ಫಿಲಿಪ್ಪೀನ್ಸ್: ಚಂಡಮಾರುತದ ಆರ್ಭಟ; ಮೃತರ ಸಂಖ್ಯೆ 115ಕ್ಕೆ ಏರಿಕೆ

Update: 2022-04-14 18:25 GMT

ಮನಿಲಾ, ಎ.14: ಉಷ್ಣವಲಯದ ಚಂಡಮಾರುತ ಮೆಗಿಯ ಆರ್ಭಟಕ್ಕೆ ತತ್ತರಿಸಿರುವ ಫಿಲಿಪ್ಪೀನ್ಸ್‌ನಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 115ಕ್ಕೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿರಂತರ ಮಳೆಯಿಂದ ಉಂಟಾದ ಪ್ರವಾಹದಿಂದ ರಕ್ಷಿಸಿಕೊಳ್ಳಲು ಜನತೆ ಪರ್ವತ ಪ್ರದೇಶಕ್ಕೆ ಪಲಾಯನ ಮಾಡಿದ್ದರು. ಆದರೆ ಪರ್ವತ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದಾಗ ಹಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

    ಹಲವು ದಿನಗಳಿಂದ ಸುರಿಯುತ್ತಿರುವ ಮುಸಲಧಾರೆ ಮಳೆಯಿಂದ ಸಂಭವಿಸಿದ ಭೂಕುಸಿತದ ಅವಶೇಷಗಳಡಿ ಇನ್ನಷ್ಟು ಮೃತದೇಹಗಳಿರುವ ಸಾಧ್ಯತೆಯಿದೆ ಎಂದು ರಕ್ಷಣಾ ತಂಡ ಹೇಳಿದೆ. ಕೇಂದ್ರ ಫಿಲಿಪ್ಪೀನ್ಸ್‌ನ ಲೆಯ್ಟ್ ಪ್ರಾಂತದಲ್ಲಿನ ಪರ್ವತ ಪ್ರದೇಶದ ಬೇಬೇ ನಗರದಲ್ಲಿ ಅತ್ಯಧಿಕ ನಾಶನಷ್ಟ ಸಂಭವಿಸಿದ್ದು 86 ಮಂದಿ ಮೃತಪಟ್ಟಿದ್ದು 236 ಮಂದಿ ಗಾಯಗೊಂಡಿದ್ದಾರೆ. ಹಲವರು ನಾಪತ್ತೆಯಾಗಿದ್ದು ಎಂದು ಸ್ಥಳೀಯಾಡಳಿತದ ಹೇಳಿಕೆ ತಿಳಿಸಿದೆ. ಸುಮಾರು 7,600 ದ್ವೀಪಸಮೂಹಗಳ ದೇಶ ಫಿಲಿಪ್ಪೀನ್ಸ್‌ನಲ್ಲಿ ಈ ವರ್ಷ ಬೀಸಿದ ಮೊದಲ ಚಂಡಮಾರುತ ವ್ಯಾಪಕ ನಾಶನಷ್ಟ , ಪ್ರಾಣಹಾನಿ ಸಂಭವಿಸಿದೆ. ಮಂಗಳವಾರ ಕಡಲತೀರದ ಗ್ರಾಮ ಪಿಲರ್‌ನಲ್ಲಿ ಸಂಭವಿಸಿದ ಭೂಕುಸಿತದ ಅವಶೇಷಗಳಡಿ ಇದುವರೆಗೆ 26 ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಇನ್ನೂ 150 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ತುರ್ತು ಕ್ರಿಯಾ ತಂಡ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News