×
Ad

ಎಂಆರ್‌ಪಿಎಲ್ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಮತ್ತೆ ವಂಚನೆ: ಆರೋಪ

Update: 2022-04-08 21:08 IST
ಫೈಲ್‌ ಫೋಟೊ 

ಮಂಗಳೂರು : ಎಂಆರ್‌ಪಿಎಲ್‌ನಲ್ಲಿ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಮತ್ತೆ ಅನ್ಯಾಯವಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

2021 ಎಪ್ರಿಲ್ ನಲ್ಲಿ ನಡೆದ 233 ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರನ್ನು ಪೂರ್ತಿ ಹೊರಗಿಟ್ಟು ಉತ್ತರ ಭಾರತೀಯರಿಗೆ ಆದ್ಯತೆ ನೀಡಿದ್ದ ಬಗ್ಗೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಆಗ ದಕ್ಷಿಣ ಕನ್ನಡಕ್ಕೆ ಎರಡು, ಕರ್ನಾಟಕಕ್ಕೆ 11 ಹುದ್ದೆಗಳಷ್ಟೆ ದೊರಕಿತ್ತು. ಆಗ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ತಾಲೂಕಿನ ಬಿಜೆಪಿ ಶಾಸಕರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಲಾಗಿದೆ. ಸ್ಥಳೀಯರಿಗೆ ಆದ್ಯತೆ ನೀಡಿ ಹೊಸದಾಗಿ ನೇಮಕಾತಿ ನಡೆಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಆದರೆ ಅದು ಹೇಳಿಕೆಯಾಗಿ ಮಾತ್ರ ಉಳಿದಿದ್ದು, ಇದೀಗ ಮತ್ತೆ ಅನ್ಯಾಯ ಮಾಡಲಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಅಂದು ನೇಮಕಾತಿ ಆದೇಶ ಪಡೆದಿದ್ದ ಉತ್ತರ ಭಾರತೀಯರಲ್ಲಿ 38 ಅಭ್ಯರ್ಥಿಗಳು ವಿವಿಧ ಕಾರಣಗಳಿಂದ ಎಂಆರ್‌ಪಿಎಲ್ ಉದ್ಯೋಗ ನೇಮಕಾತಿ ಪತ್ರವನ್ನು ಸ್ವೀಕರಿಸಲಿಲ್ಲ. ಇನ್ನು 20 ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆ ಪೂರ್ತಿಗೊಳಿಸಿ ಕಂಪೆನಿಯ ಒಳಗಡೆ ಸೇರಿಕೊಂಡರೂ ಇನ್ನಷ್ಟು ಉತ್ತಮ ಉದ್ಯೋಗ ಬೇರೆಕಡೆ ದೊರಕಿದ ಹಿನ್ನಲೆಯಲ್ಲಿ ಎಂಆರ್‌ಪಿಎಲ್‌ಗೆ ರಾಜಿನಾಮೆ ಸಲ್ಲಿಸಿದ್ದಾರೆ.

ಇದರಿಂದಾಗಿ ಈಗ ನೇಮಕಾತಿ ನಡೆದಿರುವ 233 ಹುದ್ದೆಗಳಲ್ಲಿ 58 ಹುದ್ದೆಗಳು ಖಾಲಿ ಬಿದ್ದಿವೆ. ಕಳೆದ ಬಾರಿ ಕೇವಲ ಹೇಳಿಕೆ ನೀಡಿ ಸುಮ್ಮನಾಗಿದ್ದ ಸಂಸದರು, ಶಾಸಕರು ಈ ಬಾರಿಯೂ ಅದನ್ನು ಸ್ಥಳೀಯರಿಗೆ ಕೊಡಿಸುವ ಬಗ್ಗೆ ಆಸಕ್ತಿ ಹೊಂದಿಲ್ಲ. ಈ ನಡುವೆ ಕಂಪನಿ ಈ  58 ಹುದ್ದೆಗಳನ್ನೂ ಹೊರ ರಾಜ್ಯಗಳ ಪಾಲಾಗಿಸಲು ಸಿದ್ಧತೆ ನಡೆಸಿದೆ.  ಅದರ ಪ್ರಕಾರ ಅಂದು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಸಾವಿರಾರು ಅಭ್ಯರ್ಥಿಗಳ ಪಟ್ಟಿಯನ್ನೇ ಕಂಪೆನಿ ಶಾರ್ಟ್ ಲಿಸ್ಟ್ ಮಾಡಿಕೊಂಡಿದೆ. ನೇಮಕಾತಿ ಪರೀಕ್ಷೆಯಲ್ಲಿ 233ರ ನಂತರದ ರ‍್ಯಾಂಕ್ ಪಡೆದ 58 ಜನರನ್ನೇ ಈಗ ಖಾಲಿ ಬಿದ್ದಿರುವ ಹುದ್ದೆಗಳಿಗೆ ಭರ್ತಿ ಮಾಡಲು ಮುಂದಾಗಿದೆ. ಇದರಿಂದ ತುಳುನಾಡಿನ, ಕರುನಾಡಿನ ನಿರುದ್ಯೋಗಿ ಯುವಜನರಿಗೆ ಅನ್ಯಾಯವಾಗುತ್ತಿದೆ.

ʼʼಹಿಜಾಬ್, ಹಲಾಲ್, ಜಟ್ಕಾ, ಭಿನ್ನ ಧರ್ಮದ ವ್ಯಾಪಾರಿಗಳಿಗೆ ಬಹಿಷ್ಕಾರ ಎಂಬ ಆಳುವವರೇ ಹುಟ್ಟುಹಾಕಿರುವ ವಿವಾದದ ನಡುವೆ ಎಂಆರ್‌ಪಿಎಲ್ ಸಹಿತ ಉದ್ಯಮಗಳಲ್ಲಿ ನಮ್ಮ ಉದ್ಯೋಗವಕಾಶಗಳು ಕಂಡವರ ಪಾಲಾಗುತ್ತಿರುವ  ಬಗ್ಗೆ ಯುವಕರು ಎಚ್ಚೆತ್ತುಕೊಳ್ಳಬೇಕಿದೆ. ಖಾಲಿ ಬಿದ್ದಿರುವ 58 ಹುದ್ದೆಗಳಿಗೆ ಸ್ಥಳೀಯ  ಯುವಜನರನ್ನೇ ಆಯ್ಕೆ ಮಾಡಲು ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಆಗ್ರಹಿಸಬೇಕು. ಈ ಬಗ್ಗೆ ಸಂಸದರು, ಶಾಸಕರನ್ನು ಪ್ರಶ್ನಿಸಬೇಕುʼʼ ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News