ರಸ್ತೆ ದಾಟುತ್ತಿದ್ದಾತನಿಗೆ ಬೈಕ್ ಢಿಕ್ಕಿ: ಸವಾರ ಸಹಿತ ಇಬ್ಬರಿಗೆ ಗಾಯ
ಸುರತ್ಕಲ್, ಎ.13: ರಸ್ತೆ ದಾಟುತ್ತಿದ್ದಾಗ ಮೋಟಾರ್ ಸೈಕಲ್ ಢಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿರುವ ಕುರಿತು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಗೊಂಡವರನ್ನು ಬಿ.ಎಸ್. ಜಯರಾಮ್ (65) ಎಂದು ತಿಳಿದು ಬಂದಿದ್ದು, ಆರೋಪಿ ಬೈಕ್ ಸಾವಾರನನ್ನು ಮುಹಮ್ಮದ್ ಝೈರಾನ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಯರಾಮ್ ಅವರು ಎಂದಿನಂತೆ ಎ.11ರಂದು ರಾತ್ರಿ 8:15 ಸುಮಾರಿಗೆ ತನ್ನ ಮಿಲ್ಕ್ ಪಾರ್ಲರ್ ನ್ನು ಬಂದ್ ಮಾಡಿ ಮನೆಗೆ ತೆರಳುತ್ತಿದ್ದ ಸಂದರ್ಭ ರಾ.ಹೆ. 66 ರ ಮುಲ್ಕಿ ಟೂರಿಸ್ಟ್ ಕಾರು ನಿಲ್ದಾಣದ ಬಳಿ ತಲುಪುತ್ತಿದ್ದಂತೆಯೇ ಆರೋಪಿಯು ಅಜಾಗರೂಕತೆ ಹಾಗೂ ದುಡುಕುತನದಿಂದ ಬೈಕ್ ಚಲಾಯಿಸಿಕೊಂಡು ಬಂದು ಜಯರಾಮ್ ಅವರಿಗೆ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಘಟನೆಯಿಂದ ಜಯರಾಮ್ ಹಾಗೂ ಆರೋಪಿಗೂ ಗಾಯಗಳಾಗಿದ್ದು ಇಬ್ಬರಿಗೂ ಮುಲ್ಕಿ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಸುರತ್ಕಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಒಳ ರೋಗಿಗಳಾಗಿಚಿ ಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ಸಂಬಂಧ ಜಯರಾಮ್ ಅವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.