ರಾಮ ನವಮಿ ದಿನ ಹೈದರಾಬಾದ್ ವಿವಿ ಕ್ಯಾಂಪಸ್‍ನಲ್ಲಿ ರಾಮಮಂದಿರ ನಿರ್ಮಿಸಿದ್ದ ಎಬಿವಿಪಿ: ವರದಿ

Update: 2022-04-12 08:53 GMT
Photo: facebook

 ಹೊಸದಿಲ್ಲಿ: ರಾಮ ನವಮಿಯ ದಿನವಾದ ಎಪ್ರಿಲ್ 10 ರಂದು ಹೈದರಾಬಾದ್ ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿದ್ದ ಬಂಡೆಗಲ್ಲುಗಳಲ್ಲಿ ರಾಮ ಮತ್ತು ಹನುಮಾನರ ಭಾವಚಿತ್ರಗಳನ್ನು, ಕೇಸರಿ ಧ್ವಜಗಳನ್ನು ಇರಿಸಿ ಪೂಜೆ ಸಲ್ಲಿಸಿ ಒಂದು ರಾಮ ಮಂದಿರವನ್ನು ಎಬಿವಿಪಿ ಸದಸ್ಯರು ನಿರ್ಮಿಸಿದ್ದರೆಂದು ತಿಳಿದು  ಬಂದಿದೆ.

"ಈ ರೀತಿ ಮಾಡಲು ಈ ಹಿಂದೆಯೂ ಹಲವು ಯತ್ನಗಳು ನಡೆದಿದ್ದವು. ಈ ಬಾರಿ ಅವರು ಬಂಡೆಗಲ್ಲನ್ನೇ ಬಳಸಿ ರಾಮ ಮಂದಿರ ನಿರ್ಮಿಸಿದ್ದಾರಲ್ಲದೆ ಹೊಸದಾಗಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ" ಎಂದು ವಿದ್ಯಾರ್ಥಿ ಯೂನಿಯನ್ ಪ್ರಧಾನ ಕಾರ್ಯದರ್ಶಿ ಮತ್ತು ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಸಂಚಾಲಕ ಗೋಪಿ ಸ್ವಾಮಿ ಹೇಳಿದ್ದಾರೆ.

ಕ್ಯಾಂಪಸ್‍ನಲ್ಲಿ ಈ ರೀತಿ ಮಾಡಲು ಅನುಮತಿ ನೀಡಲಾಗಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ವಿವಿಯ ವಕ್ತಾರ ಪ್ರೊ ಕಂಚನ್ ಮಲಿಕ್ ಪ್ರತಿಕ್ರಿಯಿಸಿ, "ರಾಮನವಮಿಯ ಸಂದರ್ಭ ತಾತ್ಕಾಲಿಕ ಏರ್ಪಾಟು ಮಾಡಲಾಗಿತ್ತು. ಅದನ್ನು ತೆಗೆಯುವಂತೆ ಸಂಬಂಧಿತ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ" ಎಂದು ಹೇಳಿದರು.

ರಾಮ ನವಮಿಯ ದಿನ ಕ್ಯಾಂಪಸ್ಸಿನಲ್ಲಿರುವ ಗುರುಭಕ್ಷ್ ಸಿಂಗ್ ಮೈದಾನದಲ್ಲಿ ಎಬಿವಿಪಿ ಪೂಜೆಯೊಂದನ್ನು ಆಯೋಜಿಸಿತ್ತು. ಕೆಲ ವಿದ್ಯಾರ್ಥಿಗಳು ಹಾಗೂ ಉಪಕುಲಪತಿ ಬಿ ಜೆ ರಾವ್‍ಕೂಡ ಪೂಜೆಯಲ್ಲಿ ಭಾಗವಹಿಸಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News