ಫಿಶ್‌ ಮೀಲ್‌ ಕಾರ್ಖಾನೆ ದುರಂತ | ಶ್ರೀ ಉಲ್ಕಾ ಕಂಪೆನಿಗೆ ಬೀಗ ಜಡಿದ ಪೊಲೀಸರು; ನಾಲ್ವರು ವಶಕ್ಕೆ

Update: 2022-04-18 15:55 GMT
ದುರಂತ ಸಂಭವಿಸಿದ ಶ್ರೀ ಉಲ್ಕಾ ಫಿಶ್‌ ಮೀಲ್‌ ಕಾರ್ಖಾನೆಯ ತ್ಯಾಜ್ಯ ಸಂಗ್ರಹ ತೊಟ್ಟಿ

ಮಂಗಳೂರು, ಎ. 18: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆ ಗ್ರಾಮದ  ಮಂಗಳೂರು ವಿಶೇಷ ಆರ್ಥಿಕ ವಲಯ (ಎಂಎಸ್‌ಇಝೆಡ್‌ನ)ದ ಮೀನು ಸಂಸ್ಕರಣಾ ಘಟಕವೊಂದರಲ್ಲಿ ರವಿವಾರ ಸಂಜೆ ನಡೆದ ದುರಂತದಲ್ಲಿ ಐದು ಮಂದಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಇದಲ್ಲದೆ ಮೂರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೆರ್ಮುದೆಯ ಎಂಎಸ್‌ಇಝೆಡ್‌ನ ಶ್ರೀ ಉಲ್ಕಾ ಎಲ್‌ಎಲ್‌ಪಿ ಕಾರ್ಖಾನೆಯಲ್ಲಿ ಘಟನೆ ನಡೆದಿದೆ. ಮೃತ ಕಾರ್ಮಿಕರೆಲ್ಲರೂ ಪಶ್ಚಿಮ ಬಂಗಾಲ ಮೂಲದ ಮುಹ್ಮದ್ ಸಮೀಉಲ್ಲಾ ಉಸ್ಲಾಂ, ಉಮ್ಮರ್ ಫಾರೂಕ್, ನಿಜಾಮುದ್ದೀನ್ ಆಲಿಸ್, ಮಿರಾಜುಲ್ ಇಸ್ಲಾಂ ಶರಾಫತ್ ಅಲಿ ಎಂದು ಗುರುತಿಸಲಾಗಿದೆ. ಹಸನ್ ಅಲಿ, ಮುಹಮ್ಮದ್ ಕರೀಬುಲ್ಲಾ, ಹಫೀಜುಲ್ಲಾ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ಸಂಜೆಯ ವೇಳೆ ಮೀನು ಸಂಸ್ಕರಣಾ ಘಟಕದ ತ್ಯಾಜ್ಯ ಸಂಗ್ರಹ ತೊಟ್ಟಿಯನ್ನು ಸ್ವಚ್ಛ ಗೊಳಿಸುತ್ತಿದ್ದ ವೇಳೆ ಕಾರ್ಮಿಕನೊಬ್ಬ ಕುಸಿದು ಬಿದ್ದ ಕಾರಣ ಅಲ್ಲೇ ಇದ್ದ ಇತರ ಏಳು ಮಂದಿ ಕಾರ್ಮಿಕರು ಆತನ ರಕ್ಷಣೆಗೆ ಧಾವಿಸಿದ್ದಾರೆ. ದುರಂತದಲ್ಲಿ ಮೂರು ಮಂದಿ ನಿನ್ನೆ ತಡ ರಾತ್ರಿಯೇ ಸಾವನ್ನಪ್ಪಿದ್ದರೆ, ಇಬ್ಬರು ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತೆ ಮೂರು ಮಂದಿ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿರುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಅವರು ಇಂದು ಬೆಳಗ್ಗೆ ಆಸ್ಪತ್ರೆ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿದ್ದ ಅಧಿಕಾರಿಗಳನ್ನು ತರಾಟೆಗೈದು ಕಾರ್ಖಾನೆಗೆ ಬೀಗ ಹಾಕಲು ಅಲ್ಲಿದ್ದ ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಲಿ ಕೆಲಸ ಮಾಡುವವರೆಲ್ಲ ಬಹುತೇಕರು ಯುವಕರಾಗಿದ್ದು, ಇದೊಂದು ಗಂಭೀರ ಪ್ರಕರಣವಾಗಿ ಪರಿಗಣಿಸಲಾಗಿದೆ. ಮುಂಬೈ ಮೂಲದ ರಾಜು ಗೋರಕ್ ಎಂಬವರ ಒಡೆತನದ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಯಾವುದೇ ರೀತಿಯ ರಕ್ಷಣಾತ್ಮ ಉಪಕರಣಗಳನ್ನು ಒದಗಿಸಲಾಗಿಲ್ಲ. ಮೃತ ದೇಹದಲ್ಲಿ ಹಾಗೂ ಮೂಗು ಬಾಯಿಯಲ್ಲೂ ಮೀನಿನ ತ್ಯಾಜ್ಯ ಕಂಡು ಬಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ದುರಂತದ ಬಗ್ಗೆ  ಐಪಿಸಿ ಕಲಂ 337, 338, 304 ಹಾಗೂ 34ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಕಂಪನಿಯ ಪ್ರೊಡಕ್ಷನ್ ಮ್ಯಾನೇಜರ್ ರೂಬಿ ಜೋಸೆಫ್, ಏರಿಯಾ ಮ್ಯಾನೇಜರ್ ಕುಬೇರ್ ಗಾಡೆ, ಸೂಪರ್‌ವೈಸರ್ ಮುಹಮ್ಮದ್ ಅನ್ವರ್ ಹಾಗೂ ಕಂಪನಿಯ ಕಾರ್ಮಿಕರ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ಸ್ಥಳೀಯ ಉಳ್ಳಾಲ ಮೂಲದ ಫಾರೂಕ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಶ್ರೀ ಉಲ್ಕಾ ಎಲ್‌ಎಲ್‌ಪಿ ಕಾರ್ಖಾನೆಯು ಮುಂಬೈ ಮೂಲದ ಮೀನು ಸಂಸ್ಕರಣಾ ಕಾರ್ಖಾನೆಯಾಗಿದ್ದು, ಇಲ್ಲಿಂದ ಮೀನು ಸಂಸ್ಕರಣೆಗೊಂಡು ಏಷ್ಯಾದ ವಿವಿಧ ರಾಷ್ಟ್ರಗಳು, ರಷ್ಯಾ ಸೇರಿದಂತೆ ವಿದೇಶ ಹಾಗೂ ದೇಶದ ಇತರ ರಾಜ್ಯಗಳಿಗೆ ರಪ್ತು ಮಾಡಲಾಗುತ್ತದೆ. ಕಳೆದ ಮೂರು ವರ್ಷಗಳಿಂದ ಈ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿದೆ. ನೇರವಾಗಿ ಮತ್ತು ಪರೋಕ್ಷವಾಗಿ ಸುಮಾರು 100 ಮಂದಿ ಕಾರ್ಮಿಕರು ಕಾರ್ಖಾನೆಯಲ್ಲಿ ದುಡಿಯುತ್ತಿದ್ದಾರೆ ಎಂದು ಕಾರ್ಖಾನೆಯ ಆಡಳಿತ ವ್ಯವಸ್ಥಾಪಕಿ ಪ್ರಿಯಾ ಎಂಬವರು ಮಾಹಿತಿ ನೀಡಿದ್ದಾರೆ.

ಕಾರ್ಖಾನೆಯಲ್ಲಿ ಅಪ್ರಾಪ್ತ ಕಾರ್ಮಿಕರು?

ಕಾರ್ಖಾನೆಯಲ್ಲಿ ಹೊರ ರಾಜ್ಯಗಳ 18 ವರ್ಷಕ್ಕಿಂತ ಕೆಳಗಿನ ಯುವಕರನ್ನೂ ದುಡಿಸಲಾಗುತ್ತಿತ್ತು. ಮೃತರಲ್ಲಿ ಒಬ್ಬಾತ 17 ವರ್ಷ ವಯಸ್ಸಿನವ ಎಂಬ ಬಗ್ಗೆಯೂ ಹೇಳಲಾಗುತ್ತಿದ್ದು, ಈ ಬಗ್ಗೆ ಇನ್ನಷ್ಟೇ ಜಿಲ್ಲಾಡಳಿತದಿಂದ ದೃಢಪಡಬೇಕಾಗಿದೆ.

ಮಧ್ಯಾಹ್ನದವರೆಗೂ ಫ್ಯಾಕ್ಟರಿಯವರು ಯಾರೂ ಸಂಪರ್ಕಿಸಿಲ್ಲ!

‘‘ನಿನ್ನೆ ಸಂಜೆಯ ವೇಳೆಗೆ ನನಗೆ ಮಾಹಿತಿ ದೊರಕಿತು. ನಾನು ಗೋವಾದಿಂದ ನೇರವಾಗಿ ಆಸ್ಪತ್ರೆಗೆ ಬಂದಿದ್ದೇನೆ. ನನ್ನ ಅಣ್ಣ ಮದುವೆಯಾಗಿ ಪತ್ನಿ ಹಾಗೂ ಎರಡು ವರ್ಷದ ಮಗುವನ್ನು ಹೊಂದಿದ್ದಾನೆ. ಕಳೆದ ಸುಮಾರು ಎಂಟು ತಿಂಗಳಿನಿಂದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಇದೀಗ ಆತನ ಸಾವು ಮನೆಯವರನ್ನೆಲ್ಲಾ ಕಂಗಾಲಾಗಿಸಿದೆ. ಕುಟುಂಬದವರು ಬರುವುದನ್ನು ಎದುರು ನೋಡುತ್ತಿದ್ದೇವೆ. ಫ್ಯಾಕ್ಟರಿಯವರಾಗಲಿ, ಬೇರೆ ಯಾರೂ ನಮ್ಮನ್ನು ಈವರೆಗೂ ಸಂಪರ್ಕಿಸಿಲ್ಲ’’ ಎಂದು ದುರಂತದಲ್ಲಿ ಸಾವನ್ನಪ್ಪಿದ ಕಾರ್ಮಿಕರೊಬ್ಬರ ಸಹೋದರ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.

ಬೃಹತ್ ಟ್ಯಾಂಕ್‌ಗಳು- ಸುರಕ್ಷಾ ಕ್ರಮಗಳಿಲ್ಲ!

ಕಾರ್ಖಾನೆಯ ಹೊರಭಾಗದ ಒಂದು ಪಾರ್ಶ್ವದಲ್ಲಿ ಬೃಹದಾಕಾರದ ನಾಲ್ಕು ಮೀನಿನತ್ಯಾಜ್ಯ ಸಂಗ್ರಹದ ತೊಟ್ಟಿಗಳಿವೆ (ಟ್ಯಾಂಕ್). ಈ ಟ್ಯಾಂಕ್‌ಗಳಿಗೆ ಏರಲು ಮಹಡಿ ಮೆಟ್ಟಿಲು ಹತ್ತಿ ಹೋಗಬೇಕಾಗುತ್ತದೆ. ಒಂದು ಟ್ಯಾಂಕ್‌ನಲ್ಲಿ ಇಳಿಯಲು ಎತ್ತರದ ಏಣಿಯನ್ನು ಇಟ್ಟಿರುವುದು ಕಂಡು ಬಂದಿದ್ದು, ಆ ಟ್ಯಾಂಕ್‌ನಲ್ಲೇ ದುರಂತ ಸಂಭವಿಸಿತ್ತು. ಸುಮಾರು 20 ಅಡಿ ಆಳದ ಟ್ಯಾಂಕ್ ಇದಾಗಿದ್ದು, ಮೀನು ಸಂಸ್ಕರಣಾ ಘಟಕವಾದ್ದರಿಂದ ಮೀನಿನ ಹೊರಭಾಗದ ತ್ಯಾಜ್ಯ ಟ್ಯಾಂಕ್ ಸುತ್ತ ಹಾಗೂ ಟ್ಯಾಂಕ್‌ನೊಳಗೆ ಕಂಡು ಬಂದರೆ, ಕೊಳೆತ ವಾಸನೆ ಫ್ಯಾಕ್ಟರಿ ಸುತ್ತಮುತ್ತಲೆಲ್ಲಾ ಆವರಿಸಿದೆ. ದುರ್ವಾಸನೆ ಹಾಗೂ ತ್ಯಾಜ್ಯದಿಂದ ಉಂಟಾಗುವ ರಾಸಾಯನಿಕದ ಹಿನ್ನೆಲೆಯಲ್ಲಿ ಇಲ್ಲಿ ಟ್ಯಾಂಕ್ ಸ್ವಚ್ಛತೆ ಸಂದರ್ಭ ಆಕ್ಸಿಜನ್ ಬಳಕೆ ಅಥವಾ ಕಾರ್ಮಿಕರ ಸುರಕ್ಷತೆಯ ಬಗ್ಗೆಯೂ ಅಗತ್ಯ ಕ್ರಮಗಳು ಕೈಗೊಂಡಿರುವುದು ಕಂಡು ಬರಲಿಲ್ಲ.

ದುರಂತದ ಬಗ್ಗೆ ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ವರದಿ

ಎಂಎಸ್‌ಇಝೆಡ್‌ನ ಮೀನು ಸಂಸ್ಕರಣಾ ಘಟಕದಲ್ಲಿ ನಡೆದ ದುರಂತದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲಿ ಕೈಗೊಳ್ಳಲಾಗಿರುವ ಸುರಕ್ಷತಾ ಕ್ರಮಗಳು, ದುರಂತದ ಕಾರಣದ ಬಗ್ಗೆ ತನಿಖೆ ನಡೆಸಿ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಇಲಾಖೆ ವತಿಯಿಂದ ಕಾರ್ಖಾನೆಗಳಿಗೆ ಭೇಟಿ ನೀಡಿ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ಸೂಚನೆ ನೀಡುತ್ತಿರುತ್ತೇವೆ ಎಂದು ದ.ಕ. ಜಿಲ್ಲಾ ಫ್ಯಾಕ್ಟರೀಸ್ ಮತ್ತು ಬಾಯ್ಲರ್ ಇಲಾಖೆಯ ಉಪ ನಿರ್ದೇಶಕ ರಾಜೇಶ್ ಮಿಶ್ರಿಕೋಟಿ ತಿಳಿಸಿದ್ದಾರೆ.

►ಬುದ್ಧಿವಂತರ ಜಿಲ್ಲೆಯ ಅನ್ಯ ಜಗತ್ತು ಈ ಎಸ್‌ಇಝೆಡ್?

► ಕಾರ್ಮಿಕರ ರಕ್ಷಣೆ, ಸುರಕ್ಷತೆ ಬಗ್ಗೆ ಸಂಬಂಧಪಟ್ಟ ಇಲಾಖೆ ವೌನ?

ಮಂಗಳೂರು ಸ್ಮಾರ್ಟ್ ಸಿಟಿಯ ಕೂಗಳತೆಯ ದೂರದಲ್ಲಿ, ಬುದ್ದಿವಂತರ ಜಿಲ್ಲೆ ಎಂದೇ ಕರೆಸಿಕೊಳ್ಳುವ ದ.ಕ. ಜಿಲ್ಲೆಯ ಪೆರ್ಮುದೆ ಗ್ರಾಮದ, ಬಜಪೆ ಹಾಗೂ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಗೊಳಪಡುವ ಈ ಸಾವಿರಾರು ಎಕರೆ ಪ್ರದೇಶದಲ್ಲಿರುವ ಈ ಮಂಗಳೂರು ವಿಶೇಷ ಆರ್ಥಿಕ ವಲಯ (ಎಂಎಸ್‌ಇಝೆಡ್) ಅನ್ಯ ಜಗತ್ತಾಗಿಯೇ ಗುರುತಿಸಿಕೊಂಡಿದೆ. ಸ್ಥಳೀಯರು, ಪರಿಸರವಾದಿಗಳ ಹೋರಾಟದ ಹೊರತಾಗಿಯೂ ಸಾವಿರಾರು ಎಕರೆ ಭೂಸ್ವಾಧೀನದೊಂದಿಗೆ ನೆಲೆ ಕಂಡಿರುವ ಕಂಡಿರುವ ಈ ಎಂಎಸ್‌ಇಝೆಡ್‌ನಲ್ಲಿ ಕಾರ್ಯಾಚರಿಸುತ್ತಿರುವ ಕೆಲವೇ ಕೆಲವು ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವವರು ಬಹುತೇಕರು ಹೊರ ರಾಜ್ಯಗಳವರು. ಪಶ್ಚಿಮ ಬಂಗಾಲ, ಜಾರ್ಖಂಡ್, ಬಿಹಾರ, ಒರಿಸ್ಸಾ ಮೊದಲಾದ ರಾಜ್ಯಗಳ ಯುವಕರು ಇಲ್ಲಿ ಕಾರ್ಮಿಕರಾಗಿ ಜೀತದಾಳುಗಳಾಗಿ ದುಡಿಯುತ್ತಿದ್ದಾರೆ. ದಿನದ 12ರಿಂದ 18 ಗಂಟೆಯವರೆಗೆ ಕಾರ್ಖಾನೆಗಳಲ್ಲಿ ದುಡಿಸಿಕೊಂಡು ಮಾಸಿಕ 12000 ರೂ.ನಿಂದ 20000 ರೂ.ವರೆಗೆ ಮಾತ್ರ ಇವರಿಗೆ ವೇತನವನ್ನು ನೀಡಲಾಗುತ್ತದೆ ಎಂಬ ಮಾಹಿತಿಯೂ ಇದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News