ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಗುರುವಾರ ಸಿಎಂ ನಿವಾಸಕ್ಕೆ ಮುತ್ತಿಗೆ: ಸಿದ್ದರಾಮಯ್ಯ

Update: 2022-04-14 06:47 GMT

ಬೆಂಗಳೂರು, ಎ. 13: ‘ರಾಜ್ಯ ಸರಕಾರದ ಭ್ರಷ್ಟಾಚಾರದಿಂದ ಬಿಜೆಪಿ ಕಾರ್ಯಕರ್ತನೇ ಪ್ರಾಣ ಕಳೆದುಕೊಂಡಿದ್ದು, ಈ ಸರಕಾರ ಜನರ ತೆರಿಗೆ ಹಣದ ಲೂಟಿಗೆ ಇಳಿದಿದೆ. ಇದರ ಬಗ್ಗೆ ನಾವು ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಇದರ ಜೊತೆಗೆ ನಾಳೆ (ಎ.14) ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಘೇರಾವ್ ಹಾಕುತ್ತೇವೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಬುಧವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವ ಈಶ್ವರಪ್ಪ ಅವರ ಮೇಲೆ ನಿನ್ನೆ ಎಫ್‍ಐಆರ್ ದಾಖಲಾಗಿದೆ, ಇದರಲ್ಲಿ ಸೆಕ್ಷನ್-34 ಹಾಗೂ ಸೆಕ್ಷನ್-306ರಡಿ ಪ್ರಕರಣ ದಾಖಲಾಗಿದೆ. ಮೃತ ಸಂತೋಷ್ ಪಾಟೀಲ್ ಕುಟುಂಬಸ್ಥರು ಆರೋಪಿಸಿದಂತೆ ಸಂತೋಷ್ 4 ಕೋಟಿ ರೂ. ಮೊತ್ತದ 108 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ, ಸಚಿವ ಈಶ್ವರಪ್ಪ ಮತ್ತವರ ಪಿಎಗಳು ಶೇ.40ರಷ್ಟು ಕಮಿಷನ್‍ಗೆ ಬೇಡಿಕೆ ಇಟ್ಟಿದ್ದಾರೆ. ಆ ಕಮಿಷನ್ ಹಣ ಕೊಡದ ಕಾರಣಕ್ಕೆ ವರ್ಕ್ ಆರ್ಡರ್ ಕೊಟ್ಟಿಲ್ಲ ಮತ್ತು ಬಿಲ್ ಪಾವತಿಸಿಲ್ಲ' ಎಂದು ದೂರಿದರು.

‘ಈಶ್ವರಪ್ಪರನ್ನು ಮೃತ ಸಂತೋಷ್ ಅನೇಕ ಬಾರಿ ಭೇಟಿ ಮಾಡಿದರೂ ಪ್ರಯೋಜನವಾಗದ ಕಾರಣಕ್ಕೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದಾರೆ, ಬಿಜೆಪಿ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿ ಮಾಡಿ ಮನವಿ ಮಾಡಿದ್ದಾರೆ, ಇಷ್ಟೆಲ್ಲಾ ಮಾಡಿದರೂ ಕಮಿಷನ್ ಕೊಡದ ಕಾರಣಕ್ಕೆ ಬಿಲ್ ಪಾವತಿ ಮಾಡಿಲ್ಲ ಎಂದು ದೂರು ನೀಡಿದ್ದಾರೆ. ಇದೊಂದು ಭ್ರಷ್ಟಾಚಾರ ಪ್ರಕರಣವಾಗಿದ್ದರೂ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್-13ರಡಿ ಕೇಸ್ ದಾಖಲಿಸಿಲ್ಲ. ಈಶ್ವರಪ್ಪ ಮತ್ತು ಇತರೆ ಆರೋಪಿಗಳ ಮೇಲೆ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಬೇಕು ಎಂಬುದು ನಮ್ಮ ಒತ್ತಾಯ' ಎಂದು ಹೇಳಿದರು.

‘ಉಡುಪಿಯಲ್ಲಿ ಸಿಎಂ ಭೇಟಿಯಾಗಲು ಸಂತೋಷ್ ತೆರಳಿದ್ದರು, ಅದು ಸಾಧ್ಯವಾಗದಿದ್ದಾಗ ಮನನೊಂದು ವಾಟ್ಸಾಪ್ ಮೆಸೇಜ್‍ನಲ್ಲಿ ತನ್ನ ಸಾವಿಗೆ ಈಶ್ವರಪ್ಪ ಅವರೇ ನೇರ ಹೊಣೆ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಾಟ್ಸಾಪ್ ಮೆಸೇಜನ್ನೆ ಡೆತ್ ನೋಟ್ ಎಂದು ಪರಿಗಣಿಸಬೇಕು. ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು? ಈ ಕೂಡಲೇ ಸಚಿವರ ಬಂಧನವಾಗಬೇಕು. ಇದರ ಜೊತೆಗೆ ಸಂಪುಟದಿಂದ ವಜಾ ಮಾಡಬೇಕು' ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪವೆ ಸಾಕ್ಷಿ. ಈ ಸರಕಾರದ ಎಲ್ಲ ಇಲಾಖೆಗಳಲ್ಲೂ ಶೇ.40ರಷ್ಟು ಕಮಿಷನ್ ನಡೆಯುತ್ತಿದೆ. ಈ ಭ್ರಷ್ಟ ಸರಕಾರದ ವಿರುದ್ಧ ಜನ ಜಾಗೃತಿಯನ್ನು ಮೂಡಿಸಲು ನಾವು ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಇದಕ್ಕಾಗಿ ಕೆಪಿಸಿಸಿ ಡಿ.ಕೆ.ಶಿವಕುಮಾರ್ ಆರೇಳು ತಂಡ ರಚನೆ ಮಾಡುತ್ತಾರೆ. ಐದು ದಿನಗಳ ಅವಧಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡುತ್ತೇವೆ' ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

‘ರಾಜ್ಯ ಸರಕಾರದ ಶೇ.40ರಷ್ಟು ಕಮಿಷನ್ ವಿಚಾರವಾಗಿ ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೇಳಿದ್ದೆ, ನನಗೆ ಪ್ರಸ್ತಾವಿಕ ಮಾತುಗಳನ್ನೇ ಆಡಲು ಅವಕಾಶ ನೀಡದೆ ಸ್ಪೀಕರ್ ನಮ್ಮ ಮನವಿ ತಿರಸ್ಕಾರ ಮಾಡಿದ್ದರು. ಇದರರ್ಥ ಸ್ಪೀಕರ್ ಸರಕಾರದ ನಿರ್ದೇಶನದಂತೆ ವರ್ತಿಸುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 2021ರ ಜೂನ್ 7ಕ್ಕೆ ಪ್ರಧಾನಿಗೆ ಪತ್ರ ಬರೆದು ರಾಜ್ಯ ಸರಕಾರದ ಶೇ.40ರಷ್ಟು ಕಮಿಷನ್ ಬಗ್ಗೆ ಆರೋಪ ಮಾಡಿದ್ದಾರೆ. ತನ್ನನ್ನು ತಾನು ಚೌಕಿದಾರ ಎಂದು ಕರೆದುಕೊಳ್ಳುವ ಪ್ರಧಾನಿ ಮೋದಿ ಈವರೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ' ಎಂದು ಅವರು ದೂರಿದರು.

‘ಬಿಜೆಪಿ ಸರಕಾರದ ಭ್ರಷ್ಟಾಚಾರಕ್ಕೆ ಬಲಿಯಾಗಿರುವ ಗುತ್ತಿಗೆದಾರ ಸಂತೋಷ್ ಕುಟುಂಬಕ್ಕೆ ಸಾಂತ್ವನ ಹೇಳಿ ಅವರ ಪರವಾಗಿ ನಿಲ್ಲಲು ಕಾಂಗ್ರೆಸ್ ಪಕ್ಷದ ನಾಯಕರ ತಂಡ ಬೆಳಗಾವಿಗೆ ತೆರಳಲಿದೆ. ಈ ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಬೇಕು. ಬೇರೆ ಪ್ರಕರಣಗಳಲ್ಲಿ ಹೇಗೆ ಕ್ರಮ ಕೈಗೊಳ್ಳಲಾಗುವುದೋ ಅದೇ ರೀತಿ ಕ್ರಮ ಕೈಗೊಳ್ಳಬೇಕು. ಒತ್ತಡದ ಮೇರೆಗೆ ಪೊಲೀಸ್ ಅಧಿಕಾರಿಗಳು ಈ ಪ್ರಕರಣದಲ್ಲಿ ಆರೋಪಿ ಸಚಿವರನ್ನು ರಕ್ಷಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಮ್ಮ ಹೋರಾಟ ಹಮ್ಮಿಕೊಂಡಿದ್ದೇವೆ. ನಾಳೆ ‘ಭ್ರಷ್ಟಾಚಾರ ಮುಕ್ತ ಕರ್ನಾಟಕ’ ಕಾರ್ಯಕ್ರಮದ ಮೂಲಕ ಬೆಳಗ್ಗೆ 10.30ಕ್ಕೆ ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅಲ್ಲಿಂದ ಸಿಎಂ ನಿವಾಸದ ಬಳಿ ತೆರಳಿ ಘೇರಾವ್ ಹಾಕಲು ನಿರ್ಧರಿಸಿದ್ದೇವೆ. ಎ.15ರಿಂದ ಐದು ದಿನಗಳ ಕಾಲ ರಾಜ್ಯದ ಪ್ರಮುಖ ನಾಯಕರ ನೇತೃತ್ವದಲ್ಲಿ ಏಳೆಂಟು ತಂಡಗಳನ್ನು ರಚಿಸಿ ಎಲ್ಲ ಜಿಲ್ಲೆಗಳಿಗೂ ಹೋಗಿ, ಶೇ.40ರಷ್ಟು ಕಮಿಷನ್ ಸರಕಾರದ ವಿರುದ್ಧ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಜನರೇ ಈ ಭ್ರಷ್ಟ ಸರಕಾರವನ್ನು ಕಿತ್ತೊಗೆಯುವವರೆಗೂ ನಾವು ನಿದ್ದೆ ಮಾಡದೇ ಹೋರಾಟ ಮಾಡುತ್ತೇವೆ'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News