ವಕ್ಫ್ ಆಸ್ತಿಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆ, ಕಾಲೇಜುಗಳ ಸ್ಥಾಪನೆ: ಮೌಲಾನ ಶಾಫಿ ಸಅದಿ
ಬೆಂಗಳೂರು : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಲಭ್ಯವಿರುವ ವಕ್ಫ್ ನ ಖಾಲಿ ಜಾಗಗಳಲ್ಲಿ ಸ್ಥಳೀಯ ವಕ್ಫ್ ಸಂಸ್ಥೆಗಳ ಮೂಲಕ ಹೆಣ್ಣು ಮಕ್ಕಳಿಗಾಗಿ ಶಾಲೆ ಹಾಗೂ ಕಾಲೇಜುಗಳ ಸ್ಥಾಪನೆಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ. ಮುಹಮ್ಮದ್ ಶಾಫಿ ಸಅದಿ ತಿಳಿಸಿದರು.
ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ನ ಕಚೇರಿಯಲ್ಲಿ ಎರಡು ದಿನಗಳ ಕಾಲ ನಡೆದ ಸದಸ್ಯರ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಬಗ್ಗೆ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಈಗಾಗಲೆ ಮದ್ರಸಾಗಳನ್ನು ಹೊಂದಿರುವ ವಕ್ಫ್ ನ ಸಂಸ್ಥೆಗಳಲ್ಲಿ ಅವಕಾಶವಿದ್ದರೆ ಅಲ್ಲಿಯೂ ಹೆಣ್ಣು ಮಕ್ಕಳಿಗಾಗಿ ಶಾಲೆ ಹಾಗೂ ಕಾಲೇಜುಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ. ರಾಜ್ಯದಲ್ಲಿ ಹಿಜಾಬ್ ವಿಚಾರದಿಂದಾಗಿ ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಯಾವ ರೀತಿಯ ಪರಿಸ್ಥಿತಿಯನ್ನು ಎದುರಿಸಿದರು ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿರುವ ವಕ್ಫ್ ಆಸ್ತಿಗಳಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ನಿಟ್ಟಿನಲ್ಲಿ ಸಮುದಾಯದ ಗಣ್ಯರ ಜೊತೆಯೂ ಸಭೆಯನ್ನು ನಡೆಸಲಾಗುವುದು ಎಂದು ಶಾಫಿ ಸಅದಿ ತಿಳಿಸಿದರು.
ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು ಅವರಿಗೆ ನೈತಿಕವಾಗಿ ಬೆಂಬಲ ನೀಡಲು ವಕ್ಫ್ ಬೋರ್ಡ್ ಸದಸ್ಯರಾದ ಸಂಸದ ಸೈಯದ್ ನಾಸೀರ್ ಹುಸೇನ್, ಅಬ್ದುಲ್ ರಿಯಾಝ್ ಖಾನ್ ದೇಶದ ಹಿರಿಯ ವಕೀಲರೊಂದಿಗೆ ಸಭೆಯನ್ನು ನಡೆಸಿದ್ದಾರೆ. ಇದು ಕಾನೂನು ಹೋರಾಟಕ್ಕೆ ನೆರವು ನೀಡಲಿದೆ ಎಂದು ಅವರು ಹೇಳಿದರು.
ಅವಧಿ ಮುಕ್ತಾಯವಾಗಿರುವ ವಕ್ಫ್ ಸಂಸ್ಥೆಗಳ ಆಡಳಿತ ಸಮಿತಿಗಳನ್ನು ರಮಝಾನ್ ತಿಂಗಳ ಬಳಿಕ ಪುನರ್ ರಚಿಸಲಾಗುವುದು. ಇಮಾಮ್ ಹಾಗೂ ಮುಅದ್ದೀನ್‌ಗಳಿಗೆ ಸರಕಾರದಿಂದ ನೀಡಲಾಗುವ ಗೌರವ ಧನವನ್ನು ಆನ್‌ಲೈನ್ ಮೂಲಕ ಪಾವತಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಅಲ್ಲದೆ, ವಕ್ಫ್ ಬೋರ್ಡ್ ನಲ್ಲಿ ನೋಂದಾಯಿತ ಮಸೀದಿಗಳಲ್ಲಿ ಇಮಾಮ್ ಹಾಗೂ ಮುಅದ್ದೀನ್‌ಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವವರಿಗೆ ವಕ್ಫ್ ಬೋರ್ಡ್ ವತಿಯಿಂದ ನೀಡುತ್ತಿರುವ ಪಿಂಚಣಿ ಸೌಲಭ್ಯ ಹೆಚ್ಚಿಸಲು ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಶಾಫಿ ಸಅದಿ ಹೇಳಿದರು.
ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ಬಗ್ಗೆಯೂ ವಕ್ಫ್ ಬೋರ್ಡ್ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಅಲ್ಲದೆ, ಈ ಸಂಬಂಧ ದಿಲ್ಲಿಯಲ್ಲಿ ವಕೀಲರ ತಂಡದ ಜೊತೆಯೂ ಸಭೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಕೆಲವು ಮತೀಯ ಸಂಘಟನೆಗಳು ಹಿಂದೂ ಮುಸ್ಲಿಮರೆಡೆಯಲ್ಲಿ ಸಾಮರಸ್ಯ ಕದಡಿಸುತ್ತಿರುವ ಸದ್ರಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಸಮಾಜದಲ್ಲಿ ಶಾಂತಿ ಸೌಹಾರ್ದತೆಯ ಸಂದೇಶ ಸಾರುವ "ಇಫ್ತಾರ್ ಸಮಾಗಮ"ವನ್ನು ನಡೆಸಲು ರಾಜ್ಯದ ಎಲ್ಲಾ ವಕ್ಫ್ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಶಾಫಿ ಸಅದಿ ತಿಳಿಸಿದರು.