100 ಡಿಗ್ರಿ ಸೆಲ್ಸಿಯಸ್ ತಾಪಮಾನ ತಡೆದುಕೊಳ್ಳಬಲ್ಲ ಕೋವಿಡ್ ಲಸಿಕೆ

Update: 2022-04-16 16:37 GMT

ಹೊಸದಿಲ್ಲಿ,ಎ.16: ತಾಪಮಾನ ನಿರೋಧಕ ಕೋವಿಡ್19 ಲಸಿಕೆಯನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಶೀಥಲೀಕೃತ ಸಂಗ್ರಹಾಗಾರ ವ್ಯವಸ್ಥೆಯ ಅಗತ್ಯವಿಲ್ಲದ ಈ ಲಸಿಕೆಯು ಡೆಲ್ಟಾ ಹಾಗೂ ಒಮಿಕ್ರಾನ್ ಸೇರಿದಂತೆ ಕೊರೋನ ವೈರಸ್ ಪ್ರಭೇದಗಳ ವಿರುದ್ಧ ಬಲಿಷ್ಠವಾದ ಪ್ರತಿಕಾಯಗಳನ್ನು ಸೃಷಿಸಬಲ್ಲದು ಎಂಬುದನ್ನು ಇಲಿಯ ಮೇಲೆ ನಡೆಸಲಾದ ಅಧ್ಯಯನದಿಂದ ವರದಿಯಾಗಿದೆ.

 ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಹಾಗೂ ಜೈವಿಕ ತಂತ್ರಜ್ಞಾನ ಸ್ಟಾರ್ಟ್ ಅಪ್ ಕಂಪೆನಿ ಮೈನ್ ವ್ಯಾಕ್ಸ್ ಜಂಟಿಯಾಗಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

   ಬಹುತೇಕ ಕೋವಿಡ್19 ಲಸಿಕೆಗಳ ಪರಿಣಾಮಕಾರಿತ್ವವು ಉಳಿಯಬೇಕಾದರೆ ಅವುಗಳನ್ನು ಶಿಥಲೀಕೃತ ವ್ಯವಸ್ಥೆಯಲ್ಲಿರಿಸಬೇಕಾಗುತ್ತದೆ. ಆದರೆ ಈ ತಾಪಮಾನ ನಿರೋಧಕ ಸಾಮರ್ಥ್ಯವುಳ್ಳು ಕೋವಿಡ್ 19 ಲಸಿಕೆಯನ್ನು ನಾಲ್ಕು ವಾರಗಳ ಕಾಲ 37 ಡಿಗ್ರಿ ಸೆಲ್ಸಿಯಸ್ ನಲ್ಲಿ ಸಂಗ್ರಹಿಸಿಡಬಹುದಾಗಿದೆ ಹಾಗೂ ಸುಮಾರು 90 ನಿಮಿಷಗಳ ಕಾಲ 100 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ಅದನ್ನು ಇರಿಸಬಹುದಾಗಿದೆ ಎಂದು ಆಸ್ಟ್ರೇಲಿಯದ ಕಾಮನ್ವೆಲ್ತ್ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಸಂಸ್ಥೆ (ಸಿಎಸ್‌ಐಆರ್‌ಓ) ನ ಸಂಶೋಧಕರನ್ನು ಕೂಡಾ ಒಳಗೊಂಡಿರುವ ಅಧ್ಯಯನ ತಂಡವು ತಿಳಿಸಿದೆ.

ಇದಕ್ಕೆ ಹೋಲಿಸಿದರೆ ಆಕ್ಸ್‌ಫರ್ಡ್-ಆಸ್ಟ್ರಾಝೆಂಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು 2-8 ಡಿಗ್ರಿ ಸೆಲ್ಸಿಯಸ್ವರೆಗೂ ಇರಿಸಬಹುದಾಗಿದೆ. ಪ್ರತಿಬಂಧಾತ್ಮಕ ಫೈಝರ್ ಲಸಿಕೆಗೆ -70 ಡಿಗ್ರಿ ಸೆಲ್ಸಿಯಸ್ನ ವಿಶೇಷ ಶಿಥಲೀಕೃತ ವ್ಯವಸ್ಥೆಯ ಅಗತ್ಯವಿದೆ.

   ನೂತನ ಕೋವಿಡ್ 19 ಲಸಿಕೆಯನ್ನು ಪ್ರತಿಷ್ಠಿತ ಜೀವವಿಜ್ಞಾನ ಪತ್ರಿಕೆ ವೈರಸಸ್ ನಲ್ಲಿ ವಿಮರ್ಶಿಸಲಾಗಿದೆ. ಲಸಿಕೆ ನೀಡಲ್ಪಟ್ಟ ಇಲಿಯ ರಕ್ತದ ಮಾದರಿಯ ಮೇಲೆ ನಡೆಸಿದ ಸಂಸೋಧನೆಯ ಮೂಲಕ ಡೆಲ್ಟಾ ಹಾಗೂ ಒಮಿಕ್ರಾನ್ ಸೇರಿದಂತೆ ಪ್ರಮುಖ ಕೊರೋನ ವೈರಸ್ ಪ್ರಭೇದಗಳ ವಿರುದ್ಧ ಈ ಲಸಿಕೆಯ ಪರಿಣಾಮಕಾರಿತ್ವದ ವೌಲ್ಯಮಾಪನ ನಡೆಸಲಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News