ಕರಾವಳಿಯಾದ್ಯಂತ ಈಸ್ಟರ್ ಆಚರಣೆ

Update: 2022-04-17 16:17 GMT

ಮಂಗಳೂರು : ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬವಾದ ಈಸ್ಟರ್‌ನ್ನು ಕರಾವಳಿಯಾದ್ಯಂತ  ಚರ್ಚ್‌ಗಳಲ್ಲಿ ರವಿವಾರ  ಅತ್ಯಂತ ಶ್ರದ್ಧೆ  ಮತ್ತು ಭಕ್ತಿಯಿಂದ ಆಚರಿಸಿದರು.

ಶನಿವಾರ ರಾತ್ರಿ ಮತ್ತು  ರವಿವಾರ ಬೆಳಗ್ಗೆ  ಈಸ್ಟರ್ ಹಬ್ಬದ ಬಲಿಪೂಜೆಗಳು ನಡೆಯಿತು. ಮಂಗಳೂರು ಬಿಷಪ್ ಅತಿ ವಂ.ಡಾ. ಪೀಟರ್ ಪಾವ್ಲ್  ಸಲ್ದಾನ ಬಂಟ್ವಾಳ ತಾಲೂಕಿನ  ಶಂಭೂರು ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ರವಿವಾರ ಈಸ್ಟರ್ ಹಬ್ಬದ ಸಂಭ್ರಮದ ಬಲಿ ಪೂಜೆಯನ್ನು ನಡೆಸಿದರು. ಶಂಭೂರು ಚರ್ಚ್‌ನ ಧರ್ಮಗುರು ಫಾ. ಸಂತೋಷ್ ಡಿ ಸೋಜಾ, ಚರ್ಚ್ ಉಪಾಧ್ಯಕ್ಷ ಇನಾಸ್ ವೇಗಸ್, ಕಾರ್ಯದರ್ಶಿ ವಿನಿತಾ ಕ್ರಾಸ್ತಾ ಉಪಸ್ಥಿತರಿದ್ದರು.

ಈ ಸಂದರ್ಭ ಇತರ ಚರ್ಚ್‌ಗಳಲ್ಲಿ  ಸ್ಥಳೀಯ ಧರ್ಮಗುರುಗಳ ನೇತೃತ್ವದಲ್ಲಿ  ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ಹೊಸ ಅಗ್ನಿಯ ಆಶೀರ್ವಚನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಈ ಅಗ್ನಿಯಿಂದ ಈಸ್ಟರ್ ಮೊಂಬತ್ತಿ ಯನ್ನು  ಧರ್ಮಾಧ್ಯಕ್ಷರು/ಗುರುಗಳು ಬೆಳಗಿಸಿದ ಬಳಿಕ ಭಾಗವಹಿಸಿದ್ದ ಸಮಸ್ತ ಕ್ರೈಸ್ತರು ಆ ಅಗ್ನಿಯ ಮೂಲಕ ಮೇಣದ ಬತ್ತಿಗಳನ್ನು ಉರಿಸಿ ಪ್ರಾರ್ಥನೆ ಸಲ್ಲಿಸಿದರು. ಬೈಬಲಿನ ಹಳೆಯ ಮತ್ತು ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನದ ಬಳಿಕ ಬಿಷಪರು/ ಧರ್ಮಗುರುಗಳು  ಪ್ರವಚನ ಮತ್ತು ಸಂದೇಶ ನೀಡಿದರು.

ಪವಿತ್ರ ಜಲದ ಆಶೀರ್ವಚನ ಹಾಗೂ ಕ್ರೈಸ್ತ ವಿಶ್ವಾಸದ ಸತ್ಯದ ಮರು ದೃಢೀಕರಣವೂ ನಡೆಯಿತು. ಕ್ರೈಸ್ತ ಸಂತರನ್ನು  ಸ್ಮರಿಸಿ ಅವರ ಆಶೀರ್ವಾದಗಳನ್ನು ಕೋರಲಾಯಿತು.

ಸಂಭ್ರಮದ ಬಲಿ ಪೂಜೆಯ ಬಳಿಕ ಭಾಗವಹಿಸಿ, ಈಸ್ಟರ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ರವಿವಾರ ಮನೆಗಳಲ್ಲಿ ಈಸ್ಟರ್ ಹಬ್ಬದ ಊಟವನ್ನು ಸವಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News