ಪಣಂಬೂರು; ಲಾರಿಯಲ್ಲಿ ಬೆಂಕಿ: ಹೊಯ್ಸಳ ಸಿಬ್ಬಂದಿಯ‌ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

Update: 2022-04-11 16:42 GMT

ಪಣಂಬೂರು : ಲಾರಿಯೊಂದರಲ್ಲಿ‌ ಹಠಾತ್ ಆಗಿ ಬೆಂಕಿ‌ ಕಾಣಿಸಿಕೊಂಡ‌ ಘಟನೆ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಎನ್ಎಂಪಿಟಿ ಗೇಟ್ ಬಳಿ ಸೋಮವಾರ ಸಂಜೆ‌ ನಡೆದಿದೆ.

ಗೋವಾದಿಂದ  ತ್ರಿಶೂರ್ ಕಡೆಗೆ ತೆರಳುತ್ತಿದ್ದ ಕಂಟೈನರ್ ವಾಹನ, ಪಣಂಬೂರು ಎನ್ ಎಂಪಿಟಿ ಮುಖ್ಯ ಗೇಟ್ ಬಳಿ ತಲುಪಿದಾಗ ಅದರ ಕ್ಯಾಬಿನ್ ಹಾಗೂ ಬಾಡಿಯ ಹಿಂಭಾಗದ ಮಧ್ಯ ಭಾಗದಲ್ಲಿ ಬೆಂಕಿ ಕಾಣಿಸಿದೆ.

ತಕ್ಷಣ ಎಚ್ಚೆತ್ತುಕೊಂಡ ಚಾಲಕ ಉತ್ತರ ಪ್ರದೇಶ ಮೂಲದ  ರವೀಂದ್ರ ಕುಮಾರ್ ಚೌದರಿ ಎಂಬಾತ ವಾಹನವನ್ನು ರಸ್ತೆಯ ಬದಿಯಲ್ಲಿ‌ ನಿಲ್ಲಿಸಿ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

ಮಾಹಿತಿ‌‌ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ  ಹೊಯ್ಸಳ ಸಿಬ್ಬಂದಿ ಎನ್ ಎಂ ಪಿ ಟಿ ಯವರ  ಅಗ್ನಿ ಶಾಮಕ ವಾಹನ ತರಿಸಿ ಬೆಂಕಿ ನಂದಿಸುವಲ್ಲಿ‌ ಯಶಸ್ವಿಯಾಗಿದ್ದಾರೆ. ಈ ಸಂದರ್ಭ ಸಾರ್ವಜನಿಕರು ಸಹಕರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಂಜಿನ್ ಶಾರ್ಟ್ ಸೆರ್ಕ್ಯುಟ್ ನಿಂದಾಗಿ ಈ ಘಟನೆ ನಡೆದಿದೆ. ಲಾರಿಯ ಚಾಲಕ‌ ಮತ್ತು‌ ಹೊಯ್ಸಳ ಸಿಬ್ಬಂದಿಯ‌ ಸಮಯ‌ ಪ್ರಜ್ಞೆಯಿಂದ ವಾಹನಕ್ಕೆ ಯಾವುದೇ ನಷ್ಟವುಂಟಾಗಿಲ್ಲ‌ ಮತ್ತು‌ ನಡೆಯಬಹುದಾಗಿದ್ದ‌ ದೊಡ್ಡ ದುರಂತವೊಂದು ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಸಂಬಂಧ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News