ಅದಾನಿ ಫೌಂಡೇಷನ್ ಸಿಎಸ್‍ಆರ್ ನಿಧಿ: ಉಡುಪಿ ಸ್ಕೌಟ್ಸ್ - ಗೈಡ್ಸ್ ತರಬೇತಿ ಕೇಂದ್ರಕ್ಕೆ ಆವರಣ ಗೋಡೆ

Update: 2022-04-13 11:48 GMT

ಪಡುಬಿದ್ರಿ : ರಾಷ್ಟ್ರದ ಅಭಿವೃದ್ಧಿಗಾಗಿ ಯುವ ಪೀಳಿಗೆಯನ್ನು ಪ್ರೇರೇಪಿಸುವಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಪ್ರಾಮುಖ್ಯತೆಯನ್ನು ಪರಿಗಣಿಸಿದೆ ಎಂದು ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ ಅಭಿಪ್ರಾಯಪಟ್ಟರು.‌

ಅವರು ಇಲ್ಲಿನ ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಒಡೆತನದ ಯುಪಿಸಿಎಲ್ ಸಂಸ್ಥೆಯ ಅಂಗ ಸಂಸ್ಥೆಯಾದ ಅದಾನಿ ಫೌಂಡೇಷನ್‍ನ ವತಿಯಿಂದ ಉಡುಪಿ ಜಿಲ್ಲೆಯ ಪ್ರಗತಿ ನಗರದಲ್ಲಿ ಸ್ಥಾಪಿಸಲಾದ ಡಾ. ವಿ.ಎಸ್. ಆಚಾರ್ಯ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಹಾಗೂ ಶಿಬಿರ ಕೇಂದ್ರಕ್ಕೆ ಸುಮಾರು ರೂ. 79 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಆವರಣಗೋಡೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಉಡುಪಿ ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಬೆಳವಣಿಗೆಯ ಬಗ್ಗೆ ಅವರಿಗಿದ್ದ ದೃಷ್ಟಿಕೋನ ಅಪಾರ. ಉಡುಪಿ ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ತರಬೇತಿ ಕೇಂದ್ರಕ್ಕೆ ಡಾ.ವಿ.ಎಸ್. ಆಚಾರ್ಯರವರ ಹೆಸರಿನಲ್ಲಿ ನಾಮಕರಣ ಮಾಡಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ಆಳ್ವ ಶ್ಲಾಘಿಸಿದರು.‌

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾರವರು ಮಾತನಾಡಿ, ಉಡುಪಿ ಜಿಲ್ಲೆಯ ಸ್ಕೌಟ್ಸ್ ಮತ್ತು  ಗೈಡ್ಸ್ ತರಬೇತಿ ಕೇಂದ್ರವು ಕರ್ನಾಟಕ ಜಿಲ್ಲೆಯ ಅತಿ ದೊಡ್ಡ ಕೇಂದ್ರವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಭಾಗವಹಿಸಬಹುದಾಗಿದೆ. ಈ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆವರಣಗೋಡೆ‌ ಯನ್ನು ಪ್ರಾಯೋಜಿಸಿದ ಅದಾನಿ ಸಮೂಹಕ್ಕೆ ಅಭಿನಂದನೆ ಸಲ್ಲಿದರು.

ಆವರಣಗೋಡೆಯನ್ನು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ ಅವರನ್ನು ಸನ್ಮಾನಿಸಲಾಯಿತು.

ಉಡುಪಿ ಶಾಸಕ ಕೆ. ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮೂಡುಬಿದರೆಯ ಆಳ್ವಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ,  ಉಡುಪಿ ಜಿಲ್ಲಾಧಿಕಾರಿ ಕುರ್ಮಾ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News