೆ ಕಾಂಗ್ರೆಸ್, ಜೆಡಿಎಸ್ ಗೆ ಏಕೆ ಕೋಪ. ಅವಧಿ ಮುಗಿದಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಮೈಸೂರು ಅಭಿವೃದ್ಧಿ ಬಗ್ಗೆ ಅವರದ್ದೇ ಆದ ಕನಸುಗಳಿವೆ. ಹೀಗಾಗಿ ಅವರು ಪಾಲಿಕೆ ಬಜೆಟ್ ಮಂಡಿಸಲು ಉತ್ಸುಕರಾಗಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News