×
Ad

ಮಂಗಳೂರು: ವೆನ್ಲಾಕ್ ಆಸ್ಪತ್ರೆ ಮುಂಭಾಗ ಹೊತ್ತಿ ಉರಿದ ಬಸ್

Update: 2022-04-08 14:54 IST

ಮಂಗಳೂರು: ನಗರದ ಹಂಪನಕಟ್ಟೆ ಸಿಗ್ನಲ್ ಸಮೀಪ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಹಾಗೂ 45 ನಂಬರಿನ ಸಿಟಿ ಬಸ್‌ಗೆ ಬೆಂಕಿ ಹತ್ತಿಕೊಂಡು ಉರಿದು ಕರಕಲಾಗಿದೆ.

ಅಗ್ನಿಶಾಮಕ ದಳದ ತಂಡ ಸ್ಥಳದಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಯುವಕನಿಗೆ ಸ್ವಲ್ಪ ಗಾಯವಾಗಿದೆ ಎಂದು ತಿಳಿದುಬಂದಿದೆ.

ಹಂಪನಕಟ್ಟೆ ಸಿಗ್ನಲ್ ಬಳಿ (ವೆನ್ಲಾಕ್ ಆಸ್ಪತ್ರೆ) ಸಾಗುತ್ತಿದ್ದ ಅಶೆಲ್ ಹೆಸರಿನ ಬಸ್ಸಿಗೆ ಬೈಕೊಂದು ಢಿಕ್ಕಿ ಹೊಡೆದು ಬೆಂಕಿ ಹೊತ್ತಿ ಉರಿದಿತ್ತು.

ಸ್ಥಳಕ್ಕೆ ಅಗ್ನಿಶಾಮಕ ದಳ ವಾಹನದೊಂದಿಗೆ ತೆರಳಿ ಬೆಂಕಿ ನಂದಿಸುವ ಕೆಲಸ ಮಾಡಿದ್ದು, ಬಸ್ಸು ಹಾಗೂ ದ್ವಿಚಕ್ರ ವಾಹನ  ಬಹುತೇಕವಾಗಿ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾತ್ರವಲ್ಲದೆ ಇದೊಂದು ಅಪಘಾತವಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

‘‘ಅಪಘಾತ ಹೇಗಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳೀಯರು ಹೇಳುವ ಪ್ರಕಾರ ಗುರುಪುರ ಕೈಕಂಬದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಬಸ್ಸು ಸಿಗ್ನಲ್ ದಾಟಿ ಮುಂದೆ ಚಲಿಸುತ್ತಿದ್ದ ವೇಳೆ ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ಘಟನೆ ನಡೆದಿದೆ ಎನ್ನಲಾಗಿದೆ. ಮಧ್ಯಾಹ್ನ 1.45 ರಿಂದ 2ಗಂಟೆಯ ಸುಮಾರಿಗೆ ನಡೆದಿದೆ.

ದ್ವಿಚಕ್ರ ವಾಹನದಲ್ಲಿದ್ದ ಬಳ್ಳಾಲ್‌ ಬಾಗ್ ನಿವಾಸಿ 26 ವರ್ಷದ ಯುವಕ ವೆಲೆನ್ಸಿಯಾದಲ್ಲಿ ಸಿಎ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಾಲಿಗೆ ಗಾಯವಾಗಿದ್ದು, ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸಿಸಿಟಿವಿಯನ್ನು ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದು.  ದ್ವಿಚಕ್ರ ವಾಹನದಲ್ಲಿ ಇಬ್ಬರು ಇದ್ದರು ಎಂದು ಪ್ರತ್ಯಕ್ಷದರ್ಶಿಗಳಲ್ಲಿ ಕೆಲವರು ಹೇಳುತ್ತಿದ್ದು, ಮತ್ತೆ ಕೆಲವರು ಒಬ್ಬನೇ ಇದ್ದ ಎಂದು ಹೇಳುತ್ತಿದ್ದಾರೆ. ಅದೆಲ್ಲವನ್ನೂ ಪರಿಶೀಲಿಸಬೇಕಾಗಿದೆ. ಬಸ್ಸಿನಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದು, ಬೆಂಕಿ ಹತ್ತಿಕೊಂಡ ತಕ್ಷಣ ಚಾಲಕ, ನಿರ್ವಾಹಕ ಸೇರಿದಂತೆ ಎಲ್ಲರೂ ಬಸ್ಸಿನಿಂದ ಇಳಿದಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ.

ಅಪಘಾತವಾಗಿ ಬೈಕ್ ಬಸ್ಸಿನ ಎದುರು ಭಾಗಕ್ಕೆ ಸಿಲುಕಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News