×
Ad

ಪುತ್ತೂರು: ಜಾತ್ರಾಗದ್ದೆಯಲ್ಲಿ ಬಿಕ್ಷಾಟನೆ ಮಾಡುತ್ತಿದ್ದ ಮಕ್ಕಳ ರಕ್ಷಣೆ, ಪೋಷಕರಿಗೆ ಎಚ್ಚರಿಕೆ

Update: 2022-04-17 13:04 IST
ಸಾಂದರ್ಭಿಕ ಚಿತ್ರ

ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆಯುತ್ತಿರುವ ಜಾತ್ರೋತ್ಸವದಲ್ಲಿ ಜಾತ್ರಾಗದ್ದೆಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಬಿಕ್ಷಾಟನೆ ನಡೆಸುತ್ತಿರುವ ಮಾಹಿತಿ ಅರಿತು ಬಗ್ಗೆ ಕಾರ್ಯಾಚರಣೆ ನಡೆಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಇತರ ಇಲಾಖೆಯ ಅಧಿಕಾರಿಗಳು ಇಬ್ಬರು ಅಪ್ರಾಪ್ತ ಮಕ್ಕಳನ್ನು ರಕ್ಷಣೆ ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಿದ್ದಾರೆ. ಅಲ್ಲದೆ ಮಕ್ಕಳಿಂದ ಬಿಕ್ಷಾಟನೆ ನಡೆಸದಂತೆ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.

ಅಪ್ರಾಪ್ತ ಮಕ್ಕಳು ಜಾತ್ರಾ ಗದ್ದೆಯಲ್ಲಿ ಬಿಕ್ಷಾಟನೆ ಮಾಡುವ ಬಗ್ಗೆ ಜಿಲ್ಲಾ ಮಕ್ಕಳ ಕಲ್ಯಾಣ ಘಟಕಕ್ಕೆ ದೂರು ಬಂದಿರುವ ಹಿನ್ನಲೆಯಲ್ಲಿ ಘಟಕದ ಸಿಬ್ಬಂದಿಗಳು, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗಳ ಸಹಕಾರದಲ್ಲಿ ಜಾತ್ರಾಗದ್ದೆಯಲ್ಲಿ ಕಾರ್ಯಾಚರಣೆ ನಡೆಸಿದ್ದರು.

ಈ ಸಂದರ್ಭದಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಪತ್ತೆ ಹಚ್ಚಿ ಅವರಿಗೆ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಪುನರ್ವಸತಿ ವ್ಯವಸ್ಥೆ ಕಲ್ಪಿಸಲಾಯಿತು.

ಕಾರ್ಯಾಚರಣೆಯಲ್ಲಿ ಚೈಲ್ಡ್ ಲೈನ್ ಕೇಂದ್ರದ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಾದ ಕುಮಾರ್ ಶೆಟ್ಟಿಗಾರ್ ಮತ್ತು ವಝೀರ್, ಆಪ್ತ ಸಮಾಲೋಚಕಿ ಪ್ರತಿಮಾ, ಅಂಗನವಾಡಿ ಮೇಲ್ವಿಚಾರಕರಾದ ಜಲಜಾಕ್ಷಿ ಮತ್ತು ಸುಜಾತ, ಮಹಿಳಾ ಠಾಣೆಯ ಸಿಬ್ಬಂದಿ ದಿನೇಶ್, ಶಿಕ್ಷಣ ಇಲಾಖೆಯ ಇಸಿಒ ಹರಿಪ್ರಸಾದ್, ಸಾಮಾಜಿಕ ಕಾರ್ಯಕರ್ತ ಲೋಕೇಶ್ ಅಲುಂಬುಡ ಮತ್ತು ಸ್ಟಾನ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News