ಧರ್ಮ ಸಂಸದ್ ನಲ್ಲಿ ದ್ವೇಷಪೂರಿತ ಭಾಷಣ ಮಾಡಿಲ್ಲ: ಸುಪ್ರೀಂಕೋರ್ಟ್ ಗೆ ತಿಳಿಸಿದ ದಿಲ್ಲಿ ಪೊಲೀಸರು

Update: 2022-04-14 06:17 GMT

ಹೊಸದಿಲ್ಲಿ: ದಿಲ್ಲಿಯಲ್ಲಿ ಡಿಸೆಂಬರ್ 19 ರಂದು ನಡೆದ "ಧರ್ಮ ಸಂಸದ್" ಅಥವಾ ಧಾರ್ಮಿಕ ಸಭೆಯಲ್ಲಿ ಭಾಷಣಕಾರರು ಮುಸ್ಲಿಂ ಸಮುದಾಯದ ವಿರುದ್ಧ ಯಾವುದೇ ದ್ವೇಷಪೂರಿತ ಭಾಷಣ ಮಾಡಿಲ್ಲ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ ಎಂದು ndtv ವರದಿ ಮಾಡಿದೆ.

"ವೀಡಿಯೊ ಹಾಗೂ  ಇತರ ವಸ್ತುಗಳ ಆಳವಾದ ತನಿಖೆ ವೇಳೆ ಯಾವುದೇ ಸಮುದಾಯದ ವಿರುದ್ಧ ಯಾವುದೇ ದ್ವೇಷದ ಭಾಷಣವನ್ನು ನೀಡಲಾಗಿಲ್ಲ ಎಂದು ಕಂಡುಬಂದಿದೆ. ಆದ್ದರಿಂದ ಉದ್ದೇಶಿತ ವೀಡಿಯೊ ತುಣುಕುಗಳ ತನಿಖೆ ಹಾಗೂ  ಮೌಲ್ಯಮಾಪನದ ನಂತರ ಈ ಭಾಷಣವು ನಿರ್ದಿಷ್ಟ ಸಮುದಾಯದ ವಿರುದ್ಧ ಯಾವುದೇ ದ್ವೇಷದ ಅಂಶವನ್ನು ಹೊಂದಿಲ್ಲ ಎಂದು ತೀರ್ಮಾನಿಸಲಾಗಿದೆ’’ ಎಂದು ದಿಲ್ಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ತನಿಖೆಯ ಆಧಾರದ ಮೇಲೆ ಧರ್ಮ ಸಂಸದ್ ಕಾರ್ಯಕ್ರಮಕ್ಕೆ  ಸಂಬಂಧಿಸಿದಂತೆ ದಾಖಲಾಗಿರುವ ಎಲ್ಲಾ ದೂರುಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದು ಅದು ಹೇಳಿದೆ.

ಪೊಲೀಸರನ್ನು ಮೊದಲು ಸಂಪರ್ಕಿಸದೆ ಸುಪ್ರೀಂ ಕೋರ್ಟ್‌ಗೆ ತೆರಳಿದ್ದಕ್ಕಾಗಿ ಅರ್ಜಿದಾರರನ್ನು ದಿಲ್ಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಡಿಸೆಂಬರ್ 17 ಹಾಗೂ  19, 2021 ರ ನಡುವೆ ದಿಲ್ಲಿಯಲ್ಲಿ (ಹಿಂದೂ ಯುವ ವಾಹಿನಿ) ಹಾಗೂ  ಹರಿದ್ವಾರದಲ್ಲಿ (ಯತಿ ನರಸಿಂಹಾನಂದರಿಂದ) ಆಯೋಜಿಸಲಾದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಮುಸ್ಲಿಮರ ಹತ್ಯಾಕಾಂಡದ ಬಹಿರಂಗ ಕರೆಗಳನ್ನು ಒಳಗೊಂಡಿರುವ ದ್ವೇಷದ ಭಾಷಣಗಳನ್ನು ಮಾಡಲಾಗಿದೆ. ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ದಿಲ್ಲಿ  ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಉತ್ತರಾಖಂಡ ಸರಕಾರ, ಕೇಂದ್ರ ಸರಕಾರ ಹಾಗೂ ದಿಲ್ಲಿ  ಪೊಲೀಸರಿಗೆ "ಧರ್ಮ ಸಂಸದ್" ದ್ವೇಷ ಭಾಷಣ ಪ್ರಕರಣದ ಅರ್ಜಿಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಜನವರಿ 12 ರಂದು ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News